ಸೋಲಿಗೆ ಕಣ್ಣೀರಿಟ್ಟು, ಮಂಡಿಯೂರಿ ನಮಿಸಿದರು

7

ಸೋಲಿಗೆ ಕಣ್ಣೀರಿಟ್ಟು, ಮಂಡಿಯೂರಿ ನಮಿಸಿದರು

Published:
Updated:

ಮೈಸೂರು: ‘ನನ್ನಿಂದ ತಮ್ಮ ಬೇಡಿಕೆ ಗಳನ್ನು ಈಡೇರಿಸಿಕೊಂಡ ಶಿಕ್ಷಕರೇ ನನಗೆ ಮತ ನೀಡದೆ ದ್ರೋಹ ಬಗೆದರು’ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್‌ ಗುರು ವಾರ ಭಾವುಕರಾಗಿ ಕಣ್ಣೀರು ಹಾಕಿದರು.

‘ನನಗೆ ಮತ ನೀಡಿದ, ನೀಡದ ಎಲ್ಲರಿಗೂ ವಂದಿಸುತ್ತೇನೆ’ ಎಂದು ದುಃಖಿಸುತ್ತಾ ಪತ್ರಿಕಾಗೋಷ್ಠಿಯಲ್ಲಿ ಮಂಡಿಯೂರಿ ನಮಿಸಿದರು. ‘ಸುಮ್ಮನೆ ಇದ್ದಿದ್ದರೆ, ಹೆಂಡತಿ– ಮಕ್ಕಳು ಬೀದಿಪಾಲು ಆಗುತ್ತಿರಲಿಲ್ಲ. ಶಿಕ್ಷಕರಾದವರು ಜಾತಿ ಆಧಾರದ ಮೇಲೆ, ಆಮಿಷಗಳಿಗೆ ಒಳಗಾಗಿ ಮತ ಹಾಕಿರುವುದು ನೋವು ತಂದಿದೆ. ಚುನಾವಣೆ ಮರೆತು, ನನ್ನ ಜೀವನ ರೂಪಿಸಿಕೊಳ್ಳಬೇಕೆಂದು ತೀರ್ಮಾನಿ ಸಿದ್ದೇನೆ’ ಎಂದು ಹೇಳಿದರು.

‘ಮೈಸೂರು ಗ್ರಾಮಾಂತರ, ಮಂಡ್ಯ, ಹಾಸನ ಜಿಲ್ಲೆಯ ಶಿಕ್ಷಕರು ಮತ ನೀಡಿದ್ದಾರೆ. ಆದರೆ ಮೈಸೂರು ನಗರದ ಶಿಕ್ಷಕರು ನನ್ನನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅವರ ಪರವಾಗಿಯೂ ನಾನು ಸಾಕಷ್ಟು ಹೋರಾಡಿದ್ದೇನೆ’ ಎಂದರು.

‘ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ. ಮತ್ತೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮೈಸೂರು ನಗರದ ಶಿಕ್ಷಕರು ಎರಡನೇ ಪ್ರಾಶಸ್ತ್ಯದ ಮತವನ್ನು ನೀಡದಿರುವುದು ಅನುಮಾನಕ್ಕೆ ಎಡೆಮಾಡಿದೆ. ರಾಜಕೀಯಕ್ಕೆ ಬಂದು ಆಸ್ತಿ, ಮನೆ, ಮಡದಿಯ ಒಡವೆಗಳನ್ನು ಕಳೆದುಕೊಂಡು ಜೀವನ ನಡೆಸುವಂತಹ ದುಃಸ್ಥಿತಿಗೆ ಬಂದಿದ್ದೇನೆ’ ಎಂದು ನೊಂದು ನುಡಿದರು.

ಚಾಮರಾಜ ವಿಧಾನಸಭೆ ಕ್ಷೇತ್ರ, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ದಿಂದ ಸ್ಪರ್ಧಿಸಿ ಲಕ್ಷ್ಮಣ್‌ ಸೋಲು ಕಂಡಿದ್ದರು. ಈಗ ನಾಲ್ಕನೇ ಬಾರಿಗೆ ಪರಾಜಿತರಾಗಿದ್ದಾರೆ.

ಹೋರಾಟ ಮುಂದುವರೆಸುವೆ: ಮತ್ತೆ ಚುನಾವಣೆಗೆ ಸ್ಪರ್ಧಿಸದಿದ್ದರೂ ಶಿಕ್ಷಕರ ಪರವಾದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಂ.ಲಕ್ಷ್ಮಣ್‌ ಹೇಳಿದರು.

‘ಜೆಡಿಎಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಘೋಷಿಸಿದ್ದ ಶಿಕ್ಷಕರ ಪರವಾದ ಆಶ್ವಾಸನೆಗಳನ್ನು ಸರ್ಕಾರ ಈಡೇರಿಸಬೇಕು. ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನವನ್ನು ನೀಡಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜೆಡಿಎಸ್ ಏಕಮುಖವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಹಾಗೇ ನಾದರೂ ತೆಗೆದುಕೊಂಡರೆ ಹೋರಾಟ ನಡೆಸಿ ಶಿಕ್ಷಕರ ಹಿತ ಕಾಪಾಡುವೆ. ನನಗೆ ಕಾಂಗ್ರೆಸ್‌ ಮುಖಂಡರಾದ ಕೆ.ವೆಂಕಟೇಶ್ ಹಾಗೂ ಎಚ್.ಪಿ.ಮಂಜುನಾಥ್‌ ಚುನಾವಣೆಯಲ್ಲಿ ಆರ್ಥಿಕ ನೆರವು ನೀಡಿದರು. ಪಕ್ಷದ ಕಾರ್ಯಕರ್ತರು ಪ್ರಚಾರದಲ್ಲಿ ಸ್ಪಂದಿಸಿದರು. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry