ಭಾನುವಾರ, ಮೇ 9, 2021
18 °C
ಚೀನಾದಲ್ಲಿ ಕಂಡುಬಂದಿರುವ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಹೊಳಪು ತಂದಿದೆ

ಚೀನಾದಲ್ಲಿ ಐಷಾರಾಮಿ ಉತ್ಪನ್ನಗಳ ರಾಜನಡಿಗೆ

ಎಲಿಜಬೆತ್ ಪ್ಯಾಟನ್, ಸುಯ್–ಲೀ ವೀ Updated:

ಅಕ್ಷರ ಗಾತ್ರ : | |

ಚೀನಾದಲ್ಲಿ ಐಷಾರಾಮಿ ಉತ್ಪನ್ನಗಳ ರಾಜನಡಿಗೆ

ಹಲವು ವರ್ಷಗಳಿಂದ ತೀರಾ ಮಂದಗತಿಯಲ್ಲಿದ್ದ ಚೀನಾದ ಐಷಾರಾಮಿ ವಸ್ತುಗಳ ಮಾರುಕಟ್ಟೆಯು ಬೆಳವಣಿಗೆಯ ಹಾದಿಗೆ ಕೊನೆಗೂ ಮರಳುತ್ತಿದೆ. ಚೀನಾದಲ್ಲಿನ ದುಬಾರಿ ವಸ್ತುಗಳ ಅಂಗಡಿಗಳನ್ನು ಇಣುಕಿ ನೋಡಿದಾಗ ನಿಮಗೆ ಇದು ಬಹುಶಃ ಗೊತ್ತಾಗಲಿಕ್ಕಿಲ್ಲ. ಆ ಅಂಗಡಿಗಳು ಬಹುತೇಕ ಖಾಲಿ ಹೊಡೆಯುತ್ತಿವೆ.

ಚೀನಾ ಸಾಧಿಸಿದ ತೀವ್ರಗತಿಯ ಬೆಳವಣಿಗೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಐಷಾರಾಮಿ ಉತ್ಪನ್ನಗಳ ಕಂಪನಿಗಳು ವರ್ಷಗಳಿಂದಲೂ ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬಳಸಿಕೊಂಡಿವೆ. ಚೀನಾ ಕಂಡ ಅಪಾಯಕಾರಿ ಎಂಬಂತಹ ವೇಗದ ಆರ್ಥಿಕ ಬೆಳವಣಿಗೆಯು ಶ್ರೀಮಂತ ಗ್ರಾಹಕರ ಸಮೂಹವನ್ನೇ ಸೃಷ್ಟಿಸಿತು. ಈ ಗ್ರಾಹಕರು ತಮ್ಮ ಹೊಸ ಸ್ಥಾನಮಾನವನ್ನು ಬೇರೆಯವರ ಎದುರು ಪ್ರದರ್ಶಿಸುವ ಮನಸ್ಸು ಉಳ್ಳವರು.

ಇವರಲ್ಲಿ ಹಲವರು ಬೇರೆ ದೇಶಗಳಿಗೆ ಹೋಗಿ ದುಬಾರಿ ಬೆಲೆಯ ಕೈಚೀಲ, ಕಣ್ಣು ಕುಕ್ಕುವ ವಾಚುಗಳನ್ನು ಲಂಡನ್, ಮಿಲಾನ್, ಪ್ಯಾರಿಸ್‌ನಂತಹ ನಗರಗಳಲ್ಲಿ ಖರೀದಿಸುತ್ತಿದ್ದರು.

ಆದರೆ, ಐಷಾರಾಮಿ ವಸ್ತುಗಳ ಮಾರಾಟಗಾರರು ತಮ್ಮ ಮಾರುಕಟ್ಟೆ ಗಟ್ಟಿ ಮಾಡಿಕೊಳ್ಳಲು ಮತ್ತು ಜಾಲವನ್ನು ವಿಸ್ತರಿಸಿಕೊಳ್ಳಲು ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದರೂ, ಅದು ನಿರೀಕ್ಷಿತ ಫಲ ಕೊಡಲಿಲ್ಲ.

ಚೀನಾದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಕುಸಿದಿದ್ದು ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್‌ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಅಭಿಯಾನದ ಪರಿಣಾಮವಾಗಿ, ತಮ್ಮಲ್ಲಿನ ಭಾರಿ ಪ್ರಮಾಣದ ಹಣವನ್ನು ಗ್ರಾಹಕರು ಬಹಿರಂಗವಾಗಿ ತೋರಿಸಲು ಹಿಂಜರಿಯಲಾರಂಭಿಸಿದರು.

ಈ ಪರಿಸ್ಥಿತಿ ಈಗ ಬದಲಾಗುತ್ತಿದೆ. ಬೈನ್‌ ಅಂಡ್‌ ಕಂಪನಿ ಎನ್ನುವ ಸಲಹಾ ಸಂಸ್ಥೆ ನೀಡಿರುವ ವರದಿಯ ಅನ್ವಯ, ಚೀನಾದಲ್ಲಿ ಐಷಾರಾಮಿ ವಸ್ತುಗಳ ಮಾರಾಟದ ಪ್ರಮಾಣವು ಈ ವರ್ಷ ಶೇಕಡ 20ರಿಂದ 22ರಷ್ಟು ಬೆಳವಣಿಗೆ ಕಾಣಲಿದೆ.

ಜಾಗತಿಕ ಮಟ್ಟದಲ್ಲಿ ಐಷಾರಾಮಿ ವಸ್ತುಗಳ ಮಾರುಕಟ್ಟೆಯ ಪಕ್ಷಿನೋಟದ ರೀತಿಯಲ್ಲಿ ಈ ಅಧ್ಯಯನ ವರದಿಯನ್ನು ಕಾಣಲಾಗುತ್ತದೆ. ಚೀನಾದ ಐಷಾರಾಮಿ ಮಾರುಕಟ್ಟೆ ಕಾಣಲಿರುವ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಕೂಡ ಐಷಾರಾಮಿ ವಸ್ತುಗಳ ಮಾರಾಟದಲ್ಲಿ ಶೇಕಡ 8ರಷ್ಟರವರೆಗಿನ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.

ಹೀಗಿದ್ದರೂ ಬೀಜಿಂಗ್‌, ಶಾಂಘೈ ಮತ್ತು ಚೀನಾದ ಇತರ ನಗರಗಳ ಬೀದಿಗಳಲ್ಲಿ ಐಷಾರಾಮಿ ವಸ್ತುಗಳ ಖರೀದಿದಾರರನ್ನು ಕಾಣುವುದು ಕಷ್ಟದ ಕೆಲಸವೇ ಸರಿ. ಇದಕ್ಕೆ ಒಂದು ಕಾರಣ ಇದೆ. ಐಷಾರಾಮಿ ವಸ್ತುಗಳ ಖರೀದಿ ನಡೆಯುವ ಸ್ವರೂಪದಲ್ಲಿ ಬದಲಾವಣೆ ತರುವ ಪ್ರಕ್ರಿಯೆಗೆ ಚೀನಾ ದೇಶವೇ ನಾಯಕನ ಸ್ಥಾನದಲ್ಲಿ ನಿಂತಿದೆ. ಇದಕ್ಕೆ ಉದಾಹರಣೆಯಾಗಿ ತಾಯ್ಕೂ ಲಿ ಶಾಪಿಂಗ್‌ ಕೇಂದ್ರವನ್ನು ಪರಿಗಣಿಸಬಹುದು.

ಚೀನಾದ ಗ್ರಾಹಕರ ಶಕ್ತಿ ಹೆಚ್ಚುತ್ತಿರುವುದಕ್ಕೆ ಸಾಕ್ಷ್ಯ ಇದು ಎಂದು ಮತ್ತೆ ಮತ್ತೆ ಈ ಕೇಂದ್ರದ ಬಗ್ಗೆ ಹೇಳಲಾಗುತ್ತದೆ. ಬೀಜಿಂಗ್‌ನ ಗಿಜಿಗುಡುವ ಮಾರುಕಟ್ಟೆ ಪ್ರದೇಶದಲ್ಲಿ ಇರುವ ಈ ಕೇಂದ್ರದ 19 ಕಟ್ಟಡಗಳು ವಿಶ್ವದ ಕೆಲವು ಅತಿದೊಡ್ಡ ಬ್ರ್ಯಾಂಡ್‌ಗಳ ಮಳಿಗೆಗಳಿಗೆ ನೆರಳು ಕೊಟ್ಟಿವೆ.

ವರ್ಸಾಚೆ, ಬಲೆನ್ಸಿಯಾಗಾ ಹಾಗೂ ಎರಡು ಅಂತಸ್ತುಗಳ ಆ್ಯಪಲ್‌ ಸ್ಟೋರ್‌ ಕೂಡ ಇದರಲ್ಲಿ ಸೇರಿವೆ. ಐ–ಫೋನ್‌ ಬಿಡುಗಡೆ ಕಾರ್ಯಕ್ರಮ ಸರಿಯಾಗಿ ಆಗಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಗ್ರಾಹಕರು ಈ ಆ್ಯಪಲ್‌ ಸ್ಟೋರ್‌ ಮೇಲೆ ಮೊಟ್ಟೆಗಳನ್ನು ಎಸೆದ ನಿದರ್ಶನವೂ ಇದೆ.

ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ಇಲ್ಲಿನ ಯಾವುದೇ ಅಂಗಡಿಯಲ್ಲಿ ಆ ವಸ್ತುಗಳನ್ನು ಖರೀದಿ ಮಾಡಬಹುದಾದ ಗ್ರಾಹಕ ಕಾಣಿಸುವುದು ಕೂಡ ತೀರಾ ಅಪರೂಪ. ಅತ್ತಿತ್ತ ಸುತ್ತಾಡುವುದು, ಮುಂದಿನ ಕಿಟಕಿಯ ಮೂಲಕ ಇಣುಕಿ ನೋಡುವುದನ್ನು ಹೊರತುಪಡಿಸಿದರೆ ಅಲ್ಲಿನ ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಕೆಲಸ ಇಲ್ಲ.

ಐಷಾರಾಮಿ ವಸ್ತುಗಳ ಮೋಹ ಇರುವ ಚೀನೀಯರು ಈಗೀಗ ತಮಗೆ ಬೇಕಿರುವುದನ್ನು ಬೇರೆಡೆಗಳಿಂದ ಖರೀದಿಸುತ್ತಿದ್ದಾರೆ – ಆನ್‌ಲೈನ್‌ ಮೂಲಕ ಖರೀದಿಸುವುದು ಹೆಚ್ಚಾಗುತ್ತಿದೆ. ಎಲ್‌ವಿಎಂಎಚ್‌, ಕೆರಿಂಗ್‌ನಂತಹ ಕಂಪನಿಗಳು ಭೌತಿಕ ಅಂಗಡಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿವೆ.

ಅಂಗಡಿಗಳಿಗೆ ಭೇಟಿ ನೀಡಿ, ಅಲ್ಲಿನವರ ಜೊತೆ ಮಾತನಾಡಿ ವಸ್ತುಗಳನ್ನು ಖರೀದಿ ಮಾಡುವ ಗ್ರಾಹಕರ ಅಗತ್ಯಗಳನ್ನು ಪೂರೈಸುವುದು ಇಂತಹ ಕಂಪನಿಗಳ ಗುರಿ. ಆದರೆ, ಚೀನಾದ ಗ್ರಾಹಕರು ಯುವಕರೂ, ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತರಾದವರೂ ಆಗಿದ್ದಾರೆ.

ಡಿಜಿಟಲ್‌ ಮಾಧ್ಯಮದ ಮೂಲಕ ಶಾಪಿಂಗ್‌ ಮಾಡುವುದನ್ನು ಅವರು ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ. ಚೀನೀಯರು ನಡೆಸುವ ಡಿಜಿಟಲ್‌ ಶಾಪಿಂಗ್‌ನ ಬಗೆ, ಯುರೋಪ್‌ ಅಥವಾ ಉತ್ತರ ಅಮೆರಿಕದ ಗ್ರಾಹಕರು ನಡೆಸುವ ಡಿಜಿಟಲ್‌ ಶಾಪಿಂಗ್‌ಗಿಂತ ಬೇರೆಯದೇ ಆಗಿದೆ. ಹಾಗೆಯೇ, ಚೀನೀ ಗ್ರಾಹಕರಿಗೆ ತಾವು ಖರೀದಿಸಲು ಇಚ್ಛಿಸಿರುವ ವಸ್ತುವಿನ ಬೆಲೆ ಬೇರೆ ಬೇರೆ ಕಡೆ ಎಷ್ಟೆಷ್ಟು ಇದೆ ಎಂಬುದು ಚೆನ್ನಾಗಿ ಗೊತ್ತಿದೆ.

ಇದರ ಪರಿಣಾಮವಾಗಿ ಐಷಾರಾಮಿ ಉತ್ಪನ್ನಗಳ ಕಂಪನಿಗಳು ಚೀನಾದಲ್ಲಿ ಮಾರಾಟವಾಗುವ ತಮ್ಮ ಉತ್ಪನ್ನಗಳ ಬೆಲೆ ನಿಗದಿಯ ತಂತ್ರಗಾರಿಕೆಯಲ್ಲಿ ಬದಲಾವಣೆ ತಂದುಕೊಂಡಿವೆ. ಸ್ಥಳೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅವು ಕೆಲಸ ಮಾಡಿವೆ.

ಈ ಕಂಪನಿಗಳು ತಮ್ಮ ಗ್ರಾಹಕರ ಜೊತೆ ‘ವಿ–ಚಾಟ್‌’ ಆ್ಯಪ್‌ ಮೂಲಕವೂ ಸಂವಹನ ನಡೆಸುತ್ತಿವೆ, ಸರ್ವವ್ಯಾಪಿ ಆಗಿರುವ ಈ ಆ್ಯಪ್‌ಅನ್ನು ಶಾಪಿಂಗ್‌ ಉದ್ದೇಶಕ್ಕೆ ಬಳಸುವುದು ಹೆಚ್ಚುತ್ತಲೂ ಇದೆ. ಅವು ಸ್ಥಳೀಯ ಸೆಲೆಬ್ರಿಟಿಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿವೆ, ಹಳೆಯ ಕಾಲದ ಖರೀದಿ ಅನುಭವವನ್ನು ನೆನಪಿಸುವ ರೀತಿಯಲ್ಲಿ ಐಷಾರಾಮಿ ಉತ್ಪನ್ನಗಳನ್ನು ವಿಶೇಷ ಕಾಳಜಿಯೊಂದಿಗೆ ಗ್ರಾಹಕರಿಗೆ ತಲುಪಿಸುವ ಹೆಚ್ಚುವರಿ ಕಾರ್ಯವನ್ನೂ ಅವು ಮಾಡುತ್ತಿವೆ.

‘ಚೀನಾದಲ್ಲಿನ ಐಷಾರಾಮಿ ಉತ್ಪನ್ನಗಳ ಗ್ರಾಹಕರು ತರುಣರು, ಫ್ಯಾಷನ್‌ ಬಗ್ಗೆ ಹೆಚ್ಚು ಒಲವು ಹೊಂದಿರುವವರು ಮತ್ತು ತಾವು ಕೊಡುತ್ತಿರುವ ಹಣ ಹಾಗೂ ತಾವು ಪಡೆದುಕೊಳ್ಳುವ ವಸ್ತುವಿನ ಮೌಲ್ಯದ ನಡುವಿನ ಸಂಬಂಧದ ಬಗ್ಗೆ ಅರಿವು ಹೊಂದಿರುವವರು’ ಎನ್ನುತ್ತಾರೆ ಈ ಲೇಖನದ ಆರಂಭದಲ್ಲಿ ಹೇಳಿರುವ ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಕ್ಲಾಡಿಯಾ ಡಿ’ಅರ್ಪಿಜಿಯೊ.

ಅವರು ಹೇಳುವ ಪ್ರಕಾರ, ‘ಐಷಾರಾಮಿ ಉತ್ಪನ್ನಗಳ ಮಾರಾಟದ ವಿಚಾರದಲ್ಲಿ ಅಳವಡಿಸಿಕೊಂಡ ತಂತ್ರಗಾರಿಕೆಗಳು ಫಲ ಕೊಡಲು ಆರಂಭಿಸಿವೆ. ಚೀನಾದ ಪ್ರಮುಖ ಮಾರುಕಟ್ಟೆಗಳಲ್ಲಿ ಅದು ಗೊತ್ತಾಗುತ್ತಿದೆ’. ಈ ವರ್ಷದಲ್ಲಿ ಇದುವರೆಗೆ ಕಂಡುಬಂದಿರುವ ಮಾರಾಟದ ಬೆಳವಣಿಗೆಯ ಬಹುಪಾಲು ಚೀನಾದ ಗ್ರಾಹಕರಿಂದ ಆಗಿದೆ ಎಂದು ಅವರು ಹೇಳುತ್ತಾರೆ.

ಈ ಉತ್ಪನ್ನಗಳ ಮಾರಾಟ ಹೆಚ್ಚಾಗಿರುವಲ್ಲಿ ಚೀನಾ ಸರ್ಕಾರದ ಸಹಾಯ ಕೂಡ ಕೆಲಸ ಮಾಡಿದೆ. ಚೀನೀಯರು ತಮ್ಮ ಹಣವನ್ನು ವಿದೇಶಗಳಲ್ಲಿ ವಿನಿಯೋಗಿಸುವುದನ್ನು ಕಠಿಣವಾಗಿಸುವ ಉದ್ದೇಶದಿಂದ ಸರ್ಕಾರ 2016ರಲ್ಲಿ ಜಾರಿಗೆ ತಂದ ನಿಯಮಗಳ ಕಾರಣದಿಂದಾಗಿ, ಬಹಳಷ್ಟು ಜನ ತಮ್ಮ ದೇಶದಲ್ಲೇ ಹಣ ಖರ್ಚು ಮಾಡುವ ದಾರಿಗಳನ್ನು ಹುಡುಕಿಕೊಂಡರು.

ಚೀನಾದಲ್ಲಿರುವ ಗ್ರಾಹಕರಿಗೆ ಐಷಾರಾಮಿ ವಸ್ತುಗಳನ್ನು ಬೇರೆ ದೇಶಗಳಲ್ಲಿ ಖರೀದಿ ಮಾಡಿಕೊಡುವ (ಇದಕ್ಕೆ ನಿರ್ದಿಷ್ಟ ಶುಲ್ಕ ಪಡೆಯಲಾಗುತ್ತದೆ) ವ್ಯವಸ್ಥೆಯ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿತು. ಹಾಗೆಯೇ, ಗ್ರಾಹಕ ಬಳಕೆಯ ಅಂದಾಜು ಇನ್ನೂರು ವಸ್ತುಗಳ ಮೇಲಿನ ಆಮದು ಶುಲ್ಕವನ್ನು ಕಳೆದ ಡಿಸೆಂಬರ್‌ನಲ್ಲಿ ಕಡಿಮೆ ಮಾಡಲಾಯಿತು.

‘ಚೀನಾದ ಗ್ರಾಹಕರು ಉತ್ತಮ ಕೊಡುಗೆಗಳನ್ನು ಅರಸಿಕೊಂಡು ಯುರೋಪಿಗೆ ಹೋಗುವ, ಅಲ್ಲಿ ತಮಗೆ ಬೇಕಿರುವುದನ್ನು ಖರೀದಿಸುವ ಕಾಲವೊಂದು ಇತ್ತು. ಅದು ಈಗ ಬದಲಾಗಿದೆ. ಈಗ ಚೀನೀಯರಲ್ಲಿ ಹೆಚ್ಚು ಜನ ಆನ್‌ಲೈನ್‌ ಮೂಲಕ ಖರೀದಿ ಮಾಡಲು ಬಯಸುತ್ತಾರೆ. ಹಾಗೆಯೇ, ಚೀನಾಕ್ಕೆ ಹತ್ತಿರದಲ್ಲಿ ಇರುವ ಹಾಂಕಾಂಗ್‌, ಜಪಾನ್‌ ಅಥವಾ ದಕ್ಷಿಣ ಕೊರಿಯಾ ದೇಶಗಳಿಗೆ ಹೋಗಿ ಖರೀದಿ ಮಾಡಲು ಇಷ್ಟಪಡುತ್ತಾರೆ’ ಎಂದು ಡಿ’ಅರ್ಪಿಜಿಯೊ ಹೇಳಿದರು.

ಒಟ್ಟಾರೆಯಾಗಿ ಹೇಳುವುದಿದ್ದರೆ, ಚೀನಾದಲ್ಲಿ ಕಂಡುಬಂದಿರುವ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಐಷಾರಾಮಿ ವಸ್ತುಗಳ ಮಾರುಕಟ್ಟೆಯಲ್ಲಿ ಹೊಸ ಹೊಳಪು ತಂದಿದೆ. ಇದು ವಿವಿಧ ಕಂಪನಿಗಳ ವರದಿಗಳಲ್ಲಿ ಗೊತ್ತಾಗುತ್ತಿದೆ. ಎಲ್‌ವಿಎಂಎಚ್‌ನಂತಹ ಕಂಪನಿಗಳು ಈ ವರ್ಷ ಉತ್ತಮ ಬೆಳವಣಿಗೆ ದಾಖಲಿಸಿವೆ. ಅವುಗಳ ಮಾರುಕಟ್ಟೆ ಬೆಳೆದಿರುವುದಕ್ಕೆ ಕಾರಣ ಬೆಲೆ ಏರಿಕೆ ಮಾತ್ರವೇ ಆಗಿರದೆ, ಮಾರಾಟದ ಪ್ರಮಾಣ ಕೂಡ ಹೆಚ್ಚಾಗಿದೆ.

ಚೀನಾ ಹೊರತು‍ಪಡಿಸಿದರೆ, ಈ ವರದಿಯಲ್ಲಿ ಅಮೆರಿಕದ ಬಗ್ಗೆಯೂ ಉಲ್ಲೇಖ ಇದೆ. ಡಾಲರ್‌ ಮೌಲ್ಯ ಕಡಿಮೆ ಇರುವುದು ಅಮೆರಿಕಕ್ಕೆ ಹೋಗುವ ಪ್ರವಾಸಿಗರಲ್ಲಿ ಖರೀದಿ ಪ್ರವೃತ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಚೀನಾ ಹೊರತುಪಡಿಸಿ, ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಕೂಡ ಶೇಕಡ 9ರಿಂದ 11ರಷ್ಟು ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ.

ಐಷಾರಾಮಿ ಉತ್ಪನ್ನಗಳ ಮಾರಾಟ ತೊಂದರೆ ಎದುರಿಸುವ ಸಾಧ್ಯತೆ ಇರುವುದು ದೊಡ್ಡ ಮಾರುಕಟ್ಟೆಗಳ ಪೈಕಿ ಯುರೋಪ್‌ನಲ್ಲಿ ಮಾತ್ರ. ಯೂರೊ ಮೌಲ್ಯ ಹೆಚ್ಚಿರುವುದು ಅಲ್ಲಿಗೆ ಹೋಗುವ ಪ್ರವಾಸಿಗರ ಖರೀದಿ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮ ಉಂಟುಮಾಡಬಹುದು.

ಚೀನಾದಲ್ಲಿ ಆಗಿರುವಂತೆಯೇ, ಯುವ ಹಾಗೂ ತಂತ್ರಜ್ಞಾನವನ್ನು ಅಪ್ಪಿಕೊಂಡಿರುವ ಗ್ರಾಹಕರನ್ನು ಗುರಿಯಾಗಿಸಿಕೊಳ್ಳುವುದರಲ್ಲಿ ಐಷಾರಾಮಿ ಉತ್ಪನ್ನಗಳ ಕಂಪನಿಗಳ ಯಶಸ್ಸು ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ನಿರ್ದಿಷ್ಟ ಗುಂಪಿನ ಗ್ರಾಹಕರನ್ನು ಗುರಿಯಾಗಿಸಿಕೊಂಡು ಮಾರಾಟ ಕಾರ್ಯತಂತ್ರ ಹೆಣೆದಾಗ ಗ್ರಾಹಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ’ ಎಂದು ಫೆಡೆರಿಕಾ ಲೆವಾಟೊ ಹೇಳಿದರು. ಇವರು ಕೂಡ ಈ ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವರು. ‘ಈಗ ಅತ್ಯುತ್ತಮ ಸಾಧನೆ ತೋರುತ್ತಿರುವ ಬ್ರ್ಯಾಂಡ್‌ಗಳು ನಾಳಿನ ಗ್ರಾಹಕರ ಮನಸ್ಸನ್ನು ಗೆಲ್ಲುತ್ತವೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.