ಚಿತ್ರಾವತಿ ನದಿ ಪಾತ್ರದಲ್ಲಿ ಒತ್ತುವರಿ

7
ನದಿ ಮೇಲ್ಸೇತುವೆ ಬಳಿ ಕೆಲ ಪ್ರಭಾವಿ ವ್ಯಕ್ತಿಗಳಿಂದ ಜಾಗ ಕಬಳಿಸುವ ಹುನ್ನಾರ, ಅಧಿಕಾರಿಗಳ ನಿರಾಸಕ್ತಿಗೆ ಅಸಮಾಧಾನ

ಚಿತ್ರಾವತಿ ನದಿ ಪಾತ್ರದಲ್ಲಿ ಒತ್ತುವರಿ

Published:
Updated:
ಚಿತ್ರಾವತಿ ನದಿ ಪಾತ್ರದಲ್ಲಿ ಒತ್ತುವರಿ

ಬಾಗೇಪಲ್ಲಿ: ಪಟ್ಟಣದ ಚಿತ್ರಾವತಿ ನದಿಯ ಮೇಲ್ಸೇತುವೆ ಬಳಿ ನದಿ ಪಾತ್ರವನ್ನು ಕೆಲವರು ಮಣ್ಣು, ಕಲ್ಲುಗಳನ್ನು ಸುರಿದು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟು ಮಾಡಿದೆ.

ನಂದಿಗಿರಿಧಾಮದಲ್ಲಿ ಹುಟ್ಟುವ ಚಿತ್ರಾವತಿ ಸೋಮೇನಹಳ್ಳಿ, ವರ್ಲ ಕೊಂಡ, ಪರಗೋಡು, ಬಾಗೇಪಲ್ಲಿ ಮೂಲಕ ಹರಿದು ನೆರೆಯ ಆಂಧ್ರಪ್ರದೇ ಶದ ಬುಕ್ಕಾಪಟ್ಟಣ ಕೆರೆ ಸೇರುತ್ತದೆ. ಈ ನದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಸಿವಿಲ್ ನ್ಯಾಯಾಲಯದ ಸಮೀಪ ಮೇಲ್ಸೇತುವೆ ನಿರ್ಮಿಸಲಾಗಿದೆ.

ಇದೀಗ ಈ ಮೇಲ್ಸೇತುವೆ ಬಳಿ ಕೆಲ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲ ರಿಯಲ್ ಎಸ್ಟೇಟ್ ಉದ್ಯಮದ ಮಧ್ಯವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ವ್ಯಕ್ತಿಗಳಿಗೆ ಮಾರಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಹರಿದಾಡುತ್ತಿವೆ.

ಬೀದಿ ಬದಿಯ ವ್ಯಾಪಾರಿಗಳ ಸೋಗಿನಲ್ಲಿ ನದಿ ಪಾತ್ರದ ಅಂಚನ್ನು ಒತ್ತುವರಿ ಮಾಡಿಕೊಳ್ಳುತ್ತಿರುವವರು ಒತ್ತುವರಿ ಜಾಗದಲ್ಲಿ ಮನೆಗಳನ್ನು ಕಟ್ಟಿ ಅವುಗಳನ್ನು ಬೇರೆಯವರಿಗೆ ಮಾರಿ ಹಣ ಮಾಡಿಕೊಳ್ಳುವ ದಂಧೆಗಿಳಿದಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮತ್ತೊಂದಡೆ ಚಿತ್ರಾವತಿ ನದಿ ಪಾತ್ರದಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ಗಿಡ-ಗಂಟಿಗಳು ಬೆಳೆದಿದ್ದು, ನೀರಿನ ಸರಾಗ ಹರಿವಿಗೆ ಜಾಗವಿಲ್ಲದಂತಾಗಿ ತ್ಯಾಜ್ಯ ಮಡುಗಟ್ಟಿ ನಿಲ್ಲುತ್ತಿದೆ. ಇದರಿಂದ ನದಿಗುಂಟ ಸೊಳ್ಳೆಗಳ ಹಾವಳಿ ಹೆಚ್ಚುತ್ತಿರುವ ಜತೆಗೆ ವಿಷಜಂತುಗಳ ಉಪಟಳ ಜನರಲ್ಲಿ ಭೀತಿ ಮೂಡಿಸುತ್ತಿದೆ.

‘ಪಟ್ಟಣದ ಕೆಲ ವರ್ತಕರಂತೂ ನದಿಯನ್ನು ತ್ಯಾಜ್ಯದ ತೊಟ್ಟಿಯನ್ನಾಗಿ ಪರಿಗಣಿಸಿದಂತಹ ಚಿತ್ರಣ ಗೋಚರಿ ಸುತ್ತಿದೆ. ಅನೇಕ ಮಾಂಸದ ಅಂಗಡಿಗಳ ಮಾಲೀಕರು ಅಂಗಡಿಯನ್ನು ತ್ಯಾಜ್ಯ ವನ್ನೆಲ್ಲ ತಂದು ನದಿಯಲ್ಲಿ ಬಿಸಾಡುವ ಪ್ರವೃತ್ತಿ ಹೆಚ್ಚಿದ್ದು, ಇದರಿಂದ ಪಟ್ಟಣದಲ್ಲಿ ದಿನೇ ದಿನೇ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ’ ಎಂದು ಪಟ್ಟಣದ ನಿವಾಸಿ ಪಿ.ಎಸ್.ರಮೇಶ್ ಆರೋಪಿಸಿದರು.

‘ಹಿಂದಿನ ಕಾಲದಲ್ಲಿ ಜನರು ಸಾಂಪ್ರದಾಯಕ ಜಲಮೂಲಗಳಾದ ನದಿ, ಕೆರೆ, ಕುಂಟೆ, ಕಾಲುವೆಗಳ ಹೂಳು ತೆಗೆಸಿ ಸ್ವಚ್ಛವಾಗಿಡುತ್ತಿದ್ದರು. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಕೆರೆ-ಕುಂಟೆ, ನದಿ ಯಾವುದೂ ಸಾಲುತ್ತಿಲ್ಲ. ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಹಿಂದೆ ಸ್ವಚ್ಛವಾಗಿದ್ದ ನದಿಯನ್ನು ಇಂದು ನೋಡಿದರೆ ಹೊಟ್ಟೆ ಉರಿಯುತ್ತದೆ’ ಎಂದು ಪಟ್ಟಣದ ಹಿರಿಯ ನಾಗರಿಕ ಅಬ್ದುಲ್ ಕರೀಂ ಸಾಬ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಆಡಳಿತ, ಸಣ್ಣ ನೀರಾವರಿ ಇಲಾಖೆ, ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇನ್ನಾದರೂ ಚಿತ್ರಾವತಿ ನದಿ ಪಾತ್ರದ ಅಕ್ರಮ ಒತ್ತುವರಿ ತೆರವು, ಸ್ವಚ್ಛತೆಗೆ ಮುಂದಾಗುತ್ತಾರಾ? ತ್ಯಾಜ್ಯ ಸುರಿಯುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರಾ? ಕಾದು ನೋಡುತ್ತೇವೆ ಎಂದು ಪ್ರಜ್ಞಾವಂತ ಜನರು ಹೇಳುತ್ತಿದ್ದಾರೆ.

ದಿನೇ ದಿನೇ ನದಿ ಪಾತ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿ ತಲೆ ಕೆಡಿಸಿ ಕೊಳ್ಳದಿರುವುದು ಬೇಸರ ತಂದಿದೆ

- ಪಿ.ಎಸ್.ರಮೇಶ್, ಬಾಗೇಪಲ್ಲಿ ನಿವಾಸಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry