ಹಸಿವಿನ ಮೌಲ್ಯ, ಮಾನವೀಯತೆ ಸಾರುವ ಹಬ್ಬ

7
ರಂಜಾನ್‌: ಕುರಾನ್ ಪಠಣ, ಪ್ರಾರ್ಥನೆ, ರೋಜಾ

ಹಸಿವಿನ ಮೌಲ್ಯ, ಮಾನವೀಯತೆ ಸಾರುವ ಹಬ್ಬ

Published:
Updated:

ಚಿಕ್ಕಮಗಳೂರು: ಹಸಿವಿನ ಮೌಲ್ಯ– ದಾನದ ಆದರ್ಶ ಪ್ರತಿಪಾದಿಸುವ ಹಬ್ಬ ರಂಜಾನ್‌. ವ್ರತನಿಷ್ಠರು ಮನೆ, ಮನ, ಮಸೀದಿಗಳಲ್ಲಿ ಕುರಾನ್‌ ಪಠಣ, ಪ್ರಾರ್ಥನೆ, ರೋಜಾ (ಉಪವಾಸ) ಆಚರಿಸಿ ಶ್ರದ್ಧೆ–ಭಕ್ತಿಯಿಂದ ಈ ಮಾಸ ಆಚರಿಸಿದ್ದಾರೆ.

ರೋಜಾ ಉಪವಾಸವು ರಂಜಾನ್‌ ಹಬ್ಬದ ಭಾಗ. ಸೂರ್ಯಾಸ್ತಕ್ಕೆ ಮುಂಚೆಯೇ ಊಟ ಮಾಡಿದ ಬಳಿಕ ಸೂರ್ಯ ಮುಳುಗುವವರೆಗೂ ನೀರನ್ನೂ ಸೇವಿಸುವಂತಿಲ್ಲ. ಏಳು ವರ್ಷ ತುಂಬಿದವರು ರೋಜಾ ಮಾಡಬೇಕು. ಕುರಾನ್‌ ಪಠಣ ನಿರಂತರವಾಗಿ ಇರುತ್ತದೆ.

ಮಸೀದಿಗಳಲ್ಲಿ ದಿನದಲ್ಲಿ ಐದು ಬಾರಿ ನಮಾಜ್‌ (ಪ್ರಾರ್ಥನೆ) ಸಲ್ಲಿಸುತ್ತಾರೆ. ರಂಜಾನ್‌ ಅಂಗವಾಗಿ ತರಹೇವಾರಿ ಖಾದ್ಯಗಳು ಇರುತ್ತವೆ. ಖರ್ಜೂರ, ಸಮೋಸಾ. ಅಲೀಮಾ, ಹರೀರಾ ಹಲವು ಅರೇಬಿಯನ್ ಸಿಹಿ ತಿಂಡಿಗೆ ಮೊದಲ ಸ್ಥಾನ. ನಗರದ ಮಲ್ಲಂದೂರು ರಸ್ತೆ, ಬಸವನಹಳ್ಳಿ ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಬಾಯಿಯಲ್ಲಿ ನೀರೂರಿಸುವ ತರಹೇವಾರಿ ವಿಶೇಷ ಖಾದ್ಯಗಳ ಅಂಗಡಿಗಳು ಮೈದಳೆದಿವೆ.

ರಂಜಾನ್‌ ಮಾಸದ ಪ್ರಯುಕ್ತ ಪೆನ್ಷನ್‌ ಮೊಹಲ್ಲಾದ (ಅಯ್ಯಪ್ಪ ನಗರ) ನಸಿರುದ್ದೀನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ರೋಜಾ ಈ ಹಬ್ಬದ ವಿಶೇಷ. ಜೊತೆಗೆ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ, ಅಶಕ್ತರಿಗೆ ದಾನ (ಜಕಾತ್‌) ಮಾಡುತ್ತೇವೆ. ದಾನ ಮಾಡಿದವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

‘ಬಾದಾಮ್‌ ಹರೀರಾ, ಸಮೋಸಾ, ಖರ್ಜೂರು, ರೂಹಬ್ಸಾ, ಗಂಜಿ, ಬಿರಿಯಾನಿ, ಗೀ ರೈಸ್‌ ಮೊದಲಾದವು ರಂಜಾನ್‌ ವಿಶೇಷ ಖಾದ್ಯಗಳು, ಈ ಹಬ್ಬವು ಮಾನವೀಯತೆಯ ಸಂದೇಶ ಸಾರುವ ಹಬ್ಬ. ಉಪವಾಸ ಮಾಡುವುದು ಆರೋಗ್ಯಕ್ಕೂ ಸಹಕಾರಿ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಸಯ್ಯದ್‌ ಹನೀಫ್‌ ತಿಳಿಸಿದರು.

‘ಮಾಸ ಪೂರ್ತಿ ನಿರಂತರವಾಗಿ ಕುರಾನ್‌ ಪಠಣ (ತರಾವಿ) ಮಾಡುತ್ತೇವೆ. 30 ದಿನಗಳಲ್ಲಿ ಪೂರ್ತಿ ಪಠಣ ಮಾಡುತ್ತೇವೆ. ಶ್ರದ್ಧಾಭಕ್ತಿಯಿಂದ ದಿನದಲ್ಲಿ ಐದು ಬಾರಿ ನಮಾಜ್‌ ಮಾಡುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry