4
ಕೆ.ಆರ್‌.ನಗರ ತಾಲ್ಲೂಕಿನಲ್ಲಿ ವಿಶ್ವ ಪರಿಸರ ದಿನಾಚರಣೆ‍; ನ್ಯಾಯಾಧೀಶ ಕೆ.ಎಂ. ಬಸವರಾಜಪ್ಪ ಸಾರಥ್ಯ

332 ಶಾಲೆಗಳಲ್ಲಿ 2 ಸಾವಿರ ಸಸಿ ನಾಟಿ

Published:
Updated:
332 ಶಾಲೆಗಳಲ್ಲಿ 2 ಸಾವಿರ ಸಸಿ ನಾಟಿ

ಕೆ.ಆರ್.ನಗರ: ವಿಶ್ವ ಪರಿಸರ ದಿನದ ಅಂಗವಾಗಿ ವಿಶಿಷ್ಟವಾಗಿ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಏನಾದರೂ ಮಾಡಬೇಕು ಎಂದು ತೀರ್ಮಾನಿಸಿದ ನ್ಯಾಯಾಧೀಶರಿಗೆ ಹೊಳೆದದ್ದು ತಾಲ್ಲೂಕಿನಲ್ಲಿ 500 ಸಸಿಗಳನ್ನು ನೆಡಿಸಬೇಕು ಎಂದು. ಆದರೆ, ಆಗಿದ್ದು ಯಾರೂ ಊಹಿಸಲು ಸಾಧ್ಯವಾಗದೇ ಇರುವುದು.

ವಿಶ್ವ ಪರಿಸರ ದಿನಾಚರಣೆ ಎಂದರೆ ಎಲ್ಲ ಇಲಾಖೆ ಅಧಿಕಾರಿಗಳನ್ನು ಒಂದು ಶಾಲೆಗೆ ಕರೆಯಲಾಗುತ್ತಿತ್ತು. ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಒಂದೆರಡು ಗುಂಡಿಗಳನ್ನು ತೋಡಿಸಿ ಸಸಿ ಹಾಕಿ ನೀರು ಹಾಕಲಾಗುತ್ತಿತ್ತು. ಸಸಿಯೊಂದಿಗೆ ಎಲ್ಲರೂ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದರು. ಪರಿಸರದ ಬಗ್ಗೆ ಒಂದೆರಡು ಮಾತು. ಕೆಲವು ದಿನ ಕಳೆಯುತ್ತಿದ್ದಂತೆ ಅಲ್ಲಿ ಸಸಿ ನೆಟ್ಟಿರುವ ಬಗ್ಗೆ ಕುರುಹೂ ಇರುತ್ತಿರಲಿಲ್ಲ.

ಆದರೆ, ಈ ಬಾರಿ ಹಾಗಾಗಲಿಲ್ಲ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲು, ನೆಡಿಸಲು, ಅವುಗಳನ್ನು ಉಳಿಸಿ ಮರವಾಗಿಸಲೇಬೇಕು ಎಂಬ ನಿರ್ಧಾರಕೈಗೊಂಡವರು ಕಾನೂನು ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ.ಎಂ.ಬಸವರಾಜಪ್ಪ.

ತಾಲ್ಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ವಿಶ್ವ ಪರಿಸರ ದಿನದಂದು ಬೆಳಿಗ್ಗೆ 10ರಿಂದ 11 ಗಂಟೆಯ ಒಳಗೆ ತಾಲ್ಲೂಕಿ ನಾದ್ಯಂತ ಏಕಕಾಲದಲ್ಲಿ ಸ್ಥಳಾವಕಾಶ ಇರುವ ಕಡೆ ಸಸಿ ನೆಡಬೇಕು. ಇದಕ್ಕಾಗಿ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಬೇಕು. ಇಲ್ಲದಿದ್ದಲ್ಲಿ ಅಂತಹ ಶಾಲೆಗಳ ಮುಖ್ಯಶಿಕ್ಷಕರು ಕಾರಣ ನೀಡಬೇಕು. ಒಂದು ಶಾಲೆ, ಕಚೇರಿಯಲ್ಲಿ ಕನಿಷ್ಠ 2 ಸಸಿ ನೆಡಬೇಕು. ದೂರದ ಶಾಲೆ ಮತ್ತು ಸರ್ಕಾರಿ ಕಚೇರಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ತೆರಳಿ ಸಸಿ ವಿತರಣೆ ಮಾಡಬೇಕು ಎಂದು ಅವರು ಸೂಚನೆ ನೀಡಿದ್ದರು.

ನ್ಯಾಯಾಧೀಶರ ಸೂಚನೆಯಂತೆ ಕಾರ್ಯಪ್ರವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು, ಇಒ ಲಕ್ಷ್ಮಿ ಮೋಹನ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜೂನ್‌ 6ರಂದು ಬೆಳಿಗ್ಗೆ 10ರಿಂದ 11ಗಂಟೆಯೊಳಗೆ ತಾಲ್ಲೂಕಿನ ಒಟ್ಟು 332 ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ಇಲ್ಲಿನ ನ್ಯಾಯಾಧೀಶರ ವಸತಿಗೃಹ, ಗಾಂಧಿ ಉದ್ಯಾನ, ಮಸೀದಿ ಆವರಣ, ಹಳೆ ಯಡತೊರೆ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣ ಸೇರಿದಂತೆ ತಾಲ್ಲೂಕಿನಾದ್ಯಂತ ನಿರೀಕ್ಷೆಗಿಂತ 2ಸಾವಿರಕ್ಕೂ ಸಸಿಗಳನ್ನು ನೆಡಲಾಯಿತು.

ಸಸಿಗಳ ಪೋಷಣೆಯ ಮುತುವರ್ಜಿ ಹೊಣೆಯನ್ನು ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ವಹಿಸಲಾಗಿದೆ. ಅಲ್ಲದೇ, ಕಚೇರಿಗಳಲ್ಲೂ ನೆಟ್ಟಿರುವ ಸಸಿಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗಿದೆ.

‘ವಿಶ್ವಪರಿಸರ ದಿನಾಚರಣೆ ದಿನದಂದು ಅರಣ್ಯ ಇಲಾಖೆ ವತಿಯಿಂದ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸುಮಾರು 2,300 ವಿವಿಧ ಜಾತಿಯ ಸಸಿಗಳನ್ನು ವಿತರಣೆ ಮಾಡಲಾಗಿದ್ದು, ಅವುಗಳ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪರಿಸರಕ್ಕೆ ಪೂರಕವಾಗುವ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ, ಹಣ್ಣು ಕೊಡುವ ಸೀಬೆ, ಸಪೋಟಾ, ಗಸಗಸೆ, ನೇರಳೆ, ಹಲಸು, ಗೇರು, ಬೇವು ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ಗೌಡ ತಿಳಿಸಿದ್ದಾರೆ.

ತಂಬಾಕು ಬೇಯಿಸಲು ಪ್ರತಿನಿತ್ಯ ಸಾವಿರಾರು ಮರಗಳ ಹನನವಾಗುತ್ತಿದೆ. ಇದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಪರಿಸರ ಉಳಿಯಲು ಕಾಡಿನ ರಕ್ಷಣೆ ಅಗತ್ಯವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಅರಣ್ಯ ರಕ್ಷಣೆಗೆ ಮುಂದಾಗಬೇಕು, ಎಲ್ಲರೂ ತಲಾ ಎರಡು ಸಸಿ ನೆಡಬೇಕು ಎಂದು ಅಭಿಮತ ವ್ಯಕ್ತಪಡಿಸುತ್ತಾರೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಶ್ರೀನಾಥ್.

ನಾನು ಇಲ್ಲಿ ಇನ್ನೂ ಮೂರು ವರ್ಷ ಸೇವೆ ಸಲ್ಲಿಸಬಹುದಾಗಿದೆ. ಅಲ್ಲಿಯವರೆಗೂ ಎಷ್ಟೇ ಕಷ್ಟವಾದರೂ ಸರಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತೇನೆ

ಕೆ.ಎಂ.ಬಸವರಾಜಪ್ಪ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ

ಪಂಡಿತ್‌ ನಾಟೀಕರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry