ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: 15 ದಿನದಲ್ಲಿ ನಾಲ್ವರಲ್ಲಿ ಡೆಂಗಿ ದೃಢ

ಖಾಸಗಿ ಪ್ರಯೋಗಾಲಯಗಳಲ್ಲಿ ಮಾಮೂಲಿ ಜ್ವರಕ್ಕೆ ಡೆಂಗಿ ಬಣ್ಣ; ಆರೋಪ
Last Updated 17 ಜೂನ್ 2018, 10:47 IST
ಅಕ್ಷರ ಗಾತ್ರ

ಕಾರವಾರ: ಕೇವಲ 15 ದಿನಗಳಲ್ಲೇ ಹೊನ್ನಾವರದಲ್ಲಿ ನಾಲ್ಕು ಡೆಂಗಿ ಪ್ರಕರಣಗಳು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ವರ್ಷದ ಆರಂಭದಿಂದ ಈವರೆಗೆ ಒಟ್ಟು 30 ಶಂಕಿತ ಡೆಂಗಿ ಪ್ರಕರಣಗಳು ಇಲ್ಲಿ ಪತ್ತೆಯಾಗಿವೆ. ಎಂಟು ಮಂದಿಗೆ ಖಚಿತಗೊಂಡು ಚಿಕಿತ್ಸೆ ಮುಂದುವರಿದಿದೆ. ಇದರ ಜತೆಗೆ ಇಲ್ಲಿನ ಖಾಸಗಿ ಪ್ರಯೋಗಾಲಯಗಳಲ್ಲಿ ಮಾಮೂಲಿ ಜ್ವರವನ್ನೂ ಡೆಂಗಿ ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

‘ತೋಟದಿಂದ ಡೆಂಗಿ’: ‘ಹೊನ್ನಾವರದ ಬಳಕೂರು, ಹಾಮಕ್ಕಿ, ಮಾಗೋಡು, ಮಂಕಿಯ ಅನಂತವಾಡಿ, ಗುಣವಂತೆಗಳ ಹೆಚ್ಚಿನ ಗ್ರಾಮಸ್ಥರಿಗೆ ತೋಟವಿದೆ. ಅಲ್ಲಿ ಬೆಳೆಯುವ ಅಡಿಕೆ ಮರಗಳ ಹಾಳೆಗಳು ನೆಲಕ್ಕೆ ಬಿದ್ದು ಕೊಳೆತು, ಅವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಮೂಡಿಸುತ್ತಿದ್ದರೂ ಇದು ಮುಂದುವರಿ
ದಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೊನ್ನಾವರ ತಾಲ್ಲೂಕು ವೈದ್ಯಾಧಿಕಾರಿ ಉಷಾ ಹಾಸ್ಯಗಾರ.

ಮಾಮೂಲಿ ಜ್ವರಕ್ಕೂ ಡೆಂ ಗಿ ಬಣ್ಣ?: ‘ಕಳೆದ ವರ್ಷ 18 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ಬಾರಿ ಮೇ ತಿಂಗಳ ಒಳಗೆ ನಾಲ್ಕು ಹಾಗೂ 15 ದಿನಗಳಲ್ಲಿ ಮತ್ತೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಪಟ್ಟಣದಲ್ಲಿನ ಪ್ರಯೋಗಾಲಯಗಳಲ್ಲಿ ಮಾಮೂಲಿ ಜ್ವರವನ್ನೂ ಡೆಂಗಿ ಎಂದು ವರದಿ ನೀಡಲಾಗುತ್ತಿದೆ. ಅವರನ್ನು ಶಂಕಿತರು ಎಂದು ಪರಿಗಣಿಸಿ, ಮಣಿಪಾಲದ ಪ್ರಯೋಗಾಲಯಕ್ಕೆ ರಕ್ತದ ಮಾದರಿಗಳನ್ನು ಕಳುಹಿಸಿದ್ದೆವು. ಅಲ್ಲಿಂದ ಡೆಂಗಿ ಇಲ್ಲ ಎಂದು ವರದಿಗಳು ಬರುತ್ತಿವೆ’ ಎನ್ನುತ್ತಾರೆ ಅವರು.

ಮನೆ ಮನೆ ಭೇಟಿಗೆ ಆಶಾ ಕಾರ್ಯಕರ್ತರು: ‘ಈಗಾಗಲೇ ಹೊನ್ನಾವರದ ಕೆಲವು ಸೂಕ್ಷ್ಮ ಹಳ್ಳಿ ಪ್ರದೇಶಗಳಿಗೆ ಆಶಾ ಕಾರ್ಯಕರ್ತರು ತೆರಳಿ, ಲಾರ್ವಾ ಸರ್ವೆ ಮಾಡಿದ್ದಾರೆ. ಈಗಲೂ ಮನೆಮನೆ ಭೇಟಿ ಮಾಡಿ, ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸುತ್ತಿದ್ದಾರೆ. ಅವುಗಳನ್ನು ಸಾರ್ವಜನಿಕರಿಗೆ ತೋರಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರಮೇಶ್ ರಾವ್ ತಿಳಿಸಿದರು.

‘ಕಾರವಾರದಲ್ಲಿ 10 ಡೆಂಗಿ ಪ್ರಕರಣಗಳು ಇದ್ದು, 30 ಶಂಕಿತರು ಇದ್ದಾರೆ. 12 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಹೆಚ್ಚು ಅವಶ್ಯ ಇದೆ’ ಎನ್ನುತ್ತಾರೆ ಅವರು.

ಉಳಿದಂತೆ, ಜಿಲ್ಲೆಯಲ್ಲಿ ಒಬ್ಬರಿಗೆ ಚಿಕುನ್‌ಗುನ್ಯಾ ಶಂಕೆಯಿದೆ. ಮಿದುಳು ಜ್ವರ ಶಂಕಿತರು 10 ಮಂದಿ ಕಂಡು ಬಂದಿದ್ದಾರೆ. ಭಟ್ಕಳದ ಒಬ್ಬರಲ್ಲಿ ಮಿದುಳು ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗಿ ಲಕ್ಷಣಗಳು

ಕಣ್ಣು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ವಿಪರೀತ ತಲೆನೋವು, ಚರ್ಮದ ಮೇಲೆ ಅಲರ್ಜಿ ರೀತಿಯ ಗುಳ್ಳೆಗಳು ಹಾಗೂ ಮೂಗಿನಲ್ಲಿ ರಕ್ತ ಬರುವುದು

ಸೊಳ್ಳೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು

ಹೂವಿನ ಕುಂಡದ ಕೆಳಗೆ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು

ಮನೆಯಲ್ಲಿ ಕತ್ತಲು ಇರುವ ಭಾಗಗಳಲ್ಲಿ ಸೊಳ್ಳೆಗಳನ್ನು ಕಡಿಮೆ ಮಾಡುವುದು

ಸೊಳ್ಳೆ ನಿವಾರಕಗಳನ್ನು ಬಳಸಬಹುದು

ಉದ್ದ ತೋಳು, ಉದ್ದ ಪ್ಯಾಂಟ್‌ ಇರುವ ಬಟ್ಟೆ ಧರಿಸಬೇಕು

ಮಲಗುವಾಗ ಸೊಳ್ಳೆಪರದೆ ಬಳಸಬೇಕು

ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT