ಸ್ವಾರ್ಥಿಗಳಿಗೆ ‘ಮುನಿ’, ಜನರಿಗೆ ‘ರತ್ನ’

7
ಆರೋಪಗಳಿಗೆ ತಲೆಕೆಡಿಸಿಕೊಳ್ಳಲ್ಲ: ಮುನಿರತ್ನ

ಸ್ವಾರ್ಥಿಗಳಿಗೆ ‘ಮುನಿ’, ಜನರಿಗೆ ‘ರತ್ನ’

Published:
Updated:
ಸ್ವಾರ್ಥಿಗಳಿಗೆ ‘ಮುನಿ’, ಜನರಿಗೆ ‘ರತ್ನ’

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮದಲ್ಲಿ ಭಾಗಿಯಾದ ಆರೋಪ ಹೊತ್ತರೂ, ಬರೋಬ್ಬರಿ 25 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ ನಿರ್ಮಾಪಕ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ, ಚುನಾವಣೆ ಸಂದರ್ಭದಲ್ಲಿ ತಾವು ಎದುರಿಸಿದ ಹಾಗೂ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡುತ್ತೀರಿ?

ಮೂಲಸೌಕರ್ಯ ಒದಗಿಸುವುದರ ಜತೆಗೆ ಕೆಲವು ವಿಶೇಷ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಜೆ.ಪಿ.ಪಾರ್ಕ್‌ ವಾರ್ಡ್‌ನ ಚೌಡೇಶ್ವರಿ ಬಸ್ ನಿಲ್ದಾಣದಿಂದ ತುಮಕೂರು ರೋಡ್‌ಗೆ ರಸ್ತೆ ಸಂಪರ್ಕ ಕಲ್ಪಿಸುವುದು, ಸುಮನಹಳ್ಳಿ ಜಂಕ್ಷನ್‌ನಿಂದ ಕೆಂಗೇರಿವರೆಗೆ ಸಿಗ್ನಲ್‌ಫ್ರೀ ಕಾರಿಡಾರ್ ವ್ಯವಸ್ಥೆ ಮಾಡುವುದು, ತುಮಕೂರು ರಸ್ತೆಯಿಂದ–ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವುದು, ಮಲ್ಲತ್ತಹಳ್ಳಿ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡುವುದು ನನ್ನ ಯೋಜನೆಗಳ ಪಟ್ಟಿಯಲ್ಲಿ ಮೊದಲಿವೆ.

* ಕಳೆದ ಸಲ ಶಾಸಕರಿದ್ದಾಗಲೇ ಈ ಕಾರ್ಯಗಳನ್ನು ಮಾಡಬಹುದಿತ್ತಲ್ಲ?

ಐದು ವರ್ಷದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಂಬತ್ತು ವಾರ್ಡ್‌ಗಳಿವೆ. ಎಂಟು ವಾರ್ಡ್‌ಗಳು ಪೂರ್ತಿ ಅಭಿವೃದ್ಧಿಯಾಗಿವೆ. ರಾಜರಾಜೇಶ್ವರಿನಗರ ವಾರ್ಡ್‌ ಸ್ವಲ್ಪ ಸಮಸ್ಯೆಗಳಿಂದ ಬಳಲುತ್ತಿದೆ. ರಸ್ತೆಗಳ ದುರಸ್ತಿ ಬಾಕಿ ಇದೆ. ಅಲ್ಲೂ ಶೇ 60ರಷ್ಟು ಅಭಿವೃದ್ಧಿ ಪೂರ್ಣಗೊಳಿಸಿದ್ದೇನೆ.

* ಸಮ್ಮಿಶ್ರ ಸರ್ಕಾರದ ಆಡಳಿತ ಸುಗಮ ಎನಿಸುತ್ತಿದೆಯೇ?

ಸರ್ಕಾರ ರಚನೆಯಾಗಿ ಇನ್ನೂ 15 ದಿನ ಆಗಿದೆಯಷ್ಟೆ. ಈವರೆಗೆ ಎಲ್ಲವೂ ಚೆನ್ನಾಗಿಯೇ ಇದೆ. 2-3 ತಿಂಗಳು ಕಳೆಯಲಿ ನೋಡೋಣ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಿವೃದ್ಧಿಗೆ ಒತ್ತು ಕೊಡುವ ಮನೋಭಾವ ಉಳ್ಳವರು. ಸಮ್ಮಿಶ್ರ ಸರ್ಕಾರವಿದ್ದಾಗ ತಾರತಮ್ಯ ಮಾಡಿದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ ‌ಹಾಗೂ ಸರ್ಕಾರಕ್ಕೂ ದೊಡ್ಡ ಪೆಟ್ಟು ಬೀಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ, ಜೆಡಿಎಸ್–ಕಾಂಗ್ರೆಸ್ ಎಂಬ ಭೇದ–ಭಾವವನ್ನು ಅವರು ಮಾಡುವುದಿಲ್ಲ ಎಂದು ಭಾವಿಸಿದ್ದೇನೆ.

* ಮುನಿರತ್ನ ವಿರುದ್ಧ ಕೆಲ ಗಂಭೀರ ಆರೋಪಗಳಿವೆಯಲ್ಲ?

ಗುರುತಿನ ಚೀಟಿ ಅಕ್ರಮದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ನನ್ನಿಂದ ಯಾವ ತೊಂದರೆಯೂ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಹಾಗೆ, ತೊಂದರೆ ಕೊಟ್ಟಿದ್ದರೆ ಮತ್ತೆ ಶಾಸಕನಾಗಿ ಆಯ್ಕೆಯಾಗುತ್ತಿರಲಿಲ್ಲ. ರಾಜಕೀಯದ ಆಸೆ, ಸ್ವಾರ್ಥ, ದುರುದ್ದೇಶ ಇಟ್ಟುಕೊಂಡವರಿಗೆ ಮಾತ್ರ ಕೆಟ್ಟವನಾಗಿ ಕಾಣಿಸಿದ್ದೇನೆ. ಕೆಲವರ ವಿರುದ್ಧ ‘ಮುನಿ’ದರೂ, ‌ಜನರ ಪಾಲಿನ ‘ರತ್ನ’ ನಾನು.

* ಜನ ನಿಮಗೆ ಏಕೆ ಮತ ಹಾಕಿದರು ಎನಿಸುತ್ತದೆ?

ಜನ ಮುನಿರತ್ನನಿಗೆ ಮತ ಕೊಟ್ಟಿಲ್ಲ. ಅಭಿವೃದ್ಧಿಗೆ ಮತ ಹಾಕಿದ್ದಾರೆ. ಕ್ಷೇತ್ರದ ಜನ ತುಂಬ ಬುದ್ಧಿವಂತರು. ಊಹಾ

ಪೋಹಗಳಿಗೆ ಮನ್ನಣೆ ಕೊಡುವುದಿಲ್ಲ. ಚುನಾವಣಾ ಸಂದರ್ಭಗಳಲ್ಲಿ ತಮ್ಮ ನಾಯಕನ ವಿರುದ್ಧ ಎದುರಾಳಿಗಳು ಎಂತೆಂತಹ ಪಿತೂರಿಗಳನ್ನು ಮಾಡು

ತ್ತಾರೆ ಎಂಬುದೂ ಅವರಿಗೆ ಗೊತ್ತು. ಹೀಗಾಗಿ, ಯಾವ ಆರೋಪಗಳಿಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

* ಕೆಲ ವಾರ್ಡ್‌ಗಳಲ್ಲಿ ಮತದಾರರು ತಿರುಗಿಬಿದ್ದಿದ್ದೇಕೆ?

50 ರಿಂದ 60 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದುಕೊಂಡಿದ್ದೆ. ಆದರೆ, ಜ್ಞಾನಭಾರತಿ (ವಾರ್ಡ್‌ ಸಂಖ್ಯೆ 129), ರಾಜರಾಜೇಶ್ವರಿನಗರ (160) ಹಾಗೂ ಕೊಟ್ಟಿಗೆಪಾಳ್ಯ (73) ವಾರ್ಡ್‌ಗಳಿಂದ ಕಡಿಮೆ ಮತಗಳು ಬಂದಿವೆ. ಈ ಮೂರೂ ವಾರ್ಡ್‌ಗಳಲ್ಲಿ ಮಾಡಿರುವ ಅಭಿವೃದ್ಧಿಗೆ ಮತ ಕೊಡಲೇಬೇಕಿತ್ತು. ಆದರೆ, ಜನ ತಮ್ಮ ಮನಸಾಕ್ಷಿಗೆ ವಿರುದ್ಧ ನಡೆದುಕೊಂಡರು. ಯಾರದ್ದೋ ಮಾತು ಕೇಳಿ ತಪ್ಪು ಮಾಡಿರುವ ಅವರಿಗೆ ಈಗಲೂ ಮನವಿ ಮಾಡುತ್ತೇನೆ. ಮುಂದಿನ ದಿನಗಳಲ್ಲಾದರೂ, ಅಭಿವೃದ್ಧಿ ಮಾತ್ರ ಪರಿಗಣಿಸಿ.

* ಕಣದಿಂದ ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದಿದ್ದಿರಿ. ಹೀಗಿರುವಾಗ ಜೆಡಿಎಸ್ ಜತೆ ಈಗ ಹೊಂದಾಣಿಕೆ ಸಾಧ್ಯವೇ?

‘ನಾವೇ ಗೆಲ್ತೇವೆ’ ಎಂಬ ನಂಬಿಕೆ ಜೆಡಿಎಸ್‌ ಅಭ್ಯರ್ಥಿಗಿತ್ತು. ಆದರೆ, ಕಾಂಗ್ರೆಸ್ ವರಿಷ್ಠರು ನನ್ನನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹೀಗಾಗಿ, ಇಬ್ಬರೂ ಕಣಕ್ಕಿಳಿಯಬೇಕಾಯಿತು. ಚುನಾವಣಾ ಕಣದಲ್ಲಷ್ಟೇ ನಾವು ಎದುರಾಳಿಗಳು. ಈಗ ಒಟ್ಟಾಗಿಯೇ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಮ್ಮಿಶ್ರ ಸರ್ಕಾರ ಸದೃಢವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry