7

ಸವಲತ್ತು ವಂಚಿತ ಮಲಪ್ರಭಾ ನಗರ

Published:
Updated:
ಸವಲತ್ತು ವಂಚಿತ ಮಲಪ್ರಭಾ ನಗರ

ಬೆಳಗಾವಿ: ಮಹಾನಗರ ದಕ್ಷಿಣ ಭಾಗದ 12ನೇ ವಾರ್ಡ್‌ನ ಮಲಪ್ರಭಾ ನಗರ, ದಾಮಣೆ ರೋಡ್‌ ನಿವಾಸಿಗಳಿಗೆ ಇಂದಿಗೂ ಒಳ್ಳೆಯ ರಸ್ತೆ ಹಾಗೂ ಗಟಾರಗಳಿಲ್ಲ. ಎಂದೋ ಹಾಕಿದ್ದ ಡಾಂಬರ್‌ ಕಿತ್ತಿರುವ ರಸ್ತೆಗಳು, ಬಾಯ್ತೆರೆದ ಗುಂಡಿಗಳು, ದುರಸ್ತಿ ಕಾಣದ ಚರಂಡಿಗಳು, ಇರುವ ಇಕ್ಕಟ್ಟಾದ ರಸ್ತೆಗಳನ್ನೇ ಆಕ್ರಮಿಸುವ ವಾಹನಗಳು, ಮೂಲ ಸೌಲಭ್ಯ ವಂಚಿತ ಸರ್ಕಾರಿ ಶಾಲೆಗಳು, ನಿರಂತರ ನೀರು ಪೂರೈಕೆ ಸೌಲಭ್ಯ ಇಲ್ಲದ ನಿವಾಸಿಗಳು, ಸ್ಮಾರ್ಟ್‌ ಸಿಟಿ ಯೋಜನೆ ವಂಚಿತ ಸ್ಥಿತಿ ಇಲ್ಲಿ ತಕ್ಷಣ ಗೋಚರಿಸುವ ಚಿತ್ರಣಗಳು.

ಕೆಳ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮಾಲಿನ್ಯ ದೊಡ್ಡ ಸಮಸ್ಯೆ. ಮನೆಗಳ ಮುಂದಿನ ಚಿಕ್ಕ ಕಾಲುವೆಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯವು ಸೊಳ್ಳೆಗಳ ತಾಣವಾಗಿದೆ. ಸಾಂಕ್ರಾಮಿಕ ರೋಗಗಳು ಇಲ್ಲಿ ಸಾಮಾನ್ಯವಾಗಿವೆ. ಪ್ರತಿ ವರ್ಷದಂತೆ ಈಗಲೇ ಆರಂಭವಾಗಿರುವ ಡೆಂಗಿ, ಚಿಕುನ್‌ ಗುನ್ಯಾ ರೋಗಗಳು ಮಳೆಗಾಲ ಮುಗಿಯುವವರೆಗೆ ಕಾಡುತ್ತವೆ.

‘ಕಲ್ಯಾಣನಗರದ ಪಶ್ಚಿಮ ಭಾಗದ ನಿವಾಸಗಳು, ಕಲ್ಮೇಶ್ವರ ರಸ್ತೆಯ ಉತ್ತರ ಭಾಗ, ಯಳ್ಳೂರು ರಸ್ತೆ ಸೇರಿದಂತೆ ಬಹುತೇಕ ಕಡೆ ನಿರಂತರ ಕುಡಿಯುವ ನೀರಿಲ್ಲ. ತೆರೆದ ಬಾವಿ ಅಥವಾ ಕೊಳವೆ ಬಾವಿಗಳ ನೀರೇ ಗತಿಯಾಗಿದೆ. ಅದೇ ನೀರನ್ನು ಮಿನಿ ವಾಟರ್‌ ಟ್ಯಾಂಕ್‌ಗಳ ಮೂಲಕ ನೇರವಾಗಿ ಪಡೆದು ಸೇವಿಸುತ್ತಾರೆ. ಇದರಿಂದ ಸ್ವಚ್ಛ, ಶುದ್ಧ ನೀರು ನಿವಾಸಿಗಳಿಗೆ ಸಿಗುವುದಿಲ್ಲ’ ಎನ್ನುವುದು ಭಾಗೀರಥಿ ಹಜೇರಿ ಅಭಿಪ್ರಾಯ.

‘ಮಲಪ್ರಭಾ ನಗರದ ಮುಖ್ಯ ಹಾಗೂ ಅಡ್ಡ ರಸ್ತೆಗಳ ಮನೆಗಳ ಮುಂದೆ ಮಡುಗಟ್ಟಿರುವ ಮಾಲಿನ್ಯವನ್ನು ಸ್ವಚ್ಛಗೊಳಿಸಿಲ್ಲ, ಇದರಿಂದ ಇಡೀ ಪರಿಸರದಲ್ಲಿ ದುರ್ನಾತ ಬೀರಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ನಿತ್ಯ ಆಸ್ಪತ್ರೆಗಳಿಗೆ ಓಡಾಡಬೇಕಾಗಿದೆ’ ಎಂದು ಅವರು ಹೇಳಿದರು.

‘ಬೆಳಗಾವಿಯಿಂದ ದಾಮಣೆ ಗ್ರಾಮವನ್ನು ಸಂಪರ್ಕಿಸುವ ಮುಖ್ಯ ರಸ್ತೆಯು ಹತ್ತಾರು ವರ್ಷಗಳಿಂದ ದುರಸ್ತಿಯಾಗಿಲ್ಲ. ಡಾಂಬರ್‌ ಹಾಳಾಗಿ ಗುಂಡಿಗಳು ಬಿದ್ದಿವೆ. ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಇಲ್ಲಿ ಚರಂಡಿಯಂತೂ ಇಲ್ಲ. ಮಳೆಯ ನೀರು ಬಹುತೇಕ ರಸ್ತೆಯಲ್ಲಿಯೇ ಹರಿಯುತ್ತದೆ. ಇದರಿಂದ ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟವಾಗುತ್ತದೆ’ ಎಂದು ಇಲ್ಲಿನ ನಿವಾಸಿ ನೀಲಕಂಠ ದಾಮಣೇಕರ ಹೇಳಿದರು.

‘ಈ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವುದೇ ಇಲ್ಲಿಯ ಚಾವಡಿ ಗಲ್ಲಿಯ ಸರ್ಕಾರಿ ಕನ್ನಡ ಬಾಲಕಿಯರ ಶಾಲೆ ಸಂಖ್ಯೆ 5. ಬಡ ಮಕ್ಕಳ ವಿದ್ಯಾರ್ಜನೆಗೆ ಇದು ಆಸರೆಯಾಗಿದೆ. ಆದರೆ ಶಾಲೆಯೊಳಗೆ ಕುಳಿತು ಅಭ್ಯಾಸ ಮಾಡಲು ಕೊಠಡಿಗಳಿಲ್ಲ. 1ರಿಂದ 8ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 6 ಕೊಠಡಿಗಳಲ್ಲೇ ಇಷ್ಟು ಮಕ್ಕಳನ್ನು ಕೂಡಿಹಾಕಿ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗೆ ಇನ್ನೂ 6 ಕೊಠಡಿಗಳು ಬೇಕು ಎಂದು ಅನೇಕ ಸಲ ಶಿಕ್ಷಣ ಇಲಾಖೆಯವರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಾಗೇಶ ಪಾಟೀಲ ಹೇಳಿದರು.

‘ಖಾಸಗಿ ಶಾಲೆಗಳಿಗೆ ಡೊನೇಶನ್‌ ಕೊಟ್ಟು ಕಲಿಸುವ ಶಕ್ತಿ ಇಲ್ಲಿನ ಕೂಲಿಕಾರ ನೇಕಾರರಿಗೆ ಇಲ್ಲ. ಇಕ್ಕಟ್ಟಾದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಖಾಸಗಿ ಶಾಲೆಗಳಿಗೆ ಸವಾಲ್‌ ಆಗುವಂತೆ ಶಿಕ್ಷಣ ಕೊಡುವುದಾಗಿ ಸರ್ಕಾರ ಅನೇಕ ಸಲ ಹೇಳಿಕೆ ನೀಡುತ್ತಿದೆ, ಆದರೆ ಕನಿಷ್ಠ ಸೌಲಭ್ಯವನ್ನೂ ಕಲ್ಲಿಸುತ್ತಿಲ್ಲ. ಕಾಳಜಿ ವಹಿಸಿದ್ದರೆ ಬಡಮಕ್ಕಳನ್ನು ಶಾಲಾ ಕೊಠಡಿಗಳಲ್ಲಿ ಕುರಿಗಳಂತೆ ತುಂಬುವ ದುಸ್ಥಿತಿ ಬರುತ್ತಿರಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ವಾರ್ಡ್‌ ವ್ಯಾಪ್ತಿ

ಸಪಾರ ಗಲ್ಲಿ, ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ, ಕಲ್ಮೇಶ್ವರ ರೋಡ್‌, ಗಣೇಶ ಬೀದಿ, ದೇವಾಂಗನಗರ 1 ಮತ್ತು 2 ನೇ ಕ್ರಾಸ್‌, ಬಜಾರ್‌ ಗಲ್ಲಿ, ಕಲ್ಯಾಣ ನಗರ, ಮಲಪ್ರಭಾ ನಗರ, ಆನಂದ ಮಾರ್ಗ, ವಡ್ಡರ ವಾವಣಿ ಭಾಗ 1 ಮತ್ತು 2

ಕಾಮಗಾರಿಗಳ ಆರಂಭ

‘ಮಲಪ್ರಭಾ ನಗರ ಹಾಗೂ ದಾಮಣೆ ರೋಡ್‌ಗಳಲ್ಲಿ ರಸ್ತೆ, ಗಟಾರ್‌ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮಲಪ್ರಭಾ ನಗರ ಮತ್ತು ಕಲ್ಯಾಣನಗರಕ್ಕೆ ₹ 12 ಲಕ್ಷ, ದಾಮಣೆ ರಸ್ತೆ ನಿರ್ಮಾಣಕ್ಕೆ ₹ 25 ಲಕ್ಷ ಬಿಡುಗಡೆಯಾಗಿವೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮಹಾನಗರ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಹೇಳಿದರು.

ಸಪಾರ ಗಲ್ಲಿ, ತೆಗ್ಗಿನ ಗಲ್ಲಿ, ಚಾವಡಿ ಗಲ್ಲಿ ರಸ್ತೆಗೆ ಡಾಂಬರ್‌ ಹಾಕಲಾಗಿದೆ. ಕಲ್ಮೇಶ್ವರ ರೋಡ್‌ದಲ್ಲಿ 2 ಕೊಳವೆ ಬಾವಿ, ಗಣೇಶ ಬೀದಿಗೆ ಸಿಸಿ ರಸ್ತೆ, ಕೊಳವೆ ಬಾವಿ, ಕಲ್ಯಾಣಗರ ಮತ್ತು ಮಲಪ್ರಭಾ ನಗರಗಳಿಗೆ ತಲಾ 2 ಕೊಳವೆ ಬಾವಿ, ಆನಂದಮಾರ್ಗಕ್ಕೆ ಡಾಂಬರ್‌, ವಡ್ಡರ್ ಚಾವಣಿಗೆ ಸಿಸಿ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿವೆ ಎಂದು ಅವರು ಹೇಳಿದರು.

ಆರ್‌.ಎಲ್‌. ಚಿಕ್ಕಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry