ಮನ್ನಾ ಬೇಡ, ರೈತರಿಗೆ ಶಕ್ತಿ ತುಂಬಿ

7

ಮನ್ನಾ ಬೇಡ, ರೈತರಿಗೆ ಶಕ್ತಿ ತುಂಬಿ

Published:
Updated:
ಮನ್ನಾ ಬೇಡ, ರೈತರಿಗೆ ಶಕ್ತಿ ತುಂಬಿ

ಎಚ್‌.ಡಿ. ಪ್ರಶಾಂತ್‌

ರಾಷ್ಟ್ರದ ಸಾರ್ವಜನಿಕ ವಲಯದಲ್ಲಿ ಹಲವು ದಶಕಗಳಿಂದ ಕೃಷಿ ವಿಷಯಗಳು ಉಪೇಕ್ಷೆಗೆ ಒಳಗಾಗಿವೆ. ‘ರೈತರು ಮತ್ತು ಕೃಷಿ, ದೇಶದ ಆರ್ಥಿಕತೆಯ ಬೆನ್ನೆಲುಬು, ಪ್ರತಿ ಹಳ್ಳಿಯೂ ಒಂದು ಪುಟ್ಟ ಭಾರತ’ ಎಂಬ ಮಾತುಗಳೆಲ್ಲಾ ಬಾಯಿಮಾತಿಗೆ ಸೀಮಿತವಾಗಿವೆ. ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಯಾರೂ ಸಮಗ್ರವಾಗಿ ಪರಾಮರ್ಶಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ.

ಮುಂಬೈನಲ್ಲಿ ಇತ್ತೀಚೆಗೆ 30 ಸಾವಿರಕ್ಕೂ ಹೆಚ್ಚು ರೈತರು ನಡೆಸಿದ ಪ್ರತಿಭಟನೆ, ರಾಷ್ಟ್ರದ 22 ರಾಜ್ಯಗಳ ರೈತರು ನಗರಗಳಿಗೆ ಕೃಷಿ ಉತ್ಪನ್ನಗಳನ್ನು ಪೂರೈಸದೆ ನಿರಂತರವಾಗಿ ಹತ್ತು ದಿನಗಳ ಕಾಲ ಪ್ರತಿಭಟಿಸಿದ್ದು... ಇವೆಲ್ಲ ರೈತರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಸೂಚಿಸುತ್ತವೆ. ರಾಷ್ಟ್ರದ ರಾಜಕೀಯ ಮತ್ತು ಅರ್ಥ ವ್ಯವಸ್ಥೆಯಲ್ಲಿ ಕೃಷಿಕರು ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಇಂಥ ಘಟನೆಗಳು ಪುರಾವೆ. ರೈತರ ಉತ್ಪನ್ನಗಳಿಗೆ ಮತ್ತು ಗ್ರಾಮೀಣ ಪ್ರದೇಶದ ದುಡಿಮೆಗಾರರಿಗೆ ಶ್ರಮಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ ಎನ್ನುವುದನ್ನು ಇಂಥ ಪ್ರತಿಭಟನೆಗಳು ಪುಷ್ಟೀಕರಿಸುತ್ತವೆ.

ಇನ್ನೊಂದೆಡೆ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಹಲವು ಯೋಜನೆಗಳನ್ನು ರೂಪಿಸಿ, ವಿವಿಧೆಡೆ ಉತ್ಪಾದನಾ ವಲಯಗಳು ಹಾಗೂ ಸೇವಾ ವಲಯಗಳನ್ನು ಸ್ಥಾಪಿಸಲಾಗುತ್ತಿದೆ.  ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ರಾಜ್ಯದ ಸುಮಾರು 928 ಹಳ್ಳಿಗಳ 11 ಲಕ್ಷ ಎಕರೆಗೂ ಹೆಚ್ಚಿನ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ವಿಶೇಷ ಆರ್ಥಿಕ ವಲಯ–1 ಯೋಜನೆಗಾಗಿ 1.14 ಲಕ್ಷ ಕೃಷಿ ಕುಟುಂಬಗಳು ಮತ್ತು 82,000 ಭೂರಹಿತ ಕೃಷಿ ಕಾರ್ಮಿಕರು ಸ್ಥಳಾಂತರಗೊಂಡಿದ್ದಾರೆ. ಇದು ಸ್ಥಳೀಯ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ನೇರವಾದ ಮತ್ತು ಬಹಳ ಗಂಭೀರವಾದ ಪರಿಣಾಮ ಬೀರುತ್ತಿರುವುದನ್ನು ಕಾಣಬಹುದು. ಸ್ಥಳಾಂತರಗೊಂಡ ಜನರಿಗೆ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ಅದು ಬಾಯಿ ಮಾತಿಗಷ್ಟೇ ಸೀಮಿತವಾಗಿದೆ.

ವಿಶೇಷ ಆರ್ಥಿಕ ವಲಯದಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಸೃಷ್ಟಿಯಾಗಿರುವ ಉದ್ಯೋಗದ ಪ್ರಮಾಣ ಶೇ 8 ಕ್ಕಿಂತಲೂ ಕಡಿಮೆ. ಮಹಾಲೇಖಪಾಲರ ವರದಿಯೇ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಹೀಗಿದ್ದರೂ ಕಾರ್ಪೊರೇಟ್‌ ವಲಯಕ್ಕೆ ಕೃಷಿ ಭೂಮಿ ಕೊಡುವುದು ನಿಂತಿಲ್ಲ. 2016ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೂರು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ 1,201 ಹೊಸ ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿತು. ರಾಜ್ಯ ಯೋಜನಾ ಮಂಡಳಿಯು ‘ಕರ್ನಾಟಕದ ಒಂದು ದೃಷ್ಟಿಕೋನ: 20-20’ ಎನ್ನುವ ಹೆಸರಿನಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ, ಕೃಷಿ ಸಮಾಜದ ಬಿಕ್ಕಟುಗಳ ಬಗ್ಗೆ ಪರಾಮರ್ಶನ ನಡೆಸದೆ, 2020ರ ವೇಳೆಗೆ ಕೃಷಿ ಅವಲಂಬಿತರ ಸಂಖ್ಯೆ ಶೇ 61ರಿಂದ ಶೇ 35ಕ್ಕೆ ಕುಸಿಯಲಿದೆ ಎಂದು ತಿಳಿಸಿದೆ. ಹೀಗಿರುವಾಗ ಅನ್ನದಾತ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಕಾಡುತ್ತದೆ.

ಈ ರೀತಿಯ ಅಭಿವೃದ್ಧಿಯ ಮಾನದಂಡಗಳು ರಿಯಲ್ ಎಸ್ಟೇಟ್‌ ಬೆಳವಣಿಗೆಯ ವೇಗವನ್ನು ಹೆಚ್ಚಿಸಿವೆ. ಭೂಮಿಯ ಬೆಲೆ ಏರುಮುಖವಾಗಿಸುವ ಒತ್ತಡ ತಂದಿದೆ. ಒಂದು ಪುಟ್ಟ ಬುಡಕಟ್ಟು ಹಾಡಿಯಿಂದ ಹಿಡಿದು ದೇಶದ ಮಹಾನಗರಗಳ ವರೆಗೆ ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಜೀವನ ಅವಶ್ಯಕ ಸೇವೆಗಳು ಬಡವರಿಗೆ ದೊರಕುವುದು ದುಸ್ತರವಾಗಿದೆ. ಅಷ್ಟೇ ಅಲ್ಲ, ರಿಯಲ್‌ ಎಸ್ಟೇಟ್‌ ಅಭಿವೃದ್ಧಿಯ ಪರಿಣಾಮ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿದಾರರು ಬಹಳ ವೇಗವಾಗಿ ಭೂರಹಿತ ಕಾರ್ಮಿಕರಾಗುವ ಸ್ಥಿತಿ ನಿರ್ಮಾಣವಾಗಿದೆ.

ಇದರ ಪರಿಣಾಮ ಎಂಬಂತೆ ದೇಶದಲ್ಲಿ ಕಳೆದ 20 ವರ್ಷಗಳಿಂದ ಪ್ರತಿದಿನ ಸರಾಸರಿ 2,035 ಕೃಷಿ ಕುಟುಂಬಗಳು ಕೃಷಿಯಿಂದ ವಿಮುಖವಾಗುತ್ತಿವೆ. ಕೃಷಿಯು ವಾಣಿಜ್ಯೀಕರಣಕ್ಕೆ ಒಳಪಟ್ಟಿದೆ. ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದ ಬಡವರು ಇನ್ನಷ್ಟು ಆಹಾರದ ಅಭದ್ರತೆ ಎದುರಿಸುವಂತಾಗಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಈ ಬೆಳವಣಿಗೆ ಹಸಿವು ಮತ್ತು ಅಪೌಷ್ಟಿಕತೆಯನ್ನು ದ್ವಿಗುಣಗೊಳಿಸಿದೆ. ಅಲ್ಲದೇ ಜನರು ಗ್ರಾಮೀಣ ಪ್ರದೇಶಗಳಿಂದ ಮಹಾನಗರಗಳಿಗೆ ವಲಸೆ ಹೋಗಲು ಕಾರಣವಾಗಿದೆ.

ರೈತರ ಸಮಸ್ಯೆಗಳ ಕುರಿತಂತೆ ಚರ್ಚೆ ಶುರುವಾದಾಗಲೆಲ್ಲ ‘ಸಾಲ ಮನ್ನಾ’ದ ವಿಷಯವೇ ಮುಂಚೂಣಿಗೆ ಬರುತ್ತದೆ. ಇದು ರಾಜಕೀಯಕ್ಕೂ ಬಳಕೆಯಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎಚ್‌.ಡಿ. ಕುಮಾರಸ್ವಾಮಿ ಅವರು ‘ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಿದ್ಧಪಡಿಸಿ, ಮುಂದುವರಿಯಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಆದರೆ, ‘ಸಾಲ ಮನ್ನಾದಿಂದ ರೈತರ ಬದುಕು ಹಸನಾಗುವುದಿಲ್ಲ. ಅದು ತಾತ್ಕಾಲಿಕ ಪರಿಹಾರವಷ್ಟೇ’ ಎನ್ನುವುದು ಸರ್ಕಾರ ಹಾಗೂ ರೈತ ಮುಖಂಡರಿಗೆ ಏಕೆ ತಿಳಿಯುತ್ತಿಲ್ಲ?

ಈಗಾಗಲೇ ಜಾರಿಯಲ್ಲಿರುವ ಕೃಷಿ ನೀತಿಗಳು ಸಾಮಾಜಿಕ ಸಂರಚನೆಯಲ್ಲಿನ ಅಸಮಾನತೆಯನ್ನು ಸೂಕ್ಷ್ಮವಾಗಿ ಅವಲೋಕಿಸದೇ ಇರುವುದು ಇಂದಿನ ಬಿಕ್ಕಟ್ಟಿಗೆ ದೊಡ್ಡ ಕಾರಣ. ರೈತರಿಗೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಯಾವುದೇ ಪರಿಹಾರ ಕ್ರಮಗಳಿಲ್ಲ. ರೈತರು ಮಾರುಕಟ್ಟೆಗೆ ಅಧೀನರಾಗುತ್ತಿದ್ದಾರೆ. ಅವರು ಬೆಳೆದ ಯಾವ ಬೆಳೆಗೂ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ಸರ್ಕಾರವೇ ಬೆಲೆ ನಿಗದಿಪಡಿಸಬೇಕು. ಉತ್ಪಾದನೆ ಹೆಚ್ಚಾದಾಗ ಸರ್ಕಾರವೇ ಅದನ್ನು ಖರೀದಿಸಿ, ಮಾರುಕಟ್ಟೆ ಒದಗಿಸುವ ಕೆಲಸ ಮಾಡಬೇಕು. ಕಾರ್ಪೊರೇಟ್‌ ವಲಯಕ್ಕೆ ಯಾವುದೇ ಕಾರಣಕ್ಕೂ ಕೃಷಿ ಜಮೀನು ಬಿಟ್ಟುಕೊಡಬಾರದು. ಸರ್ಕಾರವು ರೈತರ ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರ ಉಪಕ್ರಮಗಳನ್ನು ಅನುಸರಿಸದೆ, ಎಲ್ಲ ಸಂದರ್ಭದಲ್ಲೂ ಅವರ ಜತೆಗೆ ಶಕ್ತಿಯಾಗಿ ನಿಂತು ಕೆಲಸ ಮಾಡಿದರೆ ಅವರ ಬದುಕು ಹಸನಾಗಲು ಸಾಧ್ಯ. ‘ಹಸಿರು ಕ್ರಾಂತಿ’ಯ ಸಂದರ್ಭದಲ್ಲಿ ಅಲಕ್ಷಿಸಲಾಗಿದ್ದ

ಕೆಲವು ವಿಚಾರಗಳನ್ನು ಹೊಸ ಕೃಷಿ ನೀತಿಯಲ್ಲಿ ಸೇರಿಸುವ ಅಗತ್ಯ ಕೂಡ ಇದೆ.

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 0

  Sad
 • 0

  Frustrated
 • 1

  Angry