ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆ: ಮಳೆಗೆ 60 ಕಡೆಗಳಲ್ಲಿ ಗುಡ್ಡ ಕುಸಿತ

Last Updated 18 ಜೂನ್ 2018, 16:55 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ₹14 ಕೋಟಿಯಷ್ಟು ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 128 ಮನೆಗಳಿಗೆ ಹಾನಿಯಾಗಿದ್ದು ₹9.80 ಲಕ್ಷ ನಷ್ಟ ಉಂಟಾಗಿದೆ. 1,374 ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ಅದರಲ್ಲಿ 1,100 ಕಂಬಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಒಟ್ಟು 93 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿತ್ತು. ಸೂರ್ಲಬ್ಬಿ, ಹಮ್ಮಿಯಾಲ ಸೇರಿದಂತೆ ಹಲವು ಗ್ರಾಮಗಳಿಗೆ ಇನ್ನೂ ವಿದ್ಯುತ್‌ ಪೂರೈಸಲು ಸೆಸ್ಕ್‌ಗೆ ಸಾಧ್ಯವಾಗಿಲ್ಲ.

₹84 ಲಕ್ಷ ಮೊತ್ತದ ವಿದ್ಯುತ್‌ ಕಂಬ ಹಾಗೂ ಪರಿವರ್ತಕ, ನಗರ ಪ್ರದೇಶದಲ್ಲಿ ₹ 5.75 ಕೋಟಿ ಮೊತ್ತದ ರಸ್ತೆ ಹಾಗೂ ಸೇತುವೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 6.27 ಕೋಟಿ ಮೊತ್ತದ ಆಸ್ತಿ ನಷ್ಟ ಸಂಭವಿಸಿದೆ. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸೋಮವಾರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲಿಸಿದರು. ಅಧಿಕಾರಿಗಳ ಸಭೆ ನಡೆಸಿ ತುರ್ತು ಪರಿಹಾರಕ್ಕೆ ಸೂಚಿಸಿದರು.

ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು– ಮಾಕುಟ್ಟ ಹೆದ್ದಾರಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದು, ಆ ಸ್ಥಳಕ್ಕೂ ಸಚಿವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಪೆರಂಬಾಡಿಯಿಂದ ಮಾಕುಟ್ಟದ ತನಕ 20 ಕಿ.ಮೀ ಅಂತರವಿದ್ದು 60 ಕಡೆ ಗುಡ್ಡ ಕುಸಿದಿದೆ. 10ರಿಂದ 12 ಕಡೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಹೆದ್ದಾರಿಗೂ ಹಾನಿಯಾಗಿದೆ. ಕೆಲವು ಕಡೆ ರಸ್ತೆಯೇ ಕುಸಿಯುವ ಹಂತ ತಲುಪಿದೆ. ಜುಲೈ 12ರ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

‘ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ಹೆದ್ದಾರಿ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಮಾನವೀಯ ನೆಲೆಯಲ್ಲಿ ಅನುಮತಿ ನೀಡಬೇಕು. ಜೆಸಿಬಿ, ಕ್ರೇನ್‌ ಸಹಾಯದಿಂದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಪರಿಣತರನ್ನು ಕರೆಸಿ, ಹೆದ್ದಾರಿ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ದೇಶಪಾಂಡೆ ಸೂಚಿಸಿದರು.

‘ಕೊಡಗಿನಲ್ಲಿ 25 ವರ್ಷಗಳ ಬಳಿಕ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ತುರ್ತು ಪರಿಹಾರ ನೀಡಲು ಜಿಲ್ಲಾಧಿಕಾರಿ ಖಾತೆಯಲ್ಲಿ ₹10 ಕೋಟಿ ಅನುದಾನ ಲಭ್ಯವಿದ್ದು ಅದನ್ನು ಬಳಕೆ ಮಾಡಿಕೊಳ್ಳಬೇಕು. ಹಾನಿಯ ಪರಿಷ್ಕೃತ ವರದಿ ಸಲ್ಲಿಸಿದರೆ ಕೇಂದ್ರ ಸರ್ಕಾರದ ನೆರವು ಕೋರಲಾಗುವುದು’ ಎಂದು ಹೇಳಿದರು.

‘ಕೇರಳಕ್ಕೆ ರೈಲು: ಅನುಮತಿ ಇಲ್ಲ’

ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಹಾದು ಹೋಗಲಿರುವ ಮೈಸೂರು– ತಲಚೇರಿ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ. ಈ ಮಾರ್ಗಕ್ಕಾಗಿ ಕೇರಳ ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದು, ಅದಕ್ಕೆ ನಾವು ಮಣಿಯುವುದಿಲ್ಲ’ ಎಂದು ಸಚಿವ ದೇಶಪಾಂಡೆ ಸ್ಪಷ್ಟಪಡಿಸಿದರು.

‘ಈ ಮಾರ್ಗದಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಜತೆಗೆ, ಕೊಡಗಿನ ಪರಿಸರ ಹಾಗೂ ವನ್ಯಜೀವಿಗಳಿಗೂ ಧಕ್ಕೆ ಆಗಲಿದೆ. ಜನಾಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದರೆ ರೈಲ್ವೆ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT