ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಯೋಗಕ್ಕೆ ಬಾರದ ಬಸ್‌ ತಂಗುದಾಣ

ಚಂದಾಪುರ: ಮೂಲ ಸೌಕರ್ಯ ಕಲ್ಪಿಸಲು ಸಾರ್ವಜನಿಕರ ಆಗ್ರಹ
Last Updated 19 ಜೂನ್ 2018, 11:18 IST
ಅಕ್ಷರ ಗಾತ್ರ

ಭಾಲ್ಕಿ:  ಇಕ್ಕಟ್ಟಾದ ಬೀದಿ ರಸ್ತೆಗಳು, ಬಿರುಕು ಬಿಟ್ಟಿರುವ ಬಸ್‌ ತಂಗುದಾಣ, ಗ್ರಾಮದ ಎಲ್ಲೆಡೆ ಹೊಲಸು ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಕೆಲವೆಡೆ ಮಾತ್ರ ಎರಡು ಬದಿಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ. ಮೂರು ದಿನಕ್ಕೊಮ್ಮೆ ನೀರು ಸರಬರಾಜು. ಇದು ತಾಲ್ಲೂಕಿನಿಂದ 30 ಕಿ.ಮೀ ದೂರದಲ್ಲಿರುವ ಚಂದಾಪೂರ ಗ್ರಾಮದ ವಾಸ್ತವ ಚಿತ್ರಣ. ಈ ಗ್ರಾಮವೂ ಬಾಳೂರು ಗ್ರಾಮ ಪಂಚಾಯಿತಿಗೆ ಸೇರಿದ್ದು, ಸುಮಾರು 1800 ಜನಸಂಖ್ಯೆ ಹೊಂದಿದೆ.

ಗ್ರಾಮದ ಚವಡಿ, ಹನುಮಾನ ದೇವಸ್ಥಾನದ ಎದುರುಗಡೆ ರಸ್ತೆ ಸೇರಿದಂತೆ ಇನ್ನು ಕೆಲವೆಡೆ ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದ ಸಿಸಿ ರಸ್ತೆ ಹಾಳಾಗಿದೆ. ಗ್ರಾಮದ ಕೆಲವೆಡೆ ಕೇವಲ ಒಂದು ಬದಿಯಲ್ಲಿ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಹಾಗಾಗಿ, ಮನೆಗಳ ಹೊಲಸು ನೀರು ರಸ್ತೆ ಮಧ್ಯೆ ಸಂಗ್ರಹಗೊಂಡು ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ.

ಶಾಲೆಯ ಹಿಂದುಗಡೆ ಹೊಲಸು ನೀರು ಸಂಗ್ರಹವಾಗಿದ್ದು, ಗಬ್ಬು ನಾರುತ್ತಿದೆ. ಇದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇನ್ನು ತುಂಬಿರುವ ಚರಂಡಿಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸದೆ ಇರುವುದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳ ಭಯ ಕಾಡುತ್ತಿದೆ ಎನ್ನುತ್ತಾರೆ ಭಗವಂತ ಬೆಣ್ಣೆ, ಭದ್ರು ಒಂಟೆ.

ಎಲ್ಲ ಓಣಿಗಳಲ್ಲಿ ನಿತ್ಯ ನೀರು ಸರಬರಾಜು ಆಗುತ್ತಿಲ್ಲ. ಎರಡ್ಮೂರು ದಿನಕ್ಕೊಮ್ಮೆ ನೀರು ಬೀಡುತ್ತಿದ್ದಾರೆ. ಹಾಗಾಗಿ, ಪ್ರತಿದಿನ ಬೆಳಿಗ್ಗೆ, ಸಂಜೆ ನೀರಿನ ಚಿಂತೆ ನಮ್ಮನ್ನು ಕಾಡುತ್ತಿದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಸಾಮಾನ್ಯ ಜನರ ಗೋಳು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ದಿನನಿತ್ಯ ನೀರು ತರಲು, ಮಕ್ಕಳು, ಮಹಿಳೆಯರು, ಹಿರಿಯರು ಹರಸಾಹಸ ಪಡಬೇಕಾಗಿದ್ದು, ಮಾಂಜ್ರಾ ನದಿಗೆ ಅಲೆಯಬೇಕಾಗಿದೆ. ನದಿ ನೀರು ಬಟ್ಟೆ ಒಗೆಯಲು ಮಾತ್ರ ಯೋಗ್ಯವಾಗಿದೆ. ಆದರೆ, ಅನಿವಾರ್ಯವಾಗಿ ಕುಡಿ ಯಲು, ದನ–ಕರುಗಳಿಗೆ ನೀರುಣಿಸಲು ಬಳಸುತ್ತಿದ್ದೇವೆ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ.

ಬಸವೇಶ್ವರ ವೃತ್ತದಲ್ಲಿರುವ ಕೊಳವೆ ಬಾವಿ ಕೆಟ್ಟು ಸುಮಾರು 18 ದಿನಗಳಾದರೂ ರಿಪೇರಿ ಮಾಡಿಲ್ಲ. ಗ್ರಾಮ ಸಮೀದ ಬ್ರಿಜ್‌ ಕಂ ಬ್ಯಾರೇಜ್‌ನ ಗೇಟ್‌ಗಳಲ್ಲಿ ತಾಂತ್ರಿಕ ದೋಷ ಇರುವುದರಿಂದ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದ ಸಾವಿರಾರೂ ಎಕರೆ ಹೊಲಗಳಿಗೆ ನೀರು ಉಣಿಸಲು ಸಾಧ್ಯವಾಗದೆ ಆರ್ಥಿಕವಾಗಿ ನಷ್ಟದಲ್ಲಿದ್ದೇವೆ. ಗ್ರಾಮದ 2 ಎಕರೆ ಕೆರೆಯಲ್ಲಿ ನೀರು ಇದ್ದರು ಉಪಯೋಗಕ್ಕೆ ಬಾರದಂತಾಗಿದೆ. ವ್ಯವಸ್ಥಿತ ರೀತಿಯಲ್ಲಿ ಕೆರೆ ಅಭಿವೃದ್ಧಿ ಆಗಬೇಕು. ಕಟ್ಟಿದ ಕೆಲವೇ ತಿಂಗಳುಗಳಲ್ಲಿ ಬಸ್‌ ತಂಗುದಾಣ ಬಿರುಕು ಬಿಟ್ಟಿದ್ದು, ಸಾರ್ವಜನಿಕರಿಂದ ದೂರಾಗಿದೆ ಎಂದು ತಿಳಿಸುತ್ತಾರೆ ಗ್ರಾಮಸ್ಥರು.

ಸಂಬಂಧಪಟ್ಟವರು ಗ್ರಾಮದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ನೆಮ್ಮದಿಯ ಜೀವನ ನಡೆಸಲು ಸಹಕರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಗ್ರಾಮದಲ್ಲಿರುವ ಕೆಲ ಮೂಲಭೂತ ಸಮಸ್ಯೆಗಳಿಂದ ಜನರಿಗೆ ತೊಂದರೆ ಆಗುತ್ತಿದ್ದು, ಅವುಗಳ ಪರಿಹಾರಕ್ಕೆ ಜನಪ್ರತಿನಿಧಿ, ಅಧಿಕಾರಿಗಳು ತಕ್ಷಣ ಮುಂದಾಗಬೇಕು
– ಭಗವಂತ ಬೆಣ್ಣೆ, ಗ್ರಾಮಸ್ಥ 

–ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT