ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಪ್ರಯಾಣಕ್ಕೆ ಸರ್ಕಾರಿ ವಾಹನ ಬಳಕೆ

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವೈರಲ್; ಕಾರು ಮಾಲೀಕನಿಗೆ ಎಚ್ಚರಿಕೆಯ ನೋಟಿಸ್‌
Last Updated 19 ಜೂನ್ 2018, 13:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಜಿಲ್ಲಾ ಪಂಚಾಯ್ತಿಯ ಮುಖ್ಯ ಯೋಜನಾಧಿಕಾರಿಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕಾರು ಸ್ಥಳೀಯ ಮದುವೆ ಸಮಾರಂಭವೊಂದಕ್ಕೆ ಬಳಕೆಯಾಗಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‌‘ಕೆಎ 30 ಎ1787’ ನೋಂದಣಿಯ ವಾಹನವು ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ಅವರ ಕರ್ತವ್ಯಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡಿದೆ. ಹೀಗಾಗಿ, ‘ರಾಜ್ಯ ಸರ್ಕಾರದ ಸೇವೆಯಲ್ಲಿ’ ಎಂಬ ಹಸಿರು ಫಲಕವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.

ಕಾರಿಗೆ ಮದುವೆ ಸಮಾರಂಭದ ಫಲಕವನ್ನು ಅಂಟಿಸಲಾಗಿದ್ದು, ಅದರ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿಸೋಮವಾರ ವೈರಲ್ ಆಗಿದೆ. ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಕರ್ತವ್ಯಕ್ಕೆ ನಿಯೋಜಿತ ವಾಹನ ಬಳಕೆ ಆಗಿದೆ ಎಂದು ಹಲವರು ಆರೋಪಿಸಿದ್ದಾರೆ.

‘2,500 ಕಿ.ಮೀ. ಓಡಬೇಕು’: ‘ಜಿಲ್ಲಾ ಪಂಚಾಯ್ತಿಯಿಂದ ಟೆಂಡರ್‌ ಆಹ್ವಾನಿಸಿ, ಹೊರ ಗುತ್ತಿಗೆ ಆಧಾರದ ಮೇಲೆ ವಾಹನವನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ಕಾರು ಪ್ರತಿ ತಿಂಗಳು 2,500ಕಿ.ಮೀ ಓಡಬೇಕು. ಮಾಸಿಕ ₹29,500 ಬಾಡಿಗೆಗೆಯನ್ನು ಇದಕ್ಕೆ ಪಾವತಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ (ಆಡಳಿತ) ಆರ್.ಜಿ. ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆದರೆ, ಅಧಿಕಾರಿಗಳು ಪ್ರತಿ ತಿಂಗಳು ಇಷ್ಟು ದೂರ ಓಡಾಡುವುದಿಲ್ಲ. ಹೀಗಾಗಿ, ನಿಗದಿತ ದೂರವನ್ನು ಕ್ರಮಿಸಲು ಚಾಲಕರು ಈ ರೀತಿ ಖಾಸಗಿ ಕಾರ್ಯಕ್ರಮಗಳಿಗೆ ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ’ ತಿಳಿಸಿದರು.

‘ರಾಜ್ಯ ಸರ್ಕಾರದ ಸೇವೆಯಲ್ಲಿ ಎಂದು ಫಲಕ ಹಾಕಿಕೊಂಡು ಈ ರೀತಿ ದುರುಪಯೋಗಪಡಿಸಿಕೊಳ್ಳುವುದು ತಪ್ಪು. ನಮಗೂ ವಾಟ್ಸ್‌ಆ್ಯಪ್‌ನಲ್ಲಿ ಯಾರೋ ಕಳುಹಿಸಿದ ಬಳಿಕವೇ ವಿಷಯ ತಿಳಿದು ಬಂತು. ನಿಯೋಜನೆಗೊಂಡ ವಾಹನವು ಭಾನುವಾರವೂ ಒಳಗೊಂಡಂತೆ ಟೆಂಡರ್ ಅವಧಿ ಮುಗಿಯುವವರೆಗೆ ನಮ್ಮ ಅಧೀನದಲ್ಲಿ ಅಥವಾ ಸರ್ಕಾರದ ಕರ್ತವ್ಯದಲ್ಲೇ ಇರಬೇಕಾಗುತ್ತದೆ. ಇದೀಗ ನಿಯಮ ಉಲ್ಲಂಘಿಸಿರುವುದರಿಂದ ಕಾರಿನ ಮಾಲೀಕರಿಗೆ ನೋಟಿಸ್ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರಿ ವಾಹನಗಳು ಈ ರೀತಿ ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಅವುಗಳ ಹಾಗೂ ಚಾಲಕರ ಮೇಲೆ ನಿಗಾ ಇಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT