ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Fact Check | ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ನಮಾಜ್ ಅಭ್ಯಾಸ! ನಿಜವೇ?

Published : 1 ಜೂನ್ 2023, 21:11 IST
Last Updated : 1 ಜೂನ್ 2023, 21:11 IST
ಫಾಲೋ ಮಾಡಿ
Comments

‘ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ನಮಾಜ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತಿದೆ. ಮುಸ್ಲಿಂ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿನಿಯರಿಗೆ ನಮಾಜ್‌ ಅಭ್ಯಾಸ ಮಾಡಿಸುತ್ತಿದ್ದಾರೆ. ನಮಾಜ್ ಅಭ್ಯಾಸ ಮಾಡುತ್ತಿರುವವರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಇದ್ದಾರೆ. ಇದು ಉತ್ತರ ಪ್ರದೇಶದ ನಿಜವಾದ ‘ದಿ ಕೇರಳ ಸ್ಟೋರಿ’, ‘ಇದು ಲವ್‌ ಜಿಹಾದ್’ ಎಂಬ ವಿವರ ಇರುವ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ಇದರ ಜತೆಯಲ್ಲಿ ಒಂದು ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ. ಮಕ್ಕಳು ಮಂಡಿಯೂರಿ ಕುಳಿತು, ನೆಲಕ್ಕೆ ನಮಸ್ಕರಿಸುತ್ತಿರುವ ದೃಶ್ಯವು ಆ ವಿಡಿಯೊದಲ್ಲಿ ಇದೆ. ಈ ವಿಡಿಯೊ ಟ್ವಿಟರ್, ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ಆದರೆ, ಇದು ತಿರುಚಲಾದ ವಿಡಿಯೊ ಮತ್ತು ತಪ್ಪು ಮಾಹಿತಿ.

ಇದು ತಿರುಚಲಾದ ಮಾಹಿತಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಇದು ಉತ್ತರ ಪ್ರದೇಶದ ಬಾಗ್‌ಪತ್‌ನ ಶಾಲೆಯೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೊ. ಹಿಂದೂ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ನಮಾಜ್‌ ಹೇಳಿಕೊಡಲಾಗುತ್ತದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಅಮರ್ ಉಜಾಲ, ದೈನಿಕ್‌ ಭಾಸ್ಕರ್ ವರದಿ ಪ್ರಕಟಿಸಿವೆ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸರ್ವಧರ್ಮ ಸಮನ್ವಯ ಗೀತನೃತ್ಯವನ್ನು ನಡೆಸಲು ಉದ್ದೇಶಿಸಲಾಗಿತ್ತು. ಅದರಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನಾ ವಿಧಾನಗಳನ್ನು ತೋರಿಸಲಾಗಿತ್ತು. ಆ ನೃತ್ಯದ ಅಭ್ಯಾಸದ ವಿಡಿಯೊ ಅದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಪೂರ್ಣ ಪ್ರಮಾಣದಲ್ಲಿ ಇಲ್ಲ. ವಿದ್ಯಾರ್ಥಿನಿಯರು ಎಲ್ಲಾ ಸ್ವರೂಪದ ಪ್ರಾರ್ಥನೆಗಳನ್ನು ಮಾಡುತ್ತಿರುವ ದೃಶ್ಯಗಳು ಪೂರ್ಣ ವಿಡಿಯೊದಲ್ಲಿ ಇವೆ. ಈ ಬಗ್ಗೆ ದೂರು ದಾಖಲಾದ ನಂತರ ಶಾಲಾ ಆಡಳಿತ ಮಂಡಳಿಯು, ಗೀತನೃತ್ಯವನ್ನು ರದ್ದು ಮಾಡಿತ್ತು. ಆದರೆ ಕೆಲವರು ವಿಡಿಯೊವನ್ನು ಕತ್ತರಿಸಿ, ನಮಾಜ್‌ ಹೇಳಿಕೊಡಲಾಗುತ್ತಿದೆ ಎಂದು ಸುಳ್ಳುಸುದ್ದಿ ಹರಡಿದ್ದಾರೆ ಎಂದು ಆ ವರದಿಗಳಲ್ಲಿ ವಿವರಿಸಲಾಗಿದೆ’ ಎಂದು ದಿ ಲಾಜಿಕಲ್‌ ಇಂಡಿಯನ್‌ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT