ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ತ ಮಹಾಮೈತ್ರಿ, ಇತ್ತ ಮಹಾಘಟಬಂಧನ: ಮೋದಿಗೆ ಯಾರು ಎದುರಾಳಿ

ರಾಷ್ಟ್ರ ರಾಜಕಾರಣದಲ್ಲೀಗ ಮತ್ತೆ ಚುನಾವಣೆಯ ಕಾವು
Last Updated 13 ಜುಲೈ 2018, 13:59 IST
ಅಕ್ಷರ ಗಾತ್ರ

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೋಲಿಸಲು, ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಕೂಟ ಅಥವಾ ಪ್ರಾದೇಶಿಕ ಪಕ್ಷಗಳ ಮಹಾಘಟಬಂಧನ ವೇದಿಕೆ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಜುಲೈ ಮೊದಲ ವಾರದ ಅಂತ್ಯಕ್ಕೆ ಮೈತ್ರಿಯ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿ ಕೂಟ ಚುನಾವಣಾ ಪೂರ್ವ ಮೈತ್ರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟುಗೂಡಿ ಮಹಾಘಟಬಂಧನ ವೇದಿಕೆ (ತೃತೀಯ ರಂಗ ಮಾದರಿಯಲ್ಲಿ) ನಿರ್ಮಾಣದ ಪ್ರಕ್ರಿಯೆಗಳು ಚಾಲನೆ ಪಡೆದಿವೆ. ಬಿಜೆಪಿ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ ಆ ಪಕ್ಷವನ್ನು ಸೋಲಿಸುವುದೇ ಮಹಾಘಟಬಂಧನದ ಉದ್ದೇಶ.

ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಮಾಡಿದ್ದ ‘ಮಹಾಘಟಬಂಧನ’ ಎಂಬ ರಾಜಕೀಯ ಪ್ರಯೋಗ ಯಶಶ್ವಿಯಾಗಿತ್ತು. ನಂತರದ ಬೆಳವಣಿಗೆಗಳಲ್ಲಿ ಹೊಂದಾಣಿಕೆ ಕೊರೆತೆಯಿಂದ ಜೆಡಿಯು ಮತ್ತು ಬಿಜೆಪಿ ತೆಕ್ಕೆಗೆ ಸೇರಿತು.

ಮತ್ತೊಂದು ಕಡೆ ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಕೂಟವನ್ನು ಅಥವಾ ಪ್ರಾದೇಶಿಕ ಪಕ್ಷಗಳಮಹಾಘಟಬಂಧನ ಒಕ್ಕೂಟವನ್ನು ಬೆಂಬಲಿಸುವ ಕುರಿತಂತೆ ಎಡಪಕ್ಷಗಳು ತಟಸ್ಥ ನಿಲುವು ತಳೆದಿವೆ. ಮುಂದಿನ ದಿನಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಕೇಂದ್ರದಲ್ಲಿ ಎನ್‌ಡಿಎ ಹೊರತಾಗಿ ಸರ್ಕಾರ ರಚನೆಯಾಗುವ ಎರಡು ಸಾಧ್ಯತೆಗಳಿವೆ. ಒಂದು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರ. ಎರಡನೇಯದುಪ್ರಾದೇಶಿಕ ಪಕ್ಷಗಳ ಮುಂದಾಳತ್ವದ ಮೈತ್ರಿಕೂಟ. (ಮಹಾಘಟಬಂಧನ)

ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಕೂಟ...

2019ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರಸ್ ಮಹಾಮೈತ್ರಿಕೂಟ ರಚನೆ ಮಾಡಿಕೊಂಡಿದೆ. ಯುಪಿಎ ಸರ್ಕಾರದ ಜತೆಯಲ್ಲಿ ಇದ್ದ ಒಂದೆರಡು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಸೇರಿಸಿಕೊಂಡು ಮಹಾಮೈತ್ರಿ ಕೂಟಕ್ಕೆ ಚಾಲನೆ ಕೊಟ್ಟಿದೆ. ಆ ಮೂಲಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಉದ್ದೇಶ ಹೊಂದಿದೆ.

ಕಳೆದ ಮಾರ್ಚ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಯುಪಿಎ ಅಂಗ ಪಕ್ಷಗಳು ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷಗಳಿಗೆ ಔತಣ ಕೂಟ ಏರ್ಪಡಿಸಿದ್ದರು. 20 ಪ್ರಾದೇಶಿಕ ಪಕ್ಷಗಳು ಇದರಲ್ಲಿ ಭಾಗವಹಿಸಿದ್ದವು. ನಂತರದ ದಿನಗಳಲ್ಲಿ ಕಾಂಗ್ರೆಸ್ ಮಹಾಮೈತ್ರಿ ಕುರಿತಂತೆ ಬಿಎಸ್‌ಪಿ, ಟಿಎಂಸಿ, ಎಸ್‌ಪಿ ಮುಖಂಡರ ಜೊತೆ ಮಾತುಕತೆಗಳು ನಡೆದಿವೆಯಾದರು ಮಹಾಮೈತ್ರಿ ಕುರಿತಂತೆ ಫಲಪ್ರದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಇದು ಲೋಕಸಭಾ ಚುನಾವಣೆಗೂ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ. ಮೇ ತಿಂಗಳಲ್ಲಿ ನಡೆದ ಉತ್ತರಪ್ರದೇಶ ಉಪ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಬಿಜೆಪಿಯನ್ನು ಸೋಲಿಸಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಆಶಾ ಭಾವನೆಯನ್ನು ಕಾಂಗ್ರೆಸ್ ಹೊಂದಿದೆ. ಈಗಾಗಲೇ ಬಿಹಾರದಲ್ಲಿ ಆರ್‌ಜೆಡಿ, ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್,ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಬಹುತೇಕ ಹೊಂದಾಣಿಕೆ ಮಾಡಿಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಡಿಎಂಸಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಜಾರ್ಖಂಡ್‌ನಲ್ಲಿ ಜೆಎಂಎಂ, ಹಾಗೂ ಈಶಾನ್ಯ ಭಾರತದಲ್ಲಿ ಎನ್‌ಡಿಎಯೇತರ ಪಕ್ಷಗಳ ಜೊತೆಗಿನ ಮೈತ್ರಿಗೆ ಮಾತುಕತೆ ನಡೆಸುತ್ತಿದೆ. ಮಹಾಮೈತ್ರಿ ಕೂಟ ರಚನೆಯಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ವಿರೋಧಿಯಾಗಿರುವ ಮತ್ತು ಜಾತ್ಯತೀತ ಮನೋಭಾವದ ಪಕ್ಷಗಳನ್ನು ಮಹಾಮೈತ್ರಿಗೆ ಸೆಳೆಯಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ. ಒಂದು ವೇಳೆ ಮಹಾಮೈತ್ರಿಗೆ ಅಗತ್ಯ ಸ್ಥಾನಗಳು ಬರದೇ ಇದ್ದರೆ ಎಡಪಕ್ಷಗಳ ನೆರವು ಪಡೆಯುವುದಕ್ಕೂ ಕಾಂಗ್ರೆಸ್‌ ಚಿಂತಿಸಿದೆ.

ಪ್ರಾದೇಶಿಕ ಪಕ್ಷಗಳ ಮಹಾಘಟಬಂಧನ...

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿದು ಕಾಂಗ್ರೆಸ್ ನೆರವಿನೊಂದಿಗೆ ಮಹಾಘಟಬಂಧನ ಸರ್ಕಾರ ರಚನೆಗಾಗಿ ಪ್ರಾದೇಶಿಕ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದಕ್ಕೆ ಸೂಚನೆ ಎಂಬಂತೆ ಮಮತಾ ಬ್ಯಾನರ್ಜಿ, ಮಾಯಾವತಿ, ಶರದ್ ಪವಾರ್ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಮಹಾಘಟಬಂಧನ ಮೈತ್ರಿ ಮಾಡಿಕೊಳ್ಳಲು ಆ ಪಕ್ಷಗಳು ಚಿಂತಿಸಿವೆ.

ಮಹಾಘಟಬಂಧನ ಯಶಸ್ವಿಯಾದರೆ ತೃತೀಯರಂಗ ಮಾದರಿಯಲ್ಲಿ ಸರ್ಕಾರ ರಚನೆಯಾಗಲಿದೆ. ಆದರೆ ಇಲ್ಲಿ ಪ್ರದಾನಿ ಯಾರಗಾಬೇಕು ಎಂಬ ದೊಡ್ಡ ಪ್ರಶ್ನೆ ಎದುರಾಗುತ್ತದೆ. ಈಗಾಗಲೇ ಎನ್‌ಸಿಪಿಯ ಶರದ್‌ ಪವಾರ್, ಬಿಎಸ್‌ಪಿಯ ಮಾಯಾವತಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌, ಟಿಡಿಪಿಯ ಚಂದ್ರಬಾಬು ನಾಯ್ದು ಪ್ರಧಾನ ಮಂತ್ರಿ ಅಭ್ಯರ್ಥಿಗಳು ಎಂದೇ ಬಿಂಬಿತರಾಗಿದ್ದಾರೆ.

ಮಹಾಘಟಬಂಧನಕ್ಕೆ ಟಿಎಂಸಿ, ಟಿಆರ್‌ಎಸ್‌, ಟಿಡಿಪಿ,ಎಎಪಿ ಒಲವು ವ್ಯಕ್ತಪಡಿಸಿವೆ. ಎಲ್ಲವುಅಂದುಕೊಂಡಂತೆ ನಡೆದರೆ ಬರುವ ಅಕ್ಟೋಬರ್ ವೇಳೆಗೆ ಮೈತ್ರಿ ಅಸ್ತಿತ್ವಕ್ಕೆ ಬರಲಿದೆ. ಈ ಸಮಯಕ್ಕೆ ಸಾಧ್ಯವಾಗದಿದ್ದರೆ, ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ಥಾನ,ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಈ ಮಹಾಘಟಬಂಧನ ಪ್ರಯೋಗ ಕಾವು ಪಡೆಯುವ ಸಾಧ್ಯತೆ ಇದೆ. ಈ ರಾಜ್ಯಗಳ ಫಲಿತಾಂಶ ಮಹಾಮೈತ್ರಿಕೂಟ ಹಾಗೂ ಮಹಾಘಟಬಂಧನ ಮೈತ್ರಿಯ ಮೇಲೆ ಪರಿಣಾಮ ಬೀರಲಿದ್ದು ಈ ಮೈತ್ರಿಗಳ ಮುಂದಿನ ನಡೆಗೂ ದಿಕ್ಸೂಚಿಯಾಗಲಿದೆ.

ಎಡಪಕ್ಷಗಳ ತಟಸ್ಥ ನಿಲುವು...

ಕೇರಳ, ಪಶ್ಚಿಮಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿರುವ ಕಮ್ಯೂನಿಸ್ಟ್‌ ಪಕ್ಷಗಳು 2019ರ ಲೋಕಸಭೆ ಚುನಾವಣೆ ಕುರಿತಂತೆ ತಟಸ್ಥ ನಿಲುವು ತಳೆಯುವ ಸಾಧ್ಯತೆಗಳೇ ನಿಚ್ಚಳವಾಗಿವೆ. ಈ ಬಗ್ಗೆ ಎಡಪಕ್ಷಗಳ ನಾಯಕರು ಮಹಾಮೈತ್ರಿಕೂಟ ಹಾಗೂ ಪ್ರಾದೇಶಿಕ ಪಕ್ಷಗಳ ಮಹಾಘಟಬಂಧನ ಮೈತ್ರಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ ಎಂದು ಕಮ್ಯೂನಿಸ್ಟ್ ಪಕ್ಷಗಳ ಅಂತರಿಕ ಮೂಲಗಳು ತಿಳಿಸಿವೆ. ಈಗಾಗಲೇ ಬಿಜೆಪಿ ವಿರೋಧಿ ಮೈತ್ರಿ ಕೂಟ ರಚನೆ ಅಸ್ತಿತ್ವಕ್ಕೆ ಬಂದಿದೆ, ನಮ್ಮ ನಡೆಯನ್ನು ನಿರ್ಧರಿಸಿಲ್ಲ ಎಂದುಇತ್ತೀಚೆಗೆಸಿಪಿಐ(ಎಂ)ನ ಹಿರಿಯ ನಾಯಕ ಸೀತಾರಾಂ ಯೆಚೂರಿ ಹೇಳಿಕೆನೀಡಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡುವುದು ನಿಚ್ಚಳವಾಗಿದೆ. ಆದರೆ ಮಹಾಮೈತ್ರಿ ಹಾಗೂ ಮಹಾಘಟಬಂಧನದಂತಹ ರಾಜಕೀಯ ಪ್ರಯೋಗಗಳು ಎಷ್ಟರಮಟ್ಟಿಗೆ ಯಶಸ್ವಿಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT