ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮ್ಯಾಂಡಸ್ ಪ್ರಭಾವ: 5 ಸಾವು- ಮಳೆ ಮುಂದುವರಿಕೆ, ಚಳಿ ತೀವ್ರ

ಮಾಮಲ್ಲಪುರಂ ತೀರಕ್ಕೆ ಅಪ್ಪಳಿಸಿದ ಚಂಡಮಾರುತ: 400 ಮರ ನೆಲಕ್ಕೆ
Last Updated 10 ಡಿಸೆಂಬರ್ 2022, 20:09 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಹಾಗೂಅಂಧ್ರದ ಕರಾವಳಿ ಪ್ರದೇಶಗಳಲ್ಲಿಆತಂಕ ಸೃಷ್ಟಿಸಿದ ಮ್ಯಾಂಡಸ್ ಚಂಡಮಾರುತದ ಪ್ರಭಾವ ಶನಿವಾರ ತಗ್ಗಿದೆ. ಗಂಟೆಗೆ 65ರಿಂದ 75 ಕಿಲೋ
ಮೀಟರ್ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತವು 85 ಕಿಲೋಮೀಟರ್ ವೇಗದಲ್ಲಿ ತಮಿಳುನಾಡಿನ ಮಾಮಲ್ಲಪುರಂ ಕಡಲ ತೀರಕ್ಕೆಶನಿವಾರ ಬೆಳಗಿನ ಜಾವ ಅಪ್ಪಳಿಸಿತು. ನಂತರ ಅದರ ವೇಗ ಕ್ಷೀಣಗೊಂಡು, ವಾಯುಭಾರ ಕುಸಿತವಾಗಿ ಮಾರ್ಪಾಡಾಯಿತು.

ಎರಡೂ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ.ತಮಿಳುನಾಡಿನಲ್ಲಿ ಚಂಡಮಾರುತ ಸಂಬಂಧಿ ಅವಘಡಗಳಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಚೆನ್ನೈನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮೃತಪಟ್ಟಿದ್ದಾರೆ. ಗೋಡೆ ಕುಸಿದು ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ.

ಚೆನ್ನೈನಲ್ಲಿ 400ಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ. 100 ವರ್ಷಕ್ಕೂ ಹಳೆಯದಾದ ಕೆಲವು ಮರಗಳು ಉರುಳಿವೆ. ಚೆನ್ನೈನ ನಾಲ್ಕು ಮೆಟ್ರೊ ನಿಲ್ದಾಣಗಳ ಛಾವಣಿ ಹಾನಿಗೊಂಡಿದೆ ಎಂದು ಮೆಟ್ರೊ ರೈಲು ನಿಗಮ ತಿಳಿಸಿದೆ. ಸುಮಾರು ₹3.50 ಕೋಟಿಯಷ್ಟು ಮೌಲ್ಯದ ಸೊತ್ತಿಗೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. 181 ಮನೆಗಳು ಹಾನಿಗೊಂಡಿವೆ.98 ಜಾನುವಾರುಗಳು ಮೃತಪಟ್ಟಿವೆ.ಮುನ್ನೆಚ್ಚರಿಕೆ ಕ್ರಮವಾಗಿ 9 ಸಾವಿರಕ್ಕೂ ಹೆಚ್ಚು ಜನರನ್ನು 210 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು.30 ವಿಮಾನಗಳ ಹಾರಾಟವನ್ನು ಶನಿವಾರ ಬೆಳಗಿನ ಜಾವ ರದ್ದುಪಡಿಸಲಾಗಿತ್ತು.

ವಿಪತ್ತು ಎದುರಿಸಲು ಸನ್ನದ್ಧವಾಗಿದ್ದ ಚೆನ್ನೈ ಬೃಹತ್ ಮಹಾನಗರ ಪಾಲಿಕೆ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು.ಪಾಲಿಕೆ, ಪೊಲೀಸ್, ಎಸ್‌ಡಿಆರ್‌ಎಫ್ ಸೇರಿದಂತೆ 25,000 ಜನರನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಭಾರಿ ಮಳೆ ಸುರಿದರೂ, ಚೆನ್ನೈನಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಗಿರಲಿಲ್ಲ. 100ಕ್ಕೂ ಹೆಚ್ಚು ಮರಗಳನ್ನು ಶನಿವಾರ ಮಧ್ಯಾಹ್ನದ ಒಳಗೆ ತೆರವು ಮಾಡಲಾಗಿತ್ತು. ನಗರದ ಎಲ್ಲ 22 ಕೆಳಸೇತುವೆಗಳು ಸಂಚಾರಕ್ಕೆ ಮುಕ್ತವಾದವು. ಮುನ್ನೆಚ್ಚರಿಕೆ ಕ್ರಮವಾಗಿ ಕಡಿತ ಮಾಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಮಧ್ಯಾಹ್ನದ ಹೊತ್ತಿಗೆ ಸರಿಪಡಿಸಲಾಯಿತು. ಅತ್ಯಂತ ವೇಗದಲ್ಲಿ ಪರಿಹಾರ ಕೆಲಸ ಮಾಡಿದ ಪಾಲಿಕೆಯನ್ನು ಜನರು ಪ್ರಶಂಸಿಸಿದ್ದಾರೆ.

ಚೆನ್ನೈನಲ್ಲಿ ತೀವ್ರ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದರು.ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಿದ ಸಿಬ್ಬಂದಿಯನ್ನು ಅವರು ಶ್ಲಾಘಿಸಿದ್ದಾರೆ.

ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ, ನುಂಗಂಬಾಕಂ ಮತ್ತು ಮೀನಂಬಾಕಂ ಹವಾಮಾನ ನಿಗಾ ಕೇಂದ್ರದಲ್ಲಿ 10 ಸೆಂ.ಮೀ. ಮಳೆ ದಾಖಲಾಗಿದೆ. ತಿರುವಣ್ಣಾಮಲೈನಲ್ಲಿ ಅತಿಹೆಚ್ಚು 25 ಸೆಂ.ಮೀ. ಮಳೆಯಾಗಿದ್ದು, ಬೆಳೆಹಾನಿ ಸಂಭವಿಸಿದೆ.ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಹಾಗೂ ರಾಯಲಸೀಮಾ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಿದೆ. ರಾಜ್ಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿ ಆಗಿಲ್ಲ.

--

ಮಳೆ ಮುಂದುವರಿಕೆ: ಚಳಿ ತೀವ್ರ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮ್ಯಾಂಡಸ್‌’ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ. ಜತೆಗೆ, ಮೈಕೊರೆಯುವ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಚಿತ್ರದುರ್ಗ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾನುವಾರ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಜೋರು ಮಳೆ ಆಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ, ಹಾಸನ, ಕೋಲಾರ ಹಾಗೂ ಮೈಸೂರು ಜಿಲ್ಲೆಯಲ್ಲೂ ಸಾಧಾರಣ ಮಳೆ ಸುರಿಯಲಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಡಿ.14ರವರೆಗೆ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಕೂಡಾ ಮಳೆಯಾಗಿದೆ. ಕೊಯ್ಲಿಗೆ ಬಂದಿರುವ ಬೆಳೆಗಳು ಅಕಾಲಿಕ ಮಳೆಯಿಂದ ಹಾಳಾಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಲವು ಜಿಲ್ಲೆಗಳಲ್ಲಿ ತಾಪಮಾನ ಕುಸಿದಿದ್ದು, ಶನಿವಾರ ಚಳಿ ವಾತಾವರಣ ಇತ್ತು. ಬೆಂಗಳೂರಿನಲ್ಲಿ ಶನಿವಾರ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT