ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವದ ಹಿಂದಿನ ಒಂದು ವಾರ ಪ್ರತಿದಿನ ಕನಿಷ್ಠ ನೂರು ವಿಮಾನಗಳ ಸಂಚಾರ ವ್ಯತ್ಯಯ

Last Updated 6 ಜನವರಿ 2018, 6:50 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 18–26 ಅವಧಿಯಲ್ಲಿ ದೆಹಲಿಯಿಂದ ದೇಶದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ವಿಮಾನಗಳ ಸುಮಾರು ಸಾವಿರಕ್ಕೂ ಹೆಚ್ಚು ಪ್ರಯಾಣಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಈ ವೇಳೆ ಪ್ರತಿದಿನ ಕನಿಷ್ಠ ನೂರು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಪ್ರತಿವರ್ಷ ನಡೆಯುವ ಪರೇಡ್‌ನಲ್ಲಿ ಭಾಗವಹಿಸಲು ಏರ್‌ ಶೋ ಅಭ್ಯಾಸ ನಡೆಸಲಾಗುತ್ತದೆ. ಈ ತಯಾರಿ ಜನವರಿ 19ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಪ್ರತಿದಿನ 60–90 ನಿಮಿಷಗಳ ಕಾಲ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ.

‘ಹಿಂದಿನ ವರ್ಷಗಳಲ್ಲಿ ಇಂತಹ ಸಮಯದಲ್ಲಿ ವಿಮಾನಗಳ ಸಂಚಾರ ಅವಧಿಯನ್ನು ಮರು ಹೊಂದಿಸಲಾಗುತ್ತಿತ್ತು. ಇದರಿಂದ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗುತ್ತಿತ್ತು. ಇದನ್ನು ಗಮನದಲ್ಲಿರಿಸಿ ಈ ಬಾರಿ ವಿಮಾನಗಳ ಸಮಯ ಬದಲಾವಣೆಗೆ ಬದಲಾಗಿ ಪ್ರಯಾಣಿಕರಿಗೆ ಬೇರೆ ಅವಧಿಯಲ್ಲಿ ಪ್ರಯಾಣ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ವಿಮಾನ ನಿಲ್ದಾಣದ ಆಯೋಜಕರು ಹೇಳಿದ್ದಾರೆ.

ಈ ಬಗ್ಗೆ ಭಾರತೀಯ ವಿಮಾನಯಾನ ಪ್ರಾಧಿಕಾರ ಮಾಹಿತಿ ಪ್ರಕಟಿಸಿದ್ದು, ಜನವರಿ 18–26 ಅವಧಿಯಲ್ಲಿ ಪ್ರತಿದಿನ 10.35 ರಿಂದ 12.15ರ ವರೆಗೆ ವಿಮಾನ ನಿಲ್ದಾಣ ಸಂಚಾರ ಮುಕ್ತವಾಗಿರಲಿದೆ.

ಇದಕ್ಕೆ ಸಂಬಂಧಿಸಿದಂತೆ ವಿಮಾನಯಾನ ಪ್ರಾಧಿಕಾರ ಹಾಗೂ ದೆಹಲಿ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ(ಡಿಐಎಎಲ್‌) ಜತೆ ಒಪ್ಪಂದ ಏರ್ಪಟ್ಟಿದ್ದು, ದೇಶೀಯ ವಿಮಾನಗಳ ಹಾರಾಟ ರದ್ದುಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದರಿಂದ ಸುಮಾರು 15 ಸಾವಿರ ಪ್ರಯಾಣಿಕರಿಗೆ ಪರಿಣಾಮ ಉಂಟಾಗಲಿದೆ ಎಂದು ಹೇಳಲಾಗಿದೆ.

2017ರ ಮಾಹಿತಿಯಂತೆ ದೆಹಲಿ ವಿಮಾನ ನಿಲ್ದಾಣ ಪ್ರತಿದಿನ 1,350 ವಿಮಾನಗಳು ಸಂಚಾರವನ್ನು ನಿರ್ವಹಿಸುತ್ತಿದೆ. ಅಧಿಕಾರಿಗಳು ಹೇಳುವಂತೆ ‘ಪ್ರತಿವರ್ಷ ಈ ಪ್ರಮಾಣದಲ್ಲಿ ಶೇ.10–15ರಷ್ಟು ಹೆಚ್ಚಳವಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಶೇ.20ರಷ್ಟು ಹೆಚ್ಚಳವಾಗಿದೆ. ಆದರೆ, ವಿಮಾನ ನಿಲ್ದಾಣದ ಪ್ರದೇಶ ಹಾಗೂ ಟರ್ಮಿನಲ್‌ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ’

‘ವಿಮಾನಗಳನ್ನು ಮರುಹೊಂದಿಸುವ ಆಯ್ಕೆ ಇನ್ನು ಮಂದೆ ಇರುವುದಿಲ್ಲ. ಏಕೆಂದರೆ ವಿಮಾನಗಳನ್ನು ಮರುಹೊಂದಿಸುವುದರಿಂದ ಇಡೀ ದಿನದ ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಬೇಕಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕಿದ್ದ ಎಲ್ಲ ದೇಶೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಿಮಾನಗಳು ಕೇವಲ ಒಂದು ಪ್ರದೇಶದ ಮಾತ್ರವಲ್ಲದೆ ಹಲವು ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸುವುದರಿಂದ ಅವುಗಳನ್ನು ರದ್ದುಗೊಳಿಸಲಾಗದು. ಹಾಗಾಗಿ ಸಮಯ ಮರುಹೊಂದಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗಳನ್ನು ತಪ್ಪಿಸುವ ಸಲುವಾಗಿ ಪ್ರಯಾಣಿಕರಿಗೆ ಅನುಕೂಲ, ಸುರಕ್ಷಿತವೆನಿಸುವ ಪರ್ಯಾಯ ವ್ಯವಸ್ಥೆಗಳನ್ನು ಮಾಡುವ ಕುರಿತು ಭಾರತೀಯ ವಿಮಾನಯಾನ ಪ್ರಾಧಿಕಾರ–ವಿಮಾನ ಮಾರ್ಗಸೂಚಿ ಇಲಾಖೆ, ಡಿಐಎಎಲ್‌ ಹಾಗೂ ಹಲವು ವಿಮಾನಯಾನ ಸಂಸ್ಥೆಗಳು ಚರ್ಚೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT