ಅಹಮದಾಬಾದ್(ಪಿಟಿಐ): ಸುಮಾರು 600 ಕೋಟಿ ಮೌಲ್ಯದ ಮಾದಕದ್ರವ್ಯವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಪಾಕಿಸ್ತಾನದ ಬೋಟೊಂದನ್ನು ಗುಜರಾತ್ ಕರಾವಳಿ ತೀರದ ಅಂತರ ರಾಷ್ಟ್ರೀಯ ಜಲ ಗಡಿಯಲ್ಲಿ ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ವಶಕ್ಕೆ ಪಡೆದಿವೆ.
ಬೋಟ್ ನಲ್ಲಿದ್ದ ಮಾದಕದ್ರವ್ಯ ಒಳಗೊಂಡ 232 ಪ್ಯಾಕೆಟ್ ಗಳು ಮತ್ತು ಪಾಕಿಸ್ತಾನ ಮೂಲದ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಪಿಎಸ್ ತಂತ್ರಜ್ಞಾನದ ನೆರವು ಬಳಿಸಿಕೊಂಡು ಕರಾವಳಿ ಕಾವಲು ಪಡೆ 'ಸಂಗ್ರಾಮ್' ಮತ್ತು ನೌಕಾಪಡೆಯ 'ಕಂಡೋಲ್' ಹಡಗುಗಳ ಮೂಲಕ ಬೆನ್ನಟ್ಟಿ ಮಾದಕ ವಸ್ತು ಸಾಗಿಸುತ್ತಿದ್ದ ಬೋಟನ್ನು ವಶಕ್ಕೆ ಪಡೆಯಿತು ಎಂದು ಮಾಹಿತಿ ನೀಡಿದ್ದಾರೆ.