ಸಾಗರ(ಮಧ್ಯಪ್ರದೇಶ): ದೇವಸ್ಥಾನವೊಂದರ ಗೋಡೆ ಕುಸಿದು ಬಿದ್ದು 9 ಮಕ್ಕಳು ದುರಂತವಾಗಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಶಹಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇಲ್ಲಿಯವರೆಗೆ ದೊರೆತ ಮಾಹಿತಿ ಪ್ರಕಾರ ಘಟನೆಯಲ್ಲಿ 10ರಿಂದ 15 ವರ್ಷ ವಯಸ್ಸಿನ ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ’ ಎಂದು ಸಾಗರ ವಿಭಾಗೀಯ ಆಯುಕ್ತ ವೀರೇಂದ್ರ ಸಿಂಗ್ ರಾವತ್ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
‘ಭಾರಿ ಮಳೆಗೆ ಪಾಳುಬಿದ್ದ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿರುವ ಸುದ್ದಿ ಕೇಳಿ ಬೇಸರವಾಗಿದೆ. ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮೃತ ಮಕ್ಕಳ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಘೋಷಿಸಲಾಗಿದೆ’ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.