ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ: 5 ವರ್ಷದಲ್ಲಿ ಮೊಟ್ಟೆ ಪಫ್ಸ್‌ಗೆ ₹3.62 ಕೋಟಿ ಖರ್ಚು ಮಾಡಿರುವ ಜಗನ್!

Published 21 ಆಗಸ್ಟ್ 2024, 9:38 IST
Last Updated 21 ಆಗಸ್ಟ್ 2024, 9:38 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ವತಿಯಿಂದ ಪ್ರತಿದಿನ 993 ಮೊಟ್ಟೆ ಬಳಸಿ ತಯಾರಿಸಲಾದ ಪಫ್ಸ್‌ಗಳನ್ನು ಖರೀದಿಸಲಾಗಿದ್ದು, 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್‌ಗಳಗಾಗಿಯೇ ₹3.62 ಕೋಟಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪತ್ರಕರ್ತೆ ನಬಿಲಾ ಜಮಾಲ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದು, ‘ಆಂಧ್ರದ ಮಾಜಿ ಮುಖ್ಯಮಂತ್ರಿಗಳ ಕಚೇರಿಯು ಕಳೆದ 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್‌ಗಳಿಗಾಗಿ ₹3.62 ಕೋಟಿ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಪ್ರತಿದಿನ 993 ಮೊಟ್ಟೆ ಪಫ್ಸ್‌ಗಳಂತೆ 5 ವರ್ಷಗಳಲ್ಲಿ 18 ಲಕ್ಷ ಮೊಟ್ಟೆ ಪಫ್ಸ್‌ಗಳನ್ನು ಖರೀದಿಸಲಾಗಿದೆ. ಇವುಗಳಿಗಾಗಿ ಪ್ರತಿವರ್ಷ ₹72 ಲಕ್ಷ ವೆಚ್ಚ ಮಾಡಲಾಗಿದೆ. ಈ ಕುತೂಹಲಕಾರಿ ಪ್ರಕರಣದಿಂದ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿರುವ ಬಗ್ಗೆ ಟಿಡಿಪಿ ಸರ್ಕಾರ ತನಿಖೆಗೆ ಮುಂದಾಗಿದೆ’ ಎಂದು ಹೇಳಿದ್ದಾರೆ.

ಆರೋಪ ತಳ್ಳಿ ಹಾಕಿದ ವೈಎಸ್‌ಆರ್‌ಸಿಪಿ

ಪತ್ರಕರ್ತೆ ನಬಿಲಾ ಜಮಾಲ್ ಆರೋಪ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ, ‘ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅಥವಾ ನಂಬಲರ್ಹ ಮೂಲಗಳನ್ನು ಉಲ್ಲೇಖಿಸದೆ ಪತ್ರಕರ್ತರು ಇಂತಹ ಆಧಾರರಹಿತ ವದಂತಿಗಳಿಗೆ ಹರಡುತ್ತಿರುವುದನ್ನು ನೋಡುವುದು ನಿಜವಾಗಿಯೂ ನಿರಾಶಾದಾಯಕವಾಗಿದೆ. ಯಾವುದೇ ದೃಢೀಕರಣ ಅಥವಾ ಪುರಾವೆಗಳಿಲ್ಲದೆ ಇಂತಹ ಅಬ್ಬರದ ತಪ್ಪು ಮಾಹಿತಿಯನ್ನು ಟ್ವೀಟ್ ಮಾಡುವುದು ಹೇಗೆ? ಸಾಮಾಜಿಕ ಮಾಧ್ಯಮಗಳಿಂದ ಯಾದೃಚ್ಛಿಕ (ರ‍್ಯಾಂಡಮ್‌) ಮಾಹಿತಿಯನ್ನು ಪಡೆದು ಅವುಗಳನ್ನು ಸುದ್ದಿಗಳಾಗಿ ಪರಿವರ್ತಿಸುವುದು ಪತ್ರಿಕೋದ್ಯಮಕ್ಕೆ ಮಾಡುವ ಅಪಚಾರವಾಗಿದೆ. ಸತ್ಯಕ್ಕಿಂತ ವದಂತಿಗಳಿಗೆ ಆದ್ಯತೆ ನೀಡುತ್ತಿರುವುದು ವಿಷಾದದ ಸಂಗತಿ’ ಎಂದು ತಿರುಗೇಟು ನೀಡಿದೆ.

ಈಚೆಗೆ ಮೊಟ್ಟೆ ಪಫ್ಸ್ ವೆಚ್ಚಕ್ಕೆ ಸಂಬಂಧಿಸಿ ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ವೈಎಸ್‌ಆರ್‌ಸಿಪಿ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT