ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕಾನ್‌ಸ್ಟೆಬಲ್ ಜೊತೆ ಸಂಬಂಧಕ್ಕೆ ಡಿವೈಎಸ್‌ಪಿಗೆ ಹಿಂಬಡ್ತಿ ಶಿಕ್ಷೆ!

Published 24 ಜೂನ್ 2024, 20:00 IST
Last Updated 24 ಜೂನ್ 2024, 20:00 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಡಿವೈಎಸ್‌ಪಿ ಹುದ್ದೆಯಲ್ಲಿದ್ದ ಕೃಪಾಶಂಕರ್ ಕನೌಜಿಯಾ ಅವರಿಗೆ ಮಹಿಳಾ ಕಾನ್‌ಸ್ಟೆಬಲ್ ಒಬ್ಬರ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಕಾರಣಕ್ಕೆ ಕಾನ್‌ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.

ಡಿವೈಎಸ್‌ಪಿ ಹುದ್ದೆಗೆ ಬಡ್ತಿ ಪಡೆಯುವ ಮೊದಲು ಈ ಪೊಲೀಸ್ ಅಧಿಕಾರಿ ಕಾನ್‌ಸ್ಟೆಬಲ್‌ ಆಗಿದ್ದರು. ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು.

ಕಾನ್‌ಸ್ಟೆಬಲ್ ಆಗಿ ಪೊಲೀಸ್ ಇಲಾಖೆಯನ್ನು ಸೇರಿದ್ದ ಕೃಪಾಶಂಕರ್ ಅವರು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಮೊದಲು ಹೆಡ್‌ ಕಾನ್‌ಸ್ಟೆಬಲ್ ಆಗಿ ಬಡ್ತಿ ಪಡೆದ ಅವರು ಕೆಲವು ವರ್ಷಗಳ ಹಿಂದೆ ಡಿವೈಎಸ್‌ಪಿ ಆಗಿ ಬಡ್ತಿ ಪಡೆದರು.

ಆದರೆ 2021ರಲ್ಲಿ ಅವರು ಮಹಿಳಾ ಕಾನ್‌ಸ್ಟೆಬಲ್ ಒಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಇದಾದ ನಂತರ ಅವರನ್ನು ಅಮಾನತಿನಲ್ಲಿ ಇರಿಸಿ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.

ಕೃಪಾಶಂಕರ್ ಅವರು ಪೊಲೀಸರು ಪಾಲಿಸಬೇಕಿರುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಗೊತ್ತಾದ ನಂತರ ಅವರಿಗೆ ಕಾನ್‌ಸ್ಟೆಬಲ್‌ ಹುದ್ದೆಗೆ ಹಿಂಬಡ್ತಿ ನೀಡಲಾಯಿತು. ನಂತರ ಹಿಂದೆ ತಾವು ಇನ್‌ಸ್ಪೆಕ್ಟರ್ ಆಗಿದ್ದ ಪಿಎಸಿ ಘಟಕಕ್ಕೇ ಅವರನ್ನು ಕಾನ್‌ಸ್ಟೆಬಲ್‌ ಆಗಿ ವರ್ಗಾಯಿಸಲಾಯಿತು.

2021ರ ಜುಲೈನಲ್ಲಿ ಕೃಪಾಶಂಕರ್ ಅವರು ತುರ್ತು ಕೌಟುಂಬಿಕ ಕೆಲಸ ಇದೆ ಎಂಬ ಕಾರಣ ನೀಡಿ ಒಂದು ದಿನದ ರಜೆ ಪಡೆದಿದ್ದರು. ರಜೆ ಪಡೆದು ಮನೆಗೆ ಹೋಗುವ ಬದಲು ಅವರು ಮಹಿಳಾ ಕಾನ್‌ಸ್ಟೆಬಲ್ ಜೊತೆ ಕಾನ್ಪುರಕ್ಕೆ ತೆರಳಿದ್ದರು ಎಂದು ಮೂಲಗಳು ಹೇಳಿವೆ.

ಈ ನಡುವೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ್ದ ಕೃಪಾಶಂಕರ್ ಅವರ ಪತ್ನಿ, ತಮ್ಮ ಪತಿ ಇನ್ನೂ ಮನೆಗೆ ಬಂದಿಲ್ಲ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದರು. ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

ಅವರ ಮೊಬೈಲ್‌ ಫೋನ್‌ ಲೊಕೇಷನ್‌ ಆಧರಿಸಿ, ಅವರು ಕಾನ್ಪುರದ ಹೋಟೆಲ್‌ ಒಂದರಲ್ಲಿ ಇರುವುದನ್ನು ಪೊಲೀಸರು ಪತ್ತೆಮಾಡಿದರು. ಅವರನ್ನು ಯಾರೋ ಅಪಹರಿಸಿರಬೇಕು ಎಂಬ ಅನುಮಾನದ ಅಡಿ ಪೊಲೀಸರು ಆ ಹೋಟೆಲ್ ಮೇಲೆ ದಾಳಿ ನಡೆಸಿದರು. ಆಗ ಕೃಪಾಶಂಕರ್ ಅವರು ಮಹಿಳಾ ಕಾನ್‌ಸ್ಟೆಬಲ್‌ ಜೊತೆ ಸಿಕ್ಕಿಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT