ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎ‍ಪಿ ಅಧಿಕಾರಕ್ಕೇರಿದರೆ ಪಂಜಾಬ್‌ನ ಪ್ರತಿ ವ್ಯಕ್ತಿಗೂ ಸುರಕ್ಷತೆ: ಕೇಜ್ರಿವಾಲ್

Last Updated 15 ಫೆಬ್ರುವರಿ 2022, 16:25 IST
ಅಕ್ಷರ ಗಾತ್ರ

ಲೂಧಿಯಾನ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರಾಗಿರುವ ಅರವಿಂದ ಕೇಜ್ರಿವಾಲ್, ಪಂಜಾಬ್‌ನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಯಾವುದೇ ಜಾತಿ, ಧರ್ಮವನ್ನು ಲೆಕ್ಕಿಸದೆ ‍‍ಪ್ರತಿಯೊಬ್ಬ ವ್ಯಕ್ತಿಗೂ ಸುರಕ್ಷತೆಯ ಖಾತ್ರಿ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ ಸಂಭವಿಸಿದ ಹಿಂಸಾಚಾರಗಳಿಂದಾಗಿ ಪಂಜಾಬ್‌ ಜನರ ನಡುವೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದಿರುವ ಅವರು, ಜನರಲ್ಲಿ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂದಿದ್ದಾರೆ.

'ಸೋಮವಾರ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು, 'ನಾನು ಹಿಂದೂ. ನನ್ನಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತೆಯ ಬಗ್ಗೆ ಸಾಕಷ್ಟು ಆತಂಕ ಮೂಡಿದೆ. ರಾಜ್ಯದಲ್ಲಿ ನಡೆದ ಹಿಂಸಾಚಾರಗಳು ನನ್ನನ್ನು ಘಾಸಿಗೊಳಿಸಿವೆ. ನಾನು ಮತ್ತು ನನ್ನ ಕುಟುಂಬ ಭಯದಲ್ಲಿದ್ದೇವೆ' ಎಂದು ಹೇಳಿದ್ದರು' ಎಂದು ತಿಳಿಸಿದ್ದಾರೆ.

'ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಯನೀಯ ಸ್ಥಿತಿಯಲ್ಲಿರುವುದು ಮತ್ತು ಕಳೆದ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡೆಸುತ್ತಿರುವ ಕೊಳಕು ರಾಜಕೀಯವು ಜನರಲ್ಲಿ ಆತಂಕ ಸೃಷ್ಟಿಸಿದೆ' ಎಂದು ಆರೋಪಿಸಿದ್ದಾರೆ.

'ಪಂಜಾಬ್‌ನ ಪ್ರತಿ ವ್ಯಕ್ತಿಗೂ ಮತ್ತು ಪ್ರತಿ ಉದ್ಯಮಿಗೂ, ಅವರುಹಿಂದೂ, ಸಿಖ್, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ರಾಜ್ಯದ ಮೂರು ಕೋಟಿ ಜನರಿಗೂ ಭದ್ರತೆ ನೀಡುವ ಹೊಣೆಯನ್ನುಎಎಪಿ ಸರ್ಕಾರವು ಹೊತ್ತುಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ರಕ್ಷಣೆಯ ಜವಾಬ್ದಾರಿ ಎಎಪಿ ಸರ್ಕಾರದ್ದು' ಎಂದು ಭರವಸೆ ನೀಡಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರದ ಬಿಜೆಪಿ ಸರ್ಕಾರದೊಂದಿಗೆ ತಮ್ಮ ಸಂಬಂಧ ಹೇಗಿರಲಿದೆ ಎಂಬುದನ್ನು ವಿವರಿಸಿದ ಕೇಜ್ರಿವಾಲ್, 'ದೆಹಲಿಯಲ್ಲಿರುವ ನಮ್ಮ (ಎಎಪಿ) ಸರ್ಕಾರವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಅದರ ಹೊರತಾಗಿಯೂ, ರಾಷ್ಟ್ರದ ಭದ್ರತೆ ಮತ್ತು ಜನರ ಕಲ್ಯಾಣದ ವಿಚಾರ ಬಂದಾಗ ನಾವು ಸದಾ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ' ಎಂದು ತಿಳಿಸಿದ್ದಾರೆ.

'ಕೋವಿಡ್–19 ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇವೆ. ದೆಹಲಿಯ ಲಕ್ಷಾಂತರ ಜೀವಗಳನ್ನು ಕಾಪಾಡಿದ್ದೇವೆ. ಯಾವಾಗ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗುವುದೋ ಆಗ ಕೇಂದ್ರ ಸರ್ಕಾರದೊಂದಿಗೆ ಸಂಬಂಧವನ್ನು ಉತ್ತಮಪಡಿಸಿಕೊಳ್ಳುತ್ತೇವೆ. ರಾಜ್ಯದ ಶ್ರೇಯಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ' ಎಂದು ವಿವರಿಸಿದ್ದಾರೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 20ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. ಎಸ್‌ಎಡಿ–ಬಿಜೆಪಿ ಮೈತ್ರಿಕೂಟವು 18 ಕ್ಷೇತ್ರಗಳಲ್ಲಿ ಜಯ ಕಂಡಿತ್ತು. ಎಎಪಿ 20 ವಿಧಾನಸಭೆಗಳಲ್ಲಿ ಗೆಲುವು ಕಾಣುವುದರೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT