ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ವರ್ಷದ ಬಳಿಕ ‘ಸಿಮಿ’ ಉಗ್ರ ಹನೀಫ್‌ ಶೇಕ್‌ ಬಂಧನ

Published 25 ಫೆಬ್ರುವರಿ 2024, 14:34 IST
Last Updated 25 ಫೆಬ್ರುವರಿ 2024, 14:34 IST
ಅಕ್ಷರ ಗಾತ್ರ

ನವದೆಹಲಿ: ‘ನಿಷೇಧಿತ ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಉಗ್ರ ಹನೀಫ್‌ ಶೇಕ್‌ನನ್ನು 22 ವರ್ಷದ ಬಳಿಕ ಬಂಧಿಸಲಾಗಿದೆ’ ಎಂದು ಡಿಸಿಪಿ (ವಿಶೇಷ ಘಟಕ) ಅಲೋಕ್‌ ಕುಮಾರ್‌ ಭಾನುವಾರ ತಿಳಿಸಿದರು. 

‘ಹನೀಫ್‌ ‘ಸಿಮಿ’ಯ ನಿಯತಕಾಲಿಕೆಯ ಸಂಪಾದಕನಾಗಿದ್ದ. ಅಲ್ಲದೇ ಈತ ಅಮಾಯಕ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ’ ಎಂದೂ ಅವರು ಹೇಳಿದರು.

‘ದೇಶದ್ರೋಹದ ಪ್ರಕರಣ ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಹನೀಫ್‌ ವಿರುದ್ಧ 2001ರಲ್ಲಿ ನವದೆಹಲಿಯ ಫ್ರೆಂಡ್ಸ್‌ ಕಾಲೊನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಈತನನ್ನು 2002ರಲ್ಲಿ ದೋಷಿ ಎಂದೂ ಘೋಷಿಸಿತ್ತು. ತೀರ್ಪಿನ ಬಳಿಕ ಹನೀಫ್‌ ನಾಪತ್ತೆಯಾಗಿದ್ದ’ ಎಂದು ತಿಳಿಸಿದರು.

‘ಪ್ರಸ್ತುತ, ಹನೀಫ್‌ ಬೇರೆ ಹೆಸರಿನಲ್ಲಿ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಭುಸವಾಲ್‌ನಲ್ಲಿ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಫೆಬ್ರುವರಿ 22ರಂದು ಈತನನ್ನು ಬಂಧಿಸಲಾಗಿದೆ’ ಎಂದರು.

‘ಹನೀಫ್‌ ಒಬ್ಬ ಕುಪ್ರಸಿದ್ಧ ಮತ್ತು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರ. ‘ಸಿಮಿ’ಯಿಂದ ದೇಶದಾದ್ಯಂತ ನಡೆದ ಹಲವು ದೇಶದ್ರೋಹದ ಕೃತ್ಯಗಳಲ್ಲಿ ಈತ ಮಹತ್ವದ ಪಾತ್ರ ವಹಿಸಿದ್ದ’ ಎಂದು ವಿವರಿಸಿದರು.

ಸೆರೆಸಿಕ್ಕಿದ್ದು ಹೇಗೆ?: ‘ಸಿಮಿ ಪ್ರಕಟಿಸುತ್ತಿದ್ದ ನಿಯತಕಾಲಿಕೆಯಲ್ಲಿ ಸಂಪಾದಕನ ಹೆಸರನ್ನು ಹನೀಫ್‌ ಹಾದಿ ಎಂಬ ಪ್ರಕಟಿಸಲಾಗುತ್ತಿತ್ತು. ಇದೊಂದೆ ಸುಳಿವು ನಮ್ಮ ಬಳಿ ಇದ್ದದ್ದು. ಅಲ್ಲದೇ ಆತನನ್ನು ಪತ್ತೆಹಚ್ಚುವುದೂ ಕಠಿಣವಾಗಿತ್ತು’ ಎಂದು ಅಲೋಕ್‌ ಕುಮಾರ್‌ ಹೇಳಿದರು.

‘ವಿವಿಧ ರಾಜ್ಯಗಳಲ್ಲಿರುವ ‘ಸಿಮಿ’ ಸಂಘಟನೆಯ ನಾಪತ್ತೆಯಾಗಿರುವ ಸದಸ್ಯರ, ಸಂಘಟನೆಯ ಬಗ್ಗೆ ಸಹಾನುಭೂತಿ ಹೊಂದಿದವರ ಹಾಗೂ ಸ್ಲೀಪರ್‌ ಸೆಲ್‌ಗಳ ಕುರಿತು ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆಹಾಕಲು ವಿಶೇಷ ಘಟಕದ ವತಿಯಿಂದ ತಂಡವೊಂದನ್ನು ನಿಯೋಜಿಸಲಾಗಿತ್ತು. ಈ ತಂಡ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ, ದೇಶದ ವಿವಿಧ ಭಾಗಗಳಿಂದ ಮಾಹಿತಿಯನ್ನು ಕ್ರೋಡೀಕರಿಸಿತು’ ಎಂದರು.

‘ತಂಡವು ಕಲೆಹಾಕಿದ ಮಾಹಿತಿಯಿಂದಾಗಿ ಹನೀಫ್‌ ಎಲ್ಲಿರುವನೆಂದು ದೆಹಲಿ ಪೊಲೀಸರಿಗೆ ಗೊತ್ತಾಯಿತು. ಆತನನ್ನು ಸೆರೆಹಿಡಿಯಲೆಂದೇ ತಂಡವೊಂದನ್ನು ರಚಿಸಲಾಯಿತು.’

‘ಫೆಬ್ರುವರಿ 22ರ ಮಧ್ಯಾಹ್ನ 2:50ರ ಸುಮಾರಿಗೆ ಮೊಹ್ಮದೀನ್‌ ನಗರದಿಂದ ಖಡ್ಕಾ ರಸ್ತೆಗೆ ಹನೀಫ್‌ ಪ್ರಯಾಣಿಸುತ್ತಿರುವುದಾಗಿ ತಿಳಿದುಬಂದಿತು. ಆಗ ನಮ್ಮ ತಂಡವು ಸೆರೆಹಿಡಿಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT