ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ತಿಂಗಳಲ್ಲಿ 4 ಪ್ರಮುಖ ಕಾರ್ಯ ಪೂರೈಸಿದ ಪ್ರಧಾನಿ ಮೋದಿ: ಅಮಿತ್ ಶಾ ಮೆಚ್ಚುಗೆ

Published 30 ಸೆಪ್ಟೆಂಬರ್ 2023, 10:30 IST
Last Updated 30 ಸೆಪ್ಟೆಂಬರ್ 2023, 10:30 IST
ಅಕ್ಷರ ಗಾತ್ರ

ಅಹಮದಾಬಾದ್: ಹೊಸ ಸಂಸತ್ ಭವನ ಉದ್ಘಾಟನೆ, ಚಂದ್ರಯಾನ–3 ಯೋಜನೆ, ಜಿ–20 ಸಮ್ಮೇಳನದ ಯಶಸ್ಸು ಹಾಗೂ ಮಹಿಳಾ ಮೀಸಲು ಮಸೂದೆ ಅಂಗೀಕಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ನಾಲ್ಕು ಪ್ರಮುಖ ಕಾರ್ಯಗಳನ್ನು ಪೂರೈಸಲಾಗಿದೆ ಎಂದು ಶ್ಲಾಘಿಸಿದ್ದಾರೆ.

ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶಾ, ಮೀಸಲು ಮಸೂದೆ ಮೂಲಕ ಮಹಿಳೆಯರಿಗೆ ರಾಜ್ಯ ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಶೇ 33ರಷ್ಟು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮಹಿಳೆಯರು ನೀತಿ ಮತ್ತು ಕಾನೂನುಗಳ ರಚನೆಯಲ್ಲಿ ಕೊಡುಗೆ ನೀಡುವಂತೆ ಮಾಡಿರುವ ಪ್ರಧಾನಿ, 'ಮಾತೃಶಕ್ತಿ'ಯನ್ನು ಗೌರವಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಳಾ ಮೀಸಲು ಮಸೂದೆ ಮೂಲಕ 'ಮಹಿಳೆಯರ ನೇತೃತ್ವದ ಅಭಿವೃದ್ಧಿ ಪರಿಕಲ್ಪನೆಯನ್ನು ಪ್ರಧಾನಿ ವಾಸ್ತವಗೊಳಿಸಿದ್ದಾರೆ' ಎಂದಿದ್ದಾರೆ.

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾ, 'ಒಂದೊಂದು ಕಾರ್ಯವೂ 50 ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದಾದಂತಹ ನಾಲ್ಕು ಪ್ರಮುಖ ಕಾರ್ಯಗಳನ್ನು ನರೇಂದ್ರ ಮೋದಿ ಅವರು ಕೇವಲ ಮೂರೇ ತಿಂಗಳುಗಳಲ್ಲಿ ಪೂರ್ಣಗೊಳಿಸಿದ್ದಾರೆ ಎಂದು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ. ಮೋದಿ ನೇತೃತ್ವದಲ್ಲಿ ಎನ್‌ಡಿಎ ಆಡಳಿತವು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತನ್ನ ಸ್ಥಾನವನ್ನು ಖಾತ್ರಿಪಡಿಸಲು ನಿರ್ಧರಿಸಿದೆ ಎಂಬುದನ್ನು ಇದು ತೋರುತ್ತದೆ' ಎಂದು ಪ್ರತಿಪಾದಿಸಿದ್ದಾರೆ.

'ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಿಸುವ ಕಲ್ಪನೆಯೊಂದಿಗೆ ಮೋದಿ ಅವರು ಇಸ್ರೊವನ್ನು ಪುನರುಜ್ಜೀವನಗೊಳಿಸಿ, ಅದರ ವಿಜ್ಞಾನಿಗಳಿಗೆ ಸ್ಫೂರ್ತಿ ತುಂಬಿದ್ದಾರೆ. ಜಗತ್ತು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ನೋಡುವಂತೆ ಮಾಡಿರುವುದು ಇಡೀ ದೇಶದ ಪಾಲಿಗೆ ಸೌಭಾಗ್ಯದ ಸಂಗತಿ' ಎಂದು ಹರ್ಷಿಸಿದ್ದಾರೆ.

ಹಲವು ದೇಶಗಳಲ್ಲಿ ಜಿ20 ಸಮಾವೇಶ ನಡೆದಿವೆ. ಆದರೆ, ಭಾರತದ ರೀತಿಯಲ್ಲಿ ಸಮ್ಮೇಳನ ಸಂಘಟಿಸುವುದು ಮುಂದಿನ 25 ವರ್ಷಗಳವರೆಗೂ ಸವಾಲಿನ ವಿಚಾರ ಎಂದು ವಿಶ್ವ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಪ್ರಧಾನಿ ಅವರು ಆಫ್ರಿಕಾ ಒಕ್ಕೂಟವು ಜಿ20 ಸದಸ್ಯತ್ವ ಪಡೆಯಲು ನೆರವಾಗುವುದರೊಂದಿಗೆ ಭಾರತವು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಸಾಧಿಸುತ್ತಿರುವ ರಾಷ್ಟ್ರಗಳೊಂದಿಗೆ ಇದೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದೂ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT