ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಡಿಸಿಎಂ ಪತ್ನಿಗೆ ಬೆದರಿಕೆ; ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Last Updated 3 ಏಪ್ರಿಲ್ 2023, 10:56 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಫಡಣವೀಸ್‌ ಪತ್ನಿ ಅಮೃತ ಫಡಣವೀಸ್ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಅನಿಲ್‌ ಜೈಸಿಂಘಾನಿಯ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಅನಿಲ್‌ ಸಿಂಘಾನಿಯಾ ಅರ್ಜಿ ಸಲ್ಲಿಸಿದ್ದರು.‌

ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎ. ಎಸ್‌. ಗಡ್ಕರಿ ಅವರು ಜೈಸಿಂಘಾನಿಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ತಮಗೆ ಸಂಬಂಧಿಸಿದ ಕೆಲವು ವಿಡಿಯೊ ಹಾಗೂ ಆಡಿಯೊ ತುಣುಕುಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಅನಿಲ್‌ ಜೈಸಿಂಘಾನಿಯ ಹಾಗೂ ಆತನ ಮಗಳು ಅನಿಕ್ಷಾ ಜೈಸಿಂಘಾನಿಯ ಬೆದರಿಕೆ ಒಡ್ಡಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅಮೃತ ಫಡಣವೀಸ್ ದೂರು ನೀಡಿದ್ದರು. ದೂರಿನನ್ವಯ ದಕ್ಷಿಣ ಮುಂಬೈನ ಮಲಬಾರ್‌ ಹಿಲ್‌ ಪೊಲೀಸ್‌ ಠಾಣೆಯ ಪೊಲೀಸರು ಆರೋಪಿಗಳ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದರು.

ಮಾರ್ಚ್‌ 17ರಂದು ಆರೋಪಿ ಅನಿಕ್ಷಾ ಜೈಸಿಂಘಾನಿಯ ಅವರನ್ನು ಬಂಧಿಸಿದ್ದ ಪೊಲೀಸರು, ಮಾರ್ಚ್‌ 19ರಂದು ಆಕೆಯ ತಂದೆಯನ್ನು ಗುಜರಾತ್‌ನಲ್ಲಿ ಬಂಧಿಸಿದ್ದರು. ಮಾರ್ಚ್‌ 27ರಂದು ಜಾಮೀನಿನ ಮೇಲೆ ಅನಿಕ್ಷಾ ಹೊರ ಬಂದಿದ್ದಾರೆ.

ತಮ್ಮ ಬಂಧನವನ್ನು ‘ಕಾನೂನುಬಾಹಿರ‘ ಎಂದು ಕರೆದಿರುವ ಅನಿಲ್‌ ಸಿಂಘಾನಿಯ ಹೈಕೋರ್ಟ್‌ ಮೊರೆ ಹೋಗಿದ್ದರು. ಪೊಲೀಸರು ಕಾನೂನು ಪ್ರಕಾರವಾಗಿ ನಡೆದುಕೊಂಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.

ಅನಿಲ್‌ ಜೈಸಿಂಘಾನಿಯ ಪರ ವಾದ ಮಂಡಿಸಿದ ವಕೀಲ ಮೃಗೇಂದ್ರ ಸಿಂಗ್‌, ಬಂಧನಕ್ಕೆ ಒಳಪಡಿಸಿದ 24 ಗಂಟೆಯೊಳಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಕಾನೂನು ಹೇಳುತ್ತದೆ. ಆದರೆ, ಪೊಲೀಸರು 36 ಗಂಟೆಯ ಬಳಿಕ ಅನಿಲ್‌ ಜೈಸಿಂಘಾನಿಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅನಿಲ್‌ ವಿರುದ್ಧ ಆರೋಪ ಮಾಡಿರುವವರ ಪತಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದು ಅವರ ಅಣತಿಯಂತೆ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.

ಇವರ ವಾದವನ್ನು ಅಡ್ವೋಕೇಟ್ ಜನರಲ್ ಅಲ್ಲಗೆಳೆದಿದ್ದು, ಪೊಲೀಸರು ಕಾನೂನು ಪ್ರಕಾರವಾಗಿಯೇ ನಡೆದುಕೊಂಡಿದ್ದಾರೆ ಎಂದು ಹೇಳಿದರು. ಪೊಲೀಸ್‌ ದಾಖಲೆಗಳ ಪ್ರಕಾರ ಮಾರ್ಚ್‌ 20 ಸಂಜೆ ಐದು ಗಂಟೆಗೆ ಅನಿಲ್‌ ಜೈಸಿಂಘಾನಿಯ ಅವರನ್ನು ಬಂಧಿಸಿದ್ದು, ಮಾರ್ಚ್‌ 21ರಂದು ಸೆಷನ್ಸ್‌ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದರು.

ಎರಡು ಕಡೆ ವಾದ ಆಲಿಸಿದ ನ್ಯಾಯಾಲಯ, ಅನಿಲ್‌ ಸಿಂಘಾನಿಯ ಅರ್ಜಿಯನ್ನು ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT