ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3ರ ಎಂಜಿನಿಯರ್‌ಗಳಿಗೆ 17 ತಿಂಗಳ ವೇತನ ಪಾವತಿ ಆಗಿಲ್ಲ: ಕಾಂಗ್ರೆಸ್‌

Published 24 ಆಗಸ್ಟ್ 2023, 11:30 IST
Last Updated 24 ಆಗಸ್ಟ್ 2023, 11:30 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–3ರ ಉಡ್ಡಯನ ವಾಹನ ತಯಾರಿಸಿದ ಎಂಜಿನಿಯರ್‌ಗಳಿಗೆ ವೇತನ ಪಾವತಿ ಮಾಡಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಂಚಿ ಮೂಲದ ಹಿಂದೂಸ್ತಾನ್ ಎಂಜಿನಿಯರಿಂಗ್ ಕಾರ್ಪೊರೇಷನ್ (ಎಚ್‌ಇಸಿ) ಚಂದ್ರಯಾನ–3ರ ಉಡ್ಡಯನ ವಾಹನ ತಯಾರಿಸಿದ್ದು, ಇದರ ಎಂಜಿನಿಯರ್‌ಗಳಿಗೆ 17 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಆರೋಪಿಸಿದ್ದಾರೆ.

ಈ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖಿಸಿ ಸಾಮಾಜಿಕ ತಾಣ ‘ಎಕ್ಸ್‌’ನಲ್ಲಿ ಅವರು ಆರೋಪ ಮಾಡಿದ್ದಾರೆ.

ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಮುಂದಾಳತ್ವದಲ್ಲಿ ನಿಜಕ್ಕೂ ಇತಿಹಾಸವನ್ನು ಸೃಷ್ಟಿಸಿದ್ದೇವೆ. ಸೋಮನಾಥ್ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

ಆದರೆ ಕಪಟತನ ತೋರಿರುವ ಪ್ರಧಾನಿ ಮೋದಿ ಉತ್ತರ ನೀಡಬೇಕು ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡ್ ಆದ ತಕ್ಷಣ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ, ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಯತ್ನಿಸಿದ್ದಾರೆ. ಆದರೆ ಇಸ್ರೊ ಮತ್ತು ವಿಜ್ಞಾನಿಗಳಿಗೆ ನೆರವು ನೀಡುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಚಂದ್ರಯಾನ-3ರ ಯೋಜನೆಯಲ್ಲಿ ಕೆಲಸ ಮಾಡಿದ್ದ ಹಿಂದೂಸ್ತಾನ್ ಎಂಜಿನಿಯರ್ ಕಾರ್ಪೋರೇಷನ್ (ಎಚ್‌ಇಸಿ) ಎಂಜಿನಿಯರ್‌ಗಳಿಗೆ ಕಳೆದ 17 ತಿಂಗಳು ಸಂಬಳ ಏಕೆ ಪಾವತಿ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ ಚಂದ್ರಯಾನ–3ರ ಬಜೆಟ್‌ ಅನ್ನು ಶೇ 32ರಷ್ಟು ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸಿರುವ ಅವರು, ಇವರೆಲ್ಲಾ ದೇಶದ ಹೀರೋಗಳು. ಅವರು ವಿಶ್ವದರ್ಜೆಯ ಬಾಹ್ಯಾಕಾಶ ಯೋಜನೆಯನ್ನು ಮಾಡಿದ್ದಾರೆ. ಆದರೆ ಅವರ ಪ್ರತಿಭೆ ಮತ್ತು ಶ್ರಮದ ಬಗ್ಗೆ ನಿಮಗೆ ಯಾವುದೇ ಗೌರವವಿಲ್ಲ ಎಂದು ಪ್ರಧಾನಿ ಮೋದಿಯವರನ್ನು ವೇಣುಗೋಪಾಲ್‌ ಟೀಕೆ ಮಾಡಿದ್ದಾರೆ.

ಗಾಯಕ್ಕೆ ತುಪ್ಪ ಸವರುವಂತೆ, ವಿಜ್ಞಾನಿಗಳ ಸಾಧನೆಯ ಆ ಕ್ಷಣವನ್ನು ನಿಮ್ಮದಾಗಿಸಿಕೊಂಡಿರಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT