ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಹಣಕಾಸು ನೆರವು; 24 ಗಂಟೆ ಒಳಗೆ ಸ್ವತ್ತು ಜಪ್ತಿ: ಹಣಕಾಸು ಸಚಿವಾಲಯ

ತನಿಖಾ ಸಂಸ್ಥೆಗಳು, ರಾಜ್ಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ
Published 28 ನವೆಂಬರ್ 2023, 13:40 IST
Last Updated 28 ನವೆಂಬರ್ 2023, 13:40 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವ ಸಂಸ್ಥೆಗಳ ಕುಣಿಕೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ.

ಉಗ್ರರಿಗೆ ಹಣಕಾಸು ನೆರವು ನೀಡುವ ಸಂಸ್ಥೆಗಳು ಹಾಗೂ ಇವುಗಳೊಂದಿಗೆ ನಂಟು ಹೊಂದಿರುವ ಸಂಸ್ಥೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಗುರುತಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುತಿಸಿರುವ ಇಂತಹ ಸಂಸ್ಥೆಗಳ ಮೇಲೆ ಯಾವುದೇ ವಿಳಂಬ ಮಾಡದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಬೇಕು. ಈ ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಪಿಪಿಎ) ಹಾಗೂ ಸಾಮೂಹಿಕ ವಿನಾಶ ಶಸ್ತ್ರಾಸ್ತ್ರಗಳ ಬಳಕೆ ತಡೆ ಕಾಯ್ದೆಯಡಿ 24 ಗಂಟೆಗಳ ಒಳಗಾಗಿ ಜಪ್ತಿ ಮಾಡಬೇಕು ಎಂದು ವಿವಿಧ ಕೇಂದ್ರೀಯ ಸಂಸ್ಥೆಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ ನೀಡಿದೆ.

ಉಗ್ರರಿಗೆ ಹಣಕಾಸು ನೆರವು ಒದಗಿಸುವ ಸಂಸ್ಥೆಗಳನ್ನು ಗುರುತಿಸುವುದು, ಅವುಗಳ ಬಗ್ಗೆ ಅಧಿಸೂಚನೆ ಹೊರಡಿಸಿ ಹಾಗೂ ಅವುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿ ಆರ್ಥಿಕ ಗುಪ್ತಚರ ಘಟಕವನ್ನು(ಎಫ್‌ಐಯು) ನೋಡಲ್‌ ಏಜೆನ್ಸಿಯನ್ನಾಗಿ ಮಾಡಲಾಗಿದೆ.

ಆರ್‌ಬಿಐ, ಸೆಬಿ, ಐಆರ್‌ಡಿಎ, ಐಬಿ, ಎನ್‌ಐಎ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳಿಗೆ ನಿರ್ದೇಶನ ಸಹ ನೀಡಲಾಗಿದೆ.

ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ (ಭದ್ರತಾ ಮಂಡಳಿ) ಕಾಯ್ದೆ,1947ರ ಸೆಕ್ಷನ್ 2ರಲ್ಲಿ ವಿವರಿಸಿರುವ ಪ್ರಕಾರ, ಭಾರತ ಈ ಕುರಿತು ಕಾಯ್ದೆಯನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT