ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣವನ್ನು ಮುಚ್ಚಿಹಾಕುವ ಯತ್ನವು ಸ್ಥಳೀಯ ಪೊಲೀಸರಿಂದ ನಡೆದಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಆರೋಪಿಸಿದೆ.
ಅಪರಾಧ ಕೃತ್ಯ ನಡೆದ ಸ್ಥಳದಲ್ಲಿನ ಚಿತ್ರಣವನ್ನು ತಾನು ತನಿಖೆಯ ಹೊಣೆ ವಹಿಸಿಕೊಳ್ಳುವ ಹೊತ್ತಿಗಾಗಲೇ ಬದಲಿಸಲಾಗಿದೆ ಎಂದು ಕೂಡ ಸಿಬಿಐ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಿಬಿಐ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಈ ಮಾಹಿತಿ ನೀಡಿದರು.
ವಿಡಿಯೊ ಚಿತ್ರೀಕರಣ ಆಗಬೇಕು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಹಾಗೂ ವಿದ್ಯಾರ್ಥಿನಿಯ ಸಹಪಾಠಿಗಳು ಒತ್ತಾಯಿಸಿದ್ದರು. ಅಂದರೆ, ಮುಚ್ಚಿಹಾಕುವ ಯತ್ನ ನಡೆದಿದೆ ಎಂಬುದು ಅವರ ಅರಿವಿಗೂ ಬಂದಿತ್ತು ಎಂದು ಮೆಹ್ತಾ ವಿವರಿಸಿದರು.
‘ಐದನೆಯ ದಿನ ನಾವು ತನಿಖೆ ಶುರು ಮಾಡಿದೆವು. ಸ್ಥಳೀಯ ಪೊಲೀಸರು ಅದಕ್ಕೂ ಮೊದಲು ಸಂಗ್ರಹಿಸಿದ್ದನ್ನೆಲ್ಲ ನಮಗೆ ಕೊಡಲಾಯಿತು. ತನಿಖೆಯೇ ಒಂದು ಸವಾಲಾಗಿತ್ತು. ಏಕೆಂದರೆ ಅಪರಾಧ ನಡೆದ ಸ್ಥಳದಲ್ಲಿನ ಚಿತ್ರಣವನ್ನೇ ಬದಲಾಯಿಸಲಾಗಿತ್ತು. ಸಂತ್ರಸ್ತೆಯ ಮೃತದೇಹದ ಅಂತ್ಯಸಂಸ್ಕಾರ ನಡೆದ ನಂತರ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಮೆಹ್ತಾ ಹೇಳಿದರು.
‘ಆಸ್ಪತ್ರೆಯ ಉಪ ಸೂಪರಿಂಟೆಂಡೆಂಟ್ ಅವರು ಸಂತ್ರಸ್ತೆಯ ಪಾಲಕರಿಗೆ ಮೊದಲಿಗೆ, ಆಕೆಗೆ ಹುಷಾರಿಲ್ಲ ಎಂದು ತಿಳಿಸಿದ್ದರು. ಪಾಲಕರು ಆಸ್ಪತ್ರೆಯನ್ನು ತಲುಪಿದಾಗ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರಿಗೆ ಹೇಳಲಾಯಿತು...’ ಎಂದರು. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದಾರೆ.
ಆಗಸ್ಟ್ 9ರ ಬೆಳಿಗ್ಗೆ ತಾಲಾ ಪೊಲೀಸ್ ಠಾಣೆಗೆ ಕರೆ ಮಾಡಿದಾಗ, ಸಂತ್ರಸ್ತೆಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ವೈದ್ಯರು ಪೊಲೀಸರಿಗೆ ಹೇಳಿದ್ದರು. ಆದರೆ ಆ ಹೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು ಎಂದೂ ಮೆಹ್ತಾ ಹೇಳಿದರು.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಮೆಹ್ತಾ ಅವರ ಹೇಳಿಕೆಗಳನ್ನು ವಿರೋಧಿಸಿದರು. ಎಲ್ಲವನ್ನೂ ಚಿತ್ರೀಕರಿಸಿಕೊಳ್ಳಲಾಗಿದೆ, ಅಪರಾಧ ನಡೆದ ಸ್ಥಳದಲ್ಲಿ ಏನನ್ನೂ ಬದಲಾಯಿಸಿಲ್ಲ ಎಂದು ಹೇಳಿದರು.
ಕೋಲ್ಕತ್ತ ಪೊಲೀಸರು ಪ್ರಕ್ರಿಯೆಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ, ಸಿಬಿಐ ಸಲ್ಲಿಸಿರುವ ವಸ್ತುಸ್ಥಿತಿ ವರದಿಯು ವಿಷಯವನ್ನು ಇನ್ನಷ್ಟು ಗೊಂದಲಮಯಗೊಳಿಸುವ ಯತ್ನ ನಡೆಸಿದೆ ಎಂದು ಸಿಬಲ್ ದೂರಿದರು.
ಇದು ಪರಿಸ್ಥಿತಿಯನ್ನು ಗೊಂದಲಮಯ ಆಗಿಸುವ ಯತ್ನ ಅಲ್ಲ. ಬದಲಿಗೆ, ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಎಂದು ಮೆಹ್ತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.