ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥ ದೇವಸ್ಥಾನದ ಬಳಿ ಹಿಮ ಕುಸಿತ: ಯಾತ್ರಾರ್ಥಿಗಳಲ್ಲಿ ಆತಂಕ

Last Updated 1 ಅಕ್ಟೋಬರ್ 2022, 11:56 IST
ಅಕ್ಷರ ಗಾತ್ರ

ಡೆಹರಾಡೂನ್: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥ ದೇವಸ್ಥಾನದ ಬಳಿ ಹಿಮ ಕುಸಿತ ಸಂಭವಿಸಿದ್ದು, ಯಾತ್ರಾರ್ಥಿಗಳನ್ನು ಆತಂಕಕ್ಕೆ ದೂಡಿದೆ.

'ಬೆಳಿಗ್ಗೆ 6.30 ರ ಸುಮಾರಿಗೆ, ಕೇದಾರ್ ಡೋಮ್ ಮತ್ತು ಸ್ವರ್ಗರೋಹಿಣಿ ನಡುವಿನ ಹಿಮನದಿಯಿಂದ ಬೇರ್ಪಟ್ಟ ಬೃಹತ್ ಗಾತ್ರದ ಹಿಮದ ಗಡ್ಡೆಯೊಂದು ದೇವಾಲಯದ ಹಿಂಭಾಗದಲ್ಲಿರುವ ಚೋರಬರಿ ಸರೋವರದ ಬಳಿ ಬಿದ್ದಿದೆ. ಹಿಮದ ತುಂಡುಗಳು ಸರೋವರದ ಮೇಲೆ ಮೂರ್ನಾಲ್ಕು ನಿಮಿಷಗಳ ಕಾಲ ತೇಲಾಡುತ್ತಿದ್ದ ದೃಶ್ಯ ಕಂಡುಬಂದಿದೆ’ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ(ಬಿಕೆಟಿಸಿ) ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದರು.

ದೇಗುಲದ ಹಿಂಭಾಗದಲ್ಲಿ ಸಂಭವಿಸಿದ ಹಿಮ ಕುಸಿತವು ಭಕ್ತರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ 2013ರಲ್ಲಿ ಸಾವಿರಾರು ಜನರನ್ನು ಬಲಿ ಪಡೆದ ಹಿಮ ಕುಸಿತದ ಘಟನೆಯನ್ನು ನೆನಪಿಸಿದೆ.

ಆದರೆ, ಮುರಿದು ಬಿದ್ದ ನಿರ್ಗಲ್ಲಿನಿಂದ ಮಂದಾಕಿನಿ ಮತ್ತು ಸರಸ್ವತಿ ನದಿಗಳ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿಲ್ಲ. ಹಾಗಾಗಿ, ಆತಂಕಕ್ಕೆ ಕಾರಣವಿಲ್ಲ ಎಂದು ಅಜಯ್ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ, ಸ್ಥಳೀಯ ಆಡಳಿತ, ಗರ್ಹವಾಲ್ ಮಂಡಲ ವಿಕಾಸ ನಿಗಮ ನಿಯಮಿತದ ತಂಡ, ಬಿಕೆಟಿಸಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳಗಳು ನದಿಗಳ ನೀರಿನ ಪ್ರಮಾಣದ ಮೇಲೆ ನಿಹಗಾ ಇಟ್ಟಿದ್ದಾರೆ ಎಂದು ಅವರು ಹೇಳಿದರು.

‘ದೇಗುಲದ ಹಿಂಬದಿಯ ಬಹಳ ದೂರದ ಹಿಮಾಲಯದ ಪ್ರದೇಶದಲ್ಲಿ ಹಿಮ ಕುಸಿತ ಸಂಭವಿಸಿದ್ದು, ಅಲ್ಲಿ ಅದು ಸಾಮಾನ್ಯ. ಹಾಗಾಗಿ ದೇಗುಲದ ಸುತ್ತಲಿನ ಟೌನ್‌ಶಿಪ್ ಕೇದಾರಪುರಿ ಮೇಲೆ ಅದರಿಂದ ಯಾವುದೇ ಪರಿಣಾಮ ಇರುವುದಿಲ್ಲ. ಕೇದಾರನಾಥ್ ಧಾಮದ ಯಾತ್ರೆಗೆ ಬರುವವರು ಆತಂಕಪಡುವ ಅಗತ್ಯವಿಲ್ಲ। ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT