ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಕಡ್ಡಾಯ ಅಧಿಸೂಚನೆ ರದ್ದು: ಸರ್ಕಾರದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪ್ರಾಥಮಿಕ ಶಿಕ್ಷಣ: ಕೇಂದ್ರ ಸರ್ಕಾರದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌
Published 12 ಆಗಸ್ಟ್ 2023, 23:31 IST
Last Updated 12 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ನವದೆಹಲಿ: ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅರ್ಹತೆ ಹೊಂದಿರಬೇಕು  ಎಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ‘ಸ್ವೇಚ್ಛೆ’ಯಿಂದ ಕೂಡಿದೆ ಮತ್ತು ‘ಅತಾರ್ಕಿಕ’ವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆಗೂ ಈ ನಿರ್ಧಾರಕ್ಕೂ ಸಂಬಂಧ ಇಲ್ಲ ಎಂದು ಕೋರ್ಟ್‌ ಹೇಳಿದೆ. 

ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡಬೇಕು ಎಂದು ಎನ್‌ಸಿಟಿಇ 2018ರ ಜೂನ್‌ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕೋರ್ಟ್‌ ರದ್ದು ಮಾಡಿದೆ. 

ಪ್ರಾಥಮಿಕ ಹಂತದ ತರಗತಿಗಳಲ್ಲಿ ಕಲಿಸಲು ಬಿ.ಇಡಿ. ಅರ್ಹತೆಯ ಅಗತ್ಯ ಇಲ್ಲ. ಈ ತರಗತಿಗಳಲ್ಲಿ ಕಲಿಸಲು ಭಿನ್ನವಾದ ಅರ್ಹತೆ ಅಗತ್ಯ ಇದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿ.ಇಡಿ. ವಿದ್ಯಾರ್ಹತೆ ಇರುವವರು ಆಯ್ಕೆ ಆಗಿದ್ದರೆ ನೇಮಕವಾಗಿ ಎರಡು ವರ್ಷಗಳೊಳಗೆ ಬೋಧನೆಗೆ ಸಂಬಂಧಿಸಿದ ಕೋರ್ಸ್‌ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟ್ರೀಯ ಪರಿಷತ್‌ (ಎನ್‌ಸಿಟಿಇ) ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ. 

ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡುವ ಮೂಲಕ ಸರ್ಕಾರವು ಸಂವಿಧಾನ ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ. ಶಿಕ್ಷಕರಿಗೆ ಸಂಬಂಧಿಸಿದಂತೆ ಬೋಧನಾ ಕೌಶಲವು ಅತ್ಯಂತ ಮಹತ್ವದ್ದಾಗಿದೆ ಎಂದು ಕೋರ್ಟ್ ಹೇಳಿದೆ. 

ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡಲು ಸರ್ಕಾರ ನೀಡಿರುವ ಒಂದೇ ಒಂದು ಸಮರ್ಥನೆ ಏನೆಂದರೆ, ಇದು ‘ಉನ್ನತ ಅರ್ಹತೆ’ ಎಂಬುದಾಗಿದೆ. ನೀತಿಗೆ ಸಂಬಂಧಿಸಿದ ನಿರ್ಧಾರ  ಎಂದು ಪರಿಗಣಿಸಿದರೂ ಇದು ಸರಿಯಾದ ಕ್ರಮ ಅಲ್ಲ ಎಂದು ಕೋರ್ಟ್‌ ಹೇಳಿದೆ. 

ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಪ್ರಾಥಮಿಕ ಶಿಕ್ಷಣ ಡಿಪ್ಲೊಮಾವೇ (ಡಿ.ಎಡ್‌.) ಅರ್ಹತೆಯೇ ಹೊರತು ಬಿ.ಇಡಿ. ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದ್ದಾಗಿಯೂ ಪೀಠ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT