ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಒಡೆದು ಆಳುವ ನೀತಿ ಫಲ ನೀಡದು: ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌

Published 17 ಅಕ್ಟೋಬರ್ 2023, 14:00 IST
Last Updated 17 ಅಕ್ಟೋಬರ್ 2023, 14:00 IST
ಅಕ್ಷರ ಗಾತ್ರ

ರಾಯಪುರ: ಬಿಜೆಪಿಯ ‘ಒಡೆದು ಆಳುವ’  ನೀತಿಯು ಛತ್ತೀಸಗಢದಲ್ಲಿ ಫಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯು ಮಾತನಾಡದ ವಿಷಯಗಳೇ ಇಲ್ಲ ಎಂದರು. ಕಾಂಗ್ರೆಸ್‌ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದಿದ್ದ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಖಂಡಿಸಿದರು.

90 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಆಡಳಿತಾರೂಢ ಕಾಂಗ್ರೆಸ್‌ 30 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ರಾಜ್‌ನಾಂದಗಾಂವ್‌ನಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ್ದ ಸಚಿವ ಅಮಿತ್‌ ಶಾ,  ಬಿರಾನಪುರ ಗ್ರಾಮದಲ್ಲಿ ನಡೆದಿದ್ದ ಕೋಮು ಹಿಂಸಾಚಾರ ಕುರಿತಂತೆ ಬಘೇಲ್‌ ಸರ್ಕಾರವನ್ನು ಟೀಕಿಸಿದ್ದರು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಆಡಳಿತ ಪಕ್ಷವು ಓಲೈಕೆ ರಾಜಕಾರಣವನ್ನೇ ಮುಂದುವರಿಸಲಿದೆ ಎಂದಿದ್ದರು.

ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಘೇಲ್‌ ಅವರು, ಬಿರಾನಪುರದ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಕೋರ್ಟ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರವನ್ನೂ ನೀಡಲಾಗಿದೆ’ ಎಂದರು.

ಬಿಜೆಪಿಯವರು ಯಾವುದರಲ್ಲಿ ಪಿಎಚ್‌ಡಿ ಮಾಡಿದ್ದಾರೋ ಆ ವಿಷಯಗಳ ಬಗ್ಗೆಯೇ ಮಾತನಾಡುತ್ತಾರೆ ಎಂದು ಕುಹಕವಾಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರ ಎಸಗಿದವರನ್ನು ತಲೆಕೆಳಗಾಗಿ ನೇತು ಹಾಕುತ್ತದೆ ಎಂದು ಶಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆಯು ತಮ್ಮ ಸರ್ಕಾರಕ್ಕೆ ಬೆದರಿಕೆ ಹಾಕುವಂಥದ್ದಾಗಿದೆ ಎಂದರು.

‘ಇದನ್ನಲ್ಲದೆ ಅವರು ಇನ್ನೇನು ಮಾಡಿಯಾರು? ಚುನಾಯಿತ ಸರ್ಕಾರಕ್ಕೆ ಅವರು ಬೆದರಿಕೆಯೊಡ್ಡಿದ್ದಾರೆ. ಇದರಲ್ಲೆಲ್ಲಾ ಅವರು ಪಿಎಚ್‌ಡಿ ಮಾಡಿದ್ದಾರೆ. ಇದು ಛತ್ತೀಸಗಢ. ಇಲ್ಲಿ ಆದಿ (ಪ್ರಾಚೀನ) ಸಂಸ್ಕೃತಿಯನ್ನು ಅನುಸರಿಸುವ ಆದಿವಾಸಿಗಳಿದ್ದಾರೆ. ಇಲ್ಲಿನ ಜನರಿಗೆ ಪ್ರೀತಿ ಮತ್ತು ಸೋದರತ್ವದ ಭಾಷೆ ಅರ್ಥವಾಗುತ್ತದೆ. ಒಡೆದು ಆಳುವ ನೀತಿ ಇಲ್ಲಿ ಪ್ರಯೋಜನವಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ಅಮಿತ್‌ ಶಾ ಅವರು ಜನರನ್ನು ಹೆದರಿಸಲು ಮತ್ತು ಛತ್ತೀಸಗಢವನ್ನು ಅದಾನಿಗೆ ಹಸ್ತಾಂತರಿಸಲು ಬಯಸಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಅವರು ಸಫಲರಾಗುವುದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT