ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಪ್ರದೇಶ: ಫೂಲನ್ ದೇವಿ ಪತಿ ರಾಜಕೀಯ ಕಣಕ್ಕೆ

ನಿಷಾದ್ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ ಉಮೇದ್ ಕಶ್ಯಪ್
Published : 20 ಜುಲೈ 2021, 15:45 IST
ಫಾಲೋ ಮಾಡಿ
Comments

ಲಖನೌ: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಕಣಕ್ಕೆ ಇಳಿಯಲು ‘ಡಕಾಯಿತರ ರಾಣಿ’ ದಿವಂಗತ ಫೂಲನ್ ದೇವಿ ಅವರ ಪತಿ ಉಮೇದ್ ಕಶ್ಯಪ್ ನಿರ್ಧರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರಭಾವಿ ಸಮುದಾಯವಾಗಿರುವ ‘ನಿಷಾದ್’ (ಮೀನುಗಾರರು, ದೋಣಿಗಾರರು) ಸಮುದಾಯದ ಬೆಂಬಲಕ್ಕಾಗಿ ಅವರು ರಾಜಕೀಯ ಪ್ರವೇಶಿಸಲಿದ್ದಾರೆ.

ಮೂಲಗಳ ಪ್ರಕಾರ, ಉಮೇದ್ ಅವರು ಈ ಸಮುದಾಯದ ಮುಖಂಡರೊಂದಿಗೆ ಸೇರಿ ‘ಜಲ್‌ವಂಶಿ ಮೋರ್ಚಾ’ ರಚಿಸಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿನ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರುವಷ್ಟು ನಿಷಾದ್ ಸಮುದಾಯವು ಪ್ರಬಲವಾಗಿದೆ.

‘ಜಲ್‌ವಂಶಿ ಮೋರ್ಚಾ’ದಲ್ಲಿ ಏಕಲವ್ಯಸೇನೆ, ರಾಷ್ಟ್ರೀಯ ಜನಸಂಭವನ ಪಕ್ಷ, ಭಾರ್ತಿಯಾ ಮಾನವ್ ಸಮಾಜ ಪಕ್ಷ ಮತ್ತು ಇತರರು ಸೇರಿದ್ದಾರೆ.

ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಗ್ಯಾನೇಂದ್ರ ನಿಷಾದ್ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮುದಾಯಕ್ಕೆ ಮೋಸ ಮಾಡಿವೆ. ಯಾವುದೇ ರಾಜಕೀಯ ಪಕ್ಷವು ನಮ್ಮ ಸಮುದಾಯದೊಂದಿಗೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಉದ್ಯೋಗದಲ್ಲಿ ಮೀಸಲಾತಿ, ಪರಿಶಿಷ್ಟ ಜಾತಿಗೆ (ಎಸ್‌ಸಿ) ನಮ್ಮ ಸಮುದಾಯವನ್ನು ಸೇರಿಸದಿದ್ದಲ್ಲಿ ಆಂದೋಲನ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.

ಮೋರ್ಚಾದ ಚುನಾವಣಾ ಪ್ರಚಾರದಲ್ಲಿ ಉಮೇದ್ ಕಶ್ಯಪ್ ಅವರು ನಿಷಾದ್ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಿರ್ಜಾಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಫೂಲನ್ ದೇವಿ, 2001ರಲ್ಲಿ ದೆಹಲಿಯ ತಮ್ಮ ನಿವಾಸದ ಎದುರೇ ಗುಂಡೇಟಿಗೆ ಬಲಿಯಾಗಿದ್ದರು.

1996ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಫೂಲನ್ ಅವರ ಹೆಸರನ್ನು ಸೂಚಿಸಿದ್ದರು. ಫೂಲನ್ ವಿರುದ್ಧ ಇದ್ದ ಎಲ್ಲ ಅಪರಾಧ ಪ್ರಕರಣಗಳನ್ನು ಅಂದಿನ ಎಸ್‌ಪಿ ಸರ್ಕಾರವು ಹಿಂತೆಗೆದುಕೊಂಡು, ಜೈಲಿನಿಂದ ಅವರನ್ನು ಬಿಡುಗಡೆ ಮಾಡಿತ್ತು.

ಉತ್ತರ ಪ್ರದೇಶ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ವಿಕಾಸ್‌ಶೀಲ್ ಇನ್ಸಾನ್ ಪಕ್ಷ (ವಿಐಪಿ) ಮತ್ತು ನಿಷಾದ್ ಪಕ್ಷಗಳು ಈ ಸಮುದಾಯದ ಪರವಾಗಿ ರಾಜಕೀಯ ಅಖಾಡಕ್ಕಿಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT