ಬರೇಲಿ: ಪ್ರೀತಿಸಿ, ಗರ್ಭಿಣಿಯಾಗಿದ್ದ 17 ವರ್ಷದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಂದಿದ್ದು, ನಂತರ ಇಲ್ಲಿನ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಭುಜೇಂದ್ರ ಅಲಿಯಾಸ್ ಭೂರಾ ಶ್ರೀವಾಸ್ತವ ಎಂಬಾತನನ್ನು ಪ್ರೇಮಿಸಿದ್ದು, ಆತನೊಟ್ಟಿಗೆ ಸಂಬಂಧ ಹೊಂದಿದ್ದರು ಎಂದು ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ.
ಮಗಳು ಗರ್ಭಿಣಿಯಾಗಿರುವ ವಿಚಾರ ತಿಳಿದ ತಂದೆ, ಬುಧವಾರ ಸಿಬಿ ಗಂಜ್ ಪೊಲೀಸ್ ಠಾಣೆಯಲ್ಲಿ ಭುಜೇಂದ್ರ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಿದ್ದರು.
‘ಪೊಲೀಸರು ಗುರುವಾರ ಭುಜೇಂದ್ರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು, ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಆದರೆ, ಅದೇ ದಿನ ರಾತ್ರಿ ಬಾಲಕಿಯನ್ನು ತಂದೆ ಕತ್ತು ಹಿಸುಕಿ ಕೊಂದಿದ್ದಾರೆ’ ಎಂದು ರಾಹುಲ್ ಭಾಟಿ ಹೇಳಿದ್ದಾರೆ.