ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಜೋಡೊ ನ್ಯಾಯ ಯಾತ್ರೆ: ಫೆಬ್ರುವರಿ 19ರಂದು ಅಮೇಥಿಗೆ

Published 8 ಫೆಬ್ರುವರಿ 2024, 11:23 IST
Last Updated 8 ಫೆಬ್ರುವರಿ 2024, 11:23 IST
ಅಕ್ಷರ ಗಾತ್ರ

ಅಮೇಥಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯು ಉತ್ತರ ಪ್ರದೇಶದ ಅಮೇಥಿಗೆ ಇದೇ ಫೆಬ್ರುವರಿ 19ರಂದು ತಲುಪಲಿದೆ ಎಂದು ಪಕ್ಷದ ಮುಖಂಡರೊಬ್ಬರು ಗುರುವಾರ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಈ ಹಿಂದೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.

ಅಮೇಥಿ ಜಿಲ್ಲೆಯ ಗೌರಿಗಂಜ್‌ನಲ್ಲಿರುವ ಬಾಬುಗಂಜ್ ಸಗ್ರಾ ಆಶ್ರಮದ ಬಳಿ ಬೃಹತ್‌ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ರಾಹುಲ್‌ ಮಾತನಾಡಲಿದ್ದಾರೆಂದು ಎಂದು ಜಿಲ್ಲಾ ಮುಖಂಡ ಅನಿಲ್‌ ಸಿಂಗ್‌ ಹೇಳಿದ್ದಾರೆ.

ಯಾತ್ರೆಯು ಮಹಾರಾಜಪುರ, ಅಮೇಥಿ , ಗೌರಿಗಂಜ್, ಗಾಂಧಿನಗರ, ಜೈಸ್ ಮತ್ತು ಫರ್ಸತ್‌ಗಂಜ್ ಮೂಲಕ ಸಾಗಿ ರಾಯ್ ಬರೇಲಿ ಜಿಲ್ಲೆಗೆ ತಲುಪಲಿದೆ. ಈ ವೇಳೆ ಅನೇಕ ಕಡೆ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದರು.

ರಾಯ್ ಬರೇಲಿ ಜಿಲ್ಲೆಯಲ್ಲಿ ಸಾಗುವ ಯಾತ್ರೆಯ ವೇಳೆ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರು ಭಾಗವಹಿಸುತ್ತಾರೆಂದು ಸಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ‌.

ಅಮೇಥಿಯಲ್ಲಿ ನಡೆಯುವ ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಈ ಕ್ಷೇತ್ರದಿಂದಲೇ ಸ್ಪರ್ಧಿಸುವ ಸೂಚನೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ.

ರಾಹುಲ್ ಅಮೇಥಿಯಿಂದ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಈ ಹಿಂದೆ ಹೇಳಿದ್ದರು. ಆದರೆ ಇದುವರೆಗೂ ಕಾಂಗ್ರೆಸ್‌ನಿಂದ ಅಧಿಕೃತ ಮಾಹಿತಿ ದೊರೆತಿಲ್ಲ.

ರಾಹುಲ್ ಗಾಂಧಿ 2002 ರಿಂದ 2019ರವರೆಗೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸಂಸದರಾಗಿದ್ದರು.

ರಾಹುಲ್ 2022ರ ಫೆಬ್ರವರಿ 15ರಂದು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಅಮೇಥಿಗೆ ಕೊನೆಯದಾಗಿ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT