ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಸಿಟಿಇಟಿ ಆಕಾಂಕ್ಷಿಗಳಿಂದ ತೀವ್ರ ಪ್ರತಿಭಟನೆ, ಪೊಲೀಸರಿಂದ ಲಾಠಿ ಚಾರ್ಜ್

Published 1 ಜುಲೈ 2023, 10:10 IST
Last Updated 1 ಜುಲೈ 2023, 10:10 IST
ಅಕ್ಷರ ಗಾತ್ರ

ಪಟ್ನಾ: ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಇತರ ರಾಜ್ಯಗಳ ಅಭ್ಯರ್ಥಿಗಳಿಗೂ ಬರೆಯಲು ಅವಕಾಶ ನೀಡುವ ರಾಜ್ಯ ಸರ್ಕಾರದ ವಿವಾದಾತ್ಮಕ ನಿರ್ಧಾರ ವಿರೋಧಿಸಿ ರಾಜಧಾನಿ ಪಟ್ನಾದಲ್ಲಿ ಶನಿವಾರ ಭಾರಿ ಪ್ರತಿಭಟನೆ ನಡೆಯಿತು.


ಪಟ್ನಾದ ಹೃದಯಭಾಗದಲ್ಲಿರುವ ಡಾಕ್ ಬಂಗಲೆ ಎದುರು ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಬಲವಂತವಾಗಿ ‌ಪ್ರತಿಭಟನಕಾರರನ್ನು ಚದುರಿಸಿದರು.


‘ಜಿಲ್ಲಾಡಳಿತ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಭಟನಕಾರರಿಗೆ ವಿವರಿಸಲು ಪ್ರಯತ್ನಿಸುತ್ತಿದ್ದೇವೆ. ಪೊಲೀಸ್‌ ಪಡೆ ಬಳಕೆ ಕೊನೆಯ ಆಯ್ಕೆಯಾಗಿತ್ತು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಎಸ್‌ಪಿ ನೂರ್‌–ಉಲ್ ಹಕ್ ಸುದ್ದಿಗಾರರಿಗೆ ತಿಳಿಸಿದರು. ‘ಹಲವು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.


ಸಿಟಿಇಟಿ ಮತ್ತು ಬಿಟಿಇಟಿನಂತಹ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದೇವೆ ಎಂದು ಹೇಳಿದ ಪ್ರತಿಭಟನಕಾರರು, ಪೊಲೀಸರ ಕ್ರಮವು ಸರ್ಕಾರದ ನಿರಾಸಕ್ತಿ ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು.


‘ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡ ನಡೆಸುತ್ತಿದ್ದೇವೆ. ನಾವು ಕ್ರಿಮಿನಲ್‌ಗಳು ಎಂಬಂತೆ ನಮ್ಮನ್ನು ಬಂಧಿಸಲಾಗುತ್ತಿದೆ‘ ಎಂದು ಶಿಕ್ಷಕಿ ಹುದ್ದೆ ಆಕಾಂಕ್ಷಿ, ಬೇಗುಸರಾಯ್‌ ಜಿಲ್ಲೆಯ ಪೂಜಾ ಸಿಂಗ್ ಹೇಳಿದ್ದಾರೆ.


ವಿಶೇಷವೆಂದರೆ, ನಿತೀಶ್ ಕುಮಾರ್ ಸಂ‌ಪುಟ ಈ ವಾರದ ಆರಂಭದಲ್ಲಿ ಶಿಕ್ಷಕರ ನೇಮಕಾತಿಗೆ ‘ವಾಸಸ್ಥಳ ದೃಢೀಕರಣ’ದ ಅಗತ್ಯ ಇಲ್ಲ ಎಂಬ ನೀತಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿತ್ತು.  


ಈ ನಡುವೆ, ಶಿಕ್ಷಕರ ಹುದ್ದೆ ಆಕಾಂಕ್ಷಿಗಳ ಬೇಡಿಕೆ ಬೆಂಬಲಿಸಿ, ಜುಲೈ 13 ರಂದು ‘ವಿಧಾನಸಭೆ ಚಲೋ’ ನಡೆಸುವುದಾಗಿ ಬಿಜೆಪಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT