ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ವಾಷಿಂಗ್ ಮಷಿನ್‌ನಲ್ಲಿ ಭ್ರಷ್ಟಾಚಾರ ಕಳಂಕಿತರೂ ಪರಿಶುದ್ಧ: ಶರದ್ ಪವಾರ್ ಟೀಕೆ

Published 7 ಮಾರ್ಚ್ 2024, 11:09 IST
Last Updated 7 ಮಾರ್ಚ್ 2024, 11:09 IST
ಅಕ್ಷರ ಗಾತ್ರ

ಪುಣೆ: ‘ಯಾವುದೇ ನಾಯಕರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೆ ಅಂಥವರು ಬಿಜೆಪಿ ಸೇರುವ ಮೂಲಕ ತಮ್ಮ ‘ಕಳಂಕಿತ’ ಹಣೆಪಟ್ಟಿಯನ್ನು ಕಳಚಿಕೊಂಡು ಪರಿಶುದ್ಧರಾಗಬಹುದು. ಬಿಜೆಪಿಯು ಇಂಥ ಕಳಂಕಿತರಿಗೆ ವಾಷಿಂಗ್ ಮಷಿನ್ ರೀತಿಯಲ್ಲಿ ನೆರವಾಗುತ್ತಿದೆ’ ಎಂದು ಎನ್‌ಸಿಪಿ (ಎಸ್‌ಪಿ) ಮುಖಂಡ ಶರದ್ ಪವಾರ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಅಧಿಕಾರದಲ್ಲಿರದ ಅವಧಿಯಲ್ಲಿ ಸಂಸತ್ತಿನಲ್ಲಿ ಒಂದು ಕಿರುಹೊತ್ತಿಗೆಯನ್ನು ಹಂಚಿದ್ದ ಆ ಪಕ್ಷದ ಮುಖಂಡರು, ಆದರ್ಶ ಹೌಸಿಂಗ್ ಹಗರಣದಲ್ಲಿ ಅಶೋಕ್ ಚವಾಣ್ ಅವರ ಹೆಸರನ್ನು ಉಲ್ಲೇಖಿಸಿದ್ದರು. ಆದರೆ ಈಗ ಅದೇ ಚವಾಣ್‌ ಬಿಜೆಪಿ ಸೇರುವ ಮೂಲಕ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಒಂದೆಡೆ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿ, ಮತ್ತೊಂದೆಡೆ ಅಂಥವರನ್ನು ಪಕ್ಷಕ್ಕೂ ಸೇರಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ಮಹಾರಾಷ್ಟ್ರದಲ್ಲಿ ₹70 ಸಾವಿರ ಕೋಟಿಯ ನೀರಾವರಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ಪ್ರಧಾನಿ ಮೋದಿ, ಎನ್‌ಸಿಪಿ ಪಕ್ಷದಲ್ಲಿ ಭ್ರಷ್ಟರಿದ್ದಾರೆ ಎಂದು ಆರೋಪಿಸಿದ್ದರು. ಜತೆಗೆ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲೂ ಅಕ್ರಮ ನಡೆದಿದೆ ಎಂದಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸುವಂತೆ ನಾನು ಸಲಹೆ ನೀಡಿದ್ದೆ. ಆದರೆ ಅಂದು ಆ ಆರೋಪ ಹೊತ್ತವರು ಇಂದು ಎಲ್ಲಿ ಮತ್ತು ಯಾರ ಪರವಾಗಿದ್ದಾರೆ ಎಂಬುದನ್ನು ಗಮನಿಸಿ’ ಎಂದು ಅಜಿತ್ ಪವಾರ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

‘ಇವೆಲ್ಲವೂ ಬಿಜೆಪಿ ಒಂದು ವಾಷಿಂಗ್ ಮಷಿನ್ ಎಂಬುದನ್ನು ಸಾಬೀತುಪಡಿಸಿದೆ. ಯಾರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆಯೋ ಅವರೆಲ್ಲರೂ ಆ ಪಕ್ಷವನ್ನು ಸೇರುವ ಮೂಲಕ ‘ಪರಿಶುದ್ಧ’ರಾಗಿದ್ದಾರೆ’ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ಶರದ್ ವಿರುದ್ಧ ಎನ್‌ಸಿಪಿಯಲ್ಲಿ ಬಂಡಾಯ ಸಾರಿದ ಅಜಿತ್ ಪವಾರ್, ಬಿಜೆಪಿ ಬೆಂಬಲಿಸಿದ ಏಕನಾಥ ಶಿಂಧೆ ಸರ್ಕಾರವನ್ನು ಸೇರಿಕೊಂಡರು. ಅದರಿಂದಾಗಿ ಪಕ್ಷ ಇಬ್ಭಾಗವಾಯಿತು. ಪಕ್ಷದ ಹೆಸರು ಮತ್ತು ಚಿಹ್ನೆಯಾದ ಗಡಿಯಾರ ಅಜಿತ್ ಪವಾರ್‌ಗೆ ನೀಡಿ ಚುನಾವಣಾ ಆಯೋಗ ಆದೇಶಿಸಿತು. ತಮ್ಮ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಬದಲಿಸಿಕೊಳ್ಳುವಂತೆ 1999ರಲ್ಲಿ ಪಕ್ಷ ಸ್ಥಾಪಿಸಿದ ಶರದ್ ಪವಾರ್ ಅವರಿಗೆ ಆಯೋಗ ತಿಳಿಸಿತು. ಇದಾದ ನಂತರ ಪಕ್ಷದ ಹೆಸರನ್ನು ಎನ್‌ಸಿಪಿ (ಶರದ್‌ಚಂದ್ರ ಬಣ) ಎಂದು ಬದಲಿಸಿ, ಕಹಳೆ ಚಿಹ್ನೆಯನ್ನು ಪವಾರ್ ಬಣ ಪಡೆದುಕೊಂಡಿದೆ.

‘ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರ ವಿಚಾರಧಾರೆಯನ್ನೇ ಆದರ್ಶವಾಗಿಟ್ಟುಕೊಂಡು ಪಕ್ಷವನ್ನು ಆರಂಭಿಸಿದೆವು. ಆದರೆ ಇಂದು ಅಧಿಕಾರದಲ್ಲಿರುವವರು ಗಾಂಧಿ ಕುರಿತು ಒಳ್ಳೆಯ ಮಾತುಗಳನ್ನಾಡಿದರೂ, ನೆಹರು ಅವರನ್ನು ಅವಹೇಳನ ಮಾಡುತ್ತಿದ್ದಾರೆ. ಯಾರೆಲ್ಲಾ ಈ ದೇಶದ ಸ್ವಾತಂತ್ರ್ಯ ಪಾಲ್ಗೊಂಡಿದ್ದಾರೋ ಅವರೆಲ್ಲರೂ ಮಹಾತ್ಮಾ ಗಾಂಧಿ ಮತ್ತು ಸುಭಾಸಚಂದ್ರ ಬೋಸ್ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ನೆಹರೂ ಅವರ ನಾಯಕತ್ವ ಮತ್ತು ಕೊಡುಗೆಯನ್ನೂ ಸ್ವೀಕರಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ನೆಹರೂ ಅವರ ವಿಚಾರಧಾರೆಯನ್ನು ಅತಿಯಾಗಿ ಟೀಕಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘‘ಮೋದಿ ಕಿ ಗ್ಯಾರಂಟಿ’ ಎಂದು ಸುದ್ದಿ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಇದಕ್ಕೆ ಬಳಸುತ್ತಿರುವ ಹಣ ಸಾರ್ವಜನಿಕರದ್ದು. ರೈತರ ಹಣ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಲೇ ಇದೆ. ಪಶ್ಚಿಮ ಬಂಗಾಳಕ್ಕೆ ಹೋಗಿ ಮಮತಾ ಬ್ಯಾನರ್ಜಿ ಅವರನ್ನು ಮೋದಿ ಟೀಕಿಸುತ್ತಿದ್ದಾರೆ. ಆದರೆ 25 ವರ್ಷ ಸಂಸದೆಯಾಗಿ, 5 ವರ್ಷ ಕೇಂದ್ರ ಸಚಿವೆ ಹಾಗೂ 10 ವರ್ಷ ಮುಖ್ಯಮಂತ್ರಿಯಾಗಿರುವ ಮಮತಾ ಅವರನ್ನು ಆ ರಾಜ್ಯದ ಜನ ಒಪ್ಪಿಕೊಂಡು ಆಯ್ಕೆ ಮಾಡುತ್ತಿದ್ದಾರೆ. ಇಂಥವರ ಕುರಿತು ಒಳ್ಳೆಯ ಮಾತನಾಡುವ ಬದಲು, ಪ್ರಧಾನಿ ಟೀಕಿಸುತ್ತಿರುವುದು ವಿಪರ್ಯಾಸ’ ಎಂದು ಶರದ್ ಕಿಡಿಯಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT