ನವದೆಹಲಿ: ಲೋಕಸಭೆಯ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಆಡಿರುವ ಮಾತುಗಳ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷವು, ‘ಆಡಳಿತಾರೂಢ ಪಕ್ಷವು ದೇಶ ಅಂದರೆ ತಾನು ಎಂದು ಭಾವಿಸಬಾರದು’ ಎಂದು ಹೇಳಿದೆ.
ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಟೀಕೆ ಮಾಡುವುದನ್ನು ತಾನು ಮುಂದುವರಿಸುವುದಾಗಿ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ರಾಹುಲ್ ಅವರು ಸತ್ಯವನ್ನು ಮಾತನಾಡಿರುವ ಕಾರಣಕ್ಕೆ ಬಿಜೆಪಿಯವರಿಗೆ ಭೀತಿ ಉಂಟಾಗಿದೆ’ ಎಂದು ಹೇಳಿದರು.
‘ಮೋದಿ ಗುಳ್ಳೆ ಒಡೆದುಹೋಗಿದೆ. ಅವರು ಪಾಲಿಸುತ್ತಿದ್ದ ಭೀತಿಯ ರಾಜಕಾರಣ ಸೋತಿದೆ. ಮೋದಿ ಅವರನ್ನಾಗಲಿ, ಅವರ ಹೊಗಳುಭಟರನ್ನಾಗಲಿ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ವೇಣುಗೋಪಾಲ್ ಹೇಳಿದರು.
ಬಿಜೆಪಿಯವರು ಅರ್ಥವಿಲ್ಲದ ಆಕ್ರೋಶ ವ್ಯಕ್ತಪಡಿಸುವ ಬದಲು, ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿದರೆ ಚೆನ್ನ ಎಂದು ವೇಣುಗೋಪಾಲ್ ಅವರು ಹೇಳಿದರು.