ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರನ್ನು ಬೆಂಬಲಿಸುವ ಬಿಜೆಪಿ: ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ

Published 2 ಮೇ 2024, 12:36 IST
Last Updated 2 ಮೇ 2024, 12:36 IST
ಅಕ್ಷರ ಗಾತ್ರ

ಚಿರಮಿರೀ (ಛತ್ತೀಸಗಢ): ಸಮಸ್ಯೆಗಳು ಮತ್ತು ಜನರ ಕಲ್ಯಾಣದ ಬಗ್ಗೆ ಮಾತನಾಡದ ಹಾಗೂ ಕಡು ಭ್ರಷ್ಟ ಮುಖಂಡರಿಗೆ ಬಿಜೆಪಿಯು ಪ್ರೋತ್ಸಾಹ ನೀಡುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಆರೋಪಿಸಿದರು.

ಬಿಜೆಪಿಯು ಜನರನ್ನು 5 ಕೆ.ಜಿ ಪಡಿತರಕ್ಕೆ ಅವಲಂಬಿತರನ್ನಾಗುವಂತೆ ಮಾಡುತ್ತಿದೆ ಎಂದಿರುವ ಅವರು, ಇದಕ್ಕೆ ಬದಲಾಗಿ ಉದ್ಯೋಗ ನೀಡಲು ಹಾಗೂ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಆಡಳಿತಾರೂಢ ಪಕ್ಷವನ್ನು ಒತ್ತಾಯಿಸುವಂತೆ ಜನರಿಗೆ ಕರೆ ನೀಡಿದರು.

ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಸ್ತಿಯನ್ನು ಕೋಟ್ಯಧಿಪತಿಗಳಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಟೀಕಿಸಿದರು.

ಮೋದಿ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಜನರಿಗೆ ಅನ್ಯಾಯವಾಗಿದೆ. ಆದರೆ ಉದ್ಯಮಿಗಳು ಮತ್ತು ದೊಡ್ಡ ನಾಯಕರು ಉನ್ನತಿ ಹೊಂದಿದ್ದಾರೆ. ಜನರಿಗಾಗಿ ಕೆಲಸ ಮಾಡದಿದ್ದರೂ, ಧರ್ಮದ ಹೆಸರಿನಲ್ಲಿ ಮತ ಪಡೆಯಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ ಎಂದರು.

ಭ್ರಷ್ಟ ಮುಖಂಡರ ವಿರುದ್ಧ ಬಿಜೆಪಿಯವರು ಮೊದಲು ಆರೋಪಗಳನ್ನು ಮಾಡುತ್ತಾರೆ ಅನಂತರ ಅವರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. ಬಿಜೆಪಿಗೆ ಸೇರಿದ ಬಳಿಕ ಆ ಮುಖಂಡರು ಪರಿಶುದ್ಧರಾಗುತ್ತಾರೆ ಮತ್ತು ಅವರ ವಿರುದ್ಧದ ಎಲ್ಲಾ ಪ್ರಕರಣಗಳು ಇಲ್ಲವಾಗುತ್ತವೆ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.

ಬೆಲೆ ಏರಿಕೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದ ಮುಖಂಡರನ್ನು ಬಿಜೆಪಿಯು ಮುನ್ನೆಲೆಗೆ ತರುತ್ತದೆ. ಆದರೆ ಕಾಂಗ್ರೆಸ್‌ ಪಕ್ಷವು, ಜನರಿಗಾಗಿ ಕೆಲಸ ಮಾಡುವ ಮತ್ತು ಅವರನ್ನು ಅರ್ಥೈಸಿಕೊಳ್ಳುವ ಮುಖಂಡರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.

ಜನರು ಸಮಸ್ಯೆಗಳಿಂದ ಬಸವಳಿಯುತ್ತಿರುವಾಗ, ಬಿಜೆಪಿ ಮುಖಂಡರು ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿರುವ ಕುರಿತು ಹಾಗೂ ಪಾಕಿಸ್ತಾನ, ಚೀನಾದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಚುನಾವಣಾ ಬಾಂಡ್‌ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಚುನಾವಣಾ ಬಾಂಡ್‌ ಯೋಜನೆಯು ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ದೂರಿದರು.

ತಾವೊಬ್ಬರೇ ಪ್ರಾಮಾಣಿಕರು ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ. ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ, ಎಷ್ಟು ವಿಶ್ವವಿದ್ಯಾಲಯ, ಆಸ್ಪತ್ರೆ ಮತ್ತು ಶಾಲೆಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಹೇಳುತ್ತಿಲ್ಲ ಎಂದರು.

ಕೋವಿಡ್‌ ಲಸಿಕೆಯ ಪ್ರಮಾಣಪತ್ರದಲ್ಲಿ ಮೋದಿ ಅವರ ಫೋಟೊವನ್ನು ಮುದ್ರಿಸಲಾಗಿತ್ತು. ಲಸಿಕೆ ನಿರ್ಮಿಸಿರುವ ಕಂಪನಿಗಳಿಂದ ಬಿಜೆಪಿ ದೇಣಿಗೆ ಪಡೆದಿರುವುದರಿಂದ ಮೋದಿ ಅವರ ಫೋಟೊವನ್ನು ಅನಂತರ ತೆರವುಗೊಳಿಸಲಾಗಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT