ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್‌–370: ಬೇಕಿದೆ ಸ್ಟ್ರೈಕ್‌ ದರ 80!

Published 9 ಮಾರ್ಚ್ 2024, 22:29 IST
Last Updated 9 ಮಾರ್ಚ್ 2024, 22:29 IST
ಅಕ್ಷರ ಗಾತ್ರ

ನವದೆಹಲಿ: ಇಂದಿರಾ ಗಾಂಧಿ ಅವರ ಹತ್ಯೆಯ ಬೆನ್ನಲ್ಲೇ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಹಾನುಭೂತಿ ಅಲೆಯಿಂದಾಗಿ ‘ಕೈ’ ಪಾಳಯ 404 ಸೀಟು ಮುಡಿಗೇರಿಸಿಕೊಂಡಿತ್ತು. ಸ್ವತಂತ್ರ ಭಾರತದ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಪಕ್ಷವೊಂದರ ಗರಿಷ್ಠ ಗಳಿಕೆ ಇದು. ಬಿಜೆಪಿಗೆ ಆಗ ಸಿಕ್ಕಿದ್ದು ಎರಡು ಸ್ಥಾನಗಳಷ್ಟೆ. ಇದೀಗ ಬಿಜೆಪಿ ನಾಯಕತ್ವದ ಎನ್‌ಡಿಎ ಮೈತ್ರಿಕೂಟವು 400 ಸೀಟುಗಳತ್ತ ದೃಷ್ಟಿ ನೆಟ್ಟಿದೆ. ನರೇಂದ್ರ ಮೋದಿ– ಅಮಿತ್‌ ಶಾ ಜೋಡಿ ತನ್ನ ಈ ಕನಸನ್ನು ನನಸಾಗಿಸಿಕೊಳ್ಳಲು ಸ್ಟ್ರೈಕ್‌ ದರವನ್ನು ಕನಿಷ್ಠ 10ರಷ್ಟು ಹೆಚ್ಚಿಸಿಕೊಳ್ಳಬೇಕಿದೆ.

ಈ ಗುರಿ ಮುಟ್ಟಬೇಕಾದರೆ ಕೇಸರಿ ಪಾಳಯವು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಮತಬೇಟೆ ಮಾಡಬೇಕಿದೆ. 1984ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ದಕ್ಷಿಣದ ರಾಜ್ಯಗಳಲ್ಲಿ ಭದ್ರ ನೆಲೆ ಹೊಂದಿತ್ತು. ಆದರೆ, ಬಿಜೆಪಿಗೆ ಕರ್ನಾಟಕ ಹೊರತು‍ಪಡಿಸಿ ದಕ್ಷಿಣದ ಉಳಿದ ರಾಜ್ಯಗಳಲ್ಲಿ ನೆಲೆಯೂರಲು ಹೆಣಗಾಡುತ್ತಿದೆ. 2019ರ ಚುನಾವಣೆಯಲ್ಲಿ ತಮಿಳುನಾಡು (39 ಕ್ಷೇತ್ರಗಳು), ಕೇರಳ (20 ಕ್ಷೇತ್ರಗಳು) ಹಾಗೂ ಆಂಧ್ರ ಪ್ರದೇಶದಲ್ಲಿ (25 ಕ್ಷೇತ್ರಗಳಲ್ಲಿ) ಬಿಜೆಪಿಯು ಖಾತೆಯನ್ನೇ ತೆರೆದಿರಲಿಲ್ಲ.

ತಮಿಳುನಾಡಿನಲ್ಲಿ ಪ್ರಮುಖ ಮಿತ್ರಪಕ್ಷವಾಗಿದ್ದ ಎಐಎಡಿಎಂಕೆ ಸಖ್ಯವನ್ನು ಬಿಜೆಪಿ ಕಳೆದುಕೊಂಡಿದೆ. ಅಲ್ಲಿ ಕಮಲ ಪಾಳಯಕ್ಕೆ ಭದ್ರ ನೆಲೆ ಇಲ್ಲ. ಮೈತ್ರಿ ಕಡಿದುಕೊಂಡ ಬಳಿಕ ರಾಜ್ಯದಲ್ಲಿ ಆ ಪಕ್ಷ ಮತ್ತಷ್ಟು ಆಕ್ರಮಣಕಾರಿಯಾಗಿದೆ. ಐದು ಸಣ್ಣ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು ಲೋಕ ಸಮರ ಎದುರಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬೇಕು ಎಂಬುದು ಬಿಜೆಪಿಯ ಯೋಜನೆ. ಕೇರಳದಲ್ಲಿ ಖಾತೆ ತೆರೆಯಲು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ನಟ ಸುರೇಶ್ ಗೋಪಿ, ಅನಿಲ್‌ ಆ್ಯಂಟನಿ ಮತ್ತಿತರ ನಾಯಕರನ್ನು ನೆಚ್ಚಿಕೊಂಡಿದೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜತೆಗಿನ ಮೈತ್ರಿ ಚೌಕಾಸಿ ಅಂತಿಮ ಹಂತಕ್ಕೆ ತಲುಪಿದೆ. ಕಳೆದೊಂದು ವರ್ಷದಿಂದ ನಡೆಸುತ್ತಿರುವ ‘ಮಿಷನ್‌ ದಕ್ಷಿಣ’ದ ಯತ್ನಗಳು ಹೆಚ್ಚಿನ ಫಸಲು ಕೊಡಲಿವೆ ಎಂಬ ‘ಅಮಿತ’ ವಿಶ್ವಾಸ ಕೇಸರಿ ಪಾಳಯದ ನಾಯಕರದ್ದು.  

ಉತ್ತರ ಪ್ರದೇಶ ಮತ್ತು ಬಿಹಾರವನ್ನು ಹಿಂದಿ ಸೀಮೆಯ ಹೃದಯ ಭಾಗವೆಂದು ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ 80 ಹಾಗೂ ಬಿಹಾರದಲ್ಲಿ 40 ಕ್ಷೇತ್ರಗಳಿವೆ. ಉತ್ತರ ಪ್ರದೇಶದಲ್ಲಿ ಜಯಂತ್‌ ಚೌಧರಿ ಅವರ ಆರ್‌ಎಲ್‌ಡಿ ಎನ್‌ಡಿಎ ಬಣಕ್ಕೆ ಬಂದಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರ ‘ಮಹಾ ಮೌನ’ವು ಪಕ್ಷಕ್ಕೆ ಅನುಕೂಲ ಮಾಡಿಕೊಡಬಲ್ಲದು ಎಂಬುದು ಕಮಲ ನಾಯಕರ ಲೆಕ್ಕಾಚಾರ. 

ಬಿಹಾರದಲ್ಲಿ 2019ರಲ್ಲಿ ಎನ್‌ಡಿಎ ಮೈತ್ರಿಕೂಟ 39 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಉಳಿದ ಒಂದು ಸ್ಥಾನ ‘ಕೈ’ ಪಾಲಾಗಿತ್ತು. ಈ ಹಿಂದೆ ಬಿಹಾರದಲ್ಲಿ ನಿತೀಶ್ ಕುಮಾರ್‌ ಅವರ ಸಂಯುಕ್ತ ಜನತಾದಳ, ಕಾಂಗ್ರೆಸ್‌ ಹಾಗೂ ಲಾಲೂ ಪ್ರಸಾದ್‌ ಅವರ ರಾಷ್ಟ್ರೀಯ ಜನತಾದಳದ ಮಹಾಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಿತ್ತು. ಈ ಸಲವೂ ಈ ಮಹಾಮೈತ್ರಿಕೂಟದಿಂದ ಬಿಜೆಪಿಗೆ ಪ್ರಬಲ ಸವಾಲು ಎದುರಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ನಿತೀಶ್‌ ಅವರನ್ನು ಮತ್ತೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಳೆದ ಸಲ ಬಿಜೆಪಿ ಹಾಗೂ ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಸಲ ಜೆಡಿಯುಗೆ 14 ಸ್ಥಾನಗಳನ್ನು ಬಿಟ್ಟುಕೊಟ್ಟು ಬಿಜೆಪಿ 20ರಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆಗಳು ನಡೆದಿವೆ. 

ಮಹಾರಾಷ್ಟ್ರದಲ್ಲಿ 2019ರಲ್ಲಿ 25 ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯು 23ರಲ್ಲಿ ಗೆದ್ದಿತ್ತು. ಶಿವಸೇನಾ (ಶಿಂದೆ ಬಣ) ಹಾಗೂ ಎನ್‌ಸಿಪಿಗೆ (ಅಜಿತ್‌ ಪವಾರ್‌ ಬಣ) 18 ಕ್ಷೇತ್ರಗಳನ್ನಷ್ಟೇ ನೀಡಲು ಬಿಜೆಪಿ ಒಲವು ತೋರಿದೆ. 30 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಮಲ ನಾಯಕರ ಯೋಚನೆ. ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿಪಕ್ಷಗಳ ಹಿರಿಯ ತಲೆಯಾಳುಗಳನ್ನು ಬಿಜೆಪಿ ಸೆಳೆದುಕೊಂಡಿದೆ. ಇವರಲ್ಲಿ ಹಲವರನ್ನು ಹುರಿಯಾಳುಗಳನ್ನಾಗಿ ಮಾಡಿದೆ. ಈ ಎಲ್ಲ ತಂತ್ರಗಾರಿಕೆಗಳಿಂದ 370ರ ಗುರಿ ತಲುಪುವುದು ಅಸಾಧ್ಯವೇನಲ್ಲ ಎಂದು ಮೋದಿ– ಶಾ ಜೋಡಿ ಲೆಕ್ಕ ಹಾಕುತ್ತಾ ದೇಶ ಸುತ್ತುತ್ತಿದೆ. 

ಗುರಿ ಈಡೇರಿಕೆಯಲ್ಲಿ ಬಿಜೆಪಿ ‘ಅಸ್ತ್ರ’ಗಳು

  • ನರೇಂದ್ರ ಮೋದಿ ವರ್ಚಸ್ಸು ಹಾಗೂ ‘ಮೋದಿ ಗ್ಯಾರಂಟಿ’

  • ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ 

  • ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು

  • ‘ಆಪರೇಷನ್‌ ಕಮಲ’ ನಡೆಸಿ ವಿಪಕ್ಷಗಳ ಕೂಟ ದುರ್ಬಲ ಮಾಡಿದ್ದು 

  • ಐವರು ಸಾಧಕರಿಗೆ ಭಾರತರತ್ನ ಘೋಷಣೆ 

  • ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

  • ವಿಕಸಿತ ಭಾರತ ಅಭಿಯಾನದಡಿ 16 ಕೋಟಿ ಫಲಾನುಭವಿಗಳನ್ನು ತಲುಪಿದ್ದು

  • ‘ಮಿಷನ್‌ ದಕ್ಷಿಣ ಭಾರತ’ ತಂತ್ರಗಾರಿಕೆ

  • ಬಡವರು, ಮಹಿಳೆಯರು, ಯುವಜನರು ಮತ್ತು ರೈತರು ಎಂಬ ನಾಲ್ಕು ‘ಜಾತಿ’ಗಳ ಜಪ 

ಏನಿದು ಸ್ಟ್ರೈಕ್‌ ದರ?

ಯಾವುದೇ ರಾಜಕೀಯ ಪಕ್ಷವು ತಾನು ಕಣಕ್ಕಿಳಿಸಿದ ಪ್ರತೀ ನೂರು ಅಭ್ಯರ್ಥಿಗಳಲ್ಲಿ ಎಷ್ಟು ಜನರನ್ನು ಗೆಲ್ಲಿಸಿಕೊಂಡು ಬಂದಿದೆ ಎಂಬುದರ ಸರಾಸರಿ ಲೆಕ್ಕಾಚಾರವೇ ಸ್ಟ್ರೈಕ್‌ ದರ. ಉದಾಹರಣೆಗೆ 2014ರಲ್ಲಿ ಬಿಜೆಪಿ ಸ್ಟ್ರೈಕ್‌ ದರ 69.9 ಇದೆ ಎಂದರೆ ಚುನಾವಣೆಗೆ ನಿಂತ ಪ್ರತೀ ನೂರು ಅಭ್ಯರ್ಥಿ
ಗಳಲ್ಲಿ (69.9) 70 ಜನ ಗೆದ್ದಿದ್ದಾರೆ ಎಂದರ್ಥ. 

ಮತ ಗಳಿಕೆ ಲೆಕ್ಕಾಚಾರ

1999ರಲ್ಲಿ ಕಾಂಗ್ರೆಸ್‌ ಶೇ 49.10ರಷ್ಟು ಮತಗಳನ್ನು ಪಡೆದಿತ್ತು. ಬಿಜೆಪಿ ಗಳಿಸಿದ್ದು ಶೇ 7.74 ಮತಗಳನ್ನು. ಬಿಜೆಪಿ 2014ರಲ್ಲಿ ಶೇ 31ರಷ್ಟು ಮತಗಳನ್ನು ಪಡೆದು 282 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. 2019ರ ಚುನಾವಣೆಯಲ್ಲಿ ಶೇ 37.36 ಮತಗಳನ್ನು ಗಳಿಸಿ, 303 ಸೀಟುಗಳನ್ನು ಗೆದ್ದುಕೊಂಡಿತ್ತು. ಆ ಚುನಾವಣೆಯಲ್ಲಿ ಪಕ್ಷದ ಸ್ಟ್ರೈಕ್‌ ದರ 69.5ರಷ್ಟು. ಬಿಜೆಪಿಯು ಈ ಸಲ ಎನ್‌ಡಿಎ ಪಾಳಯದಲ್ಲಿರುವ 30ಕ್ಕೂ ಅಧಿಕ ಮಿತ್ರ ಪಕ್ಷಗಳಿಗೆ 70ರಿಂದ 80 ಕ್ಷೇತ್ರಗಳನ್ನು ಬಿಟ್ಟುಕೊಟ್ಟು 460 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಕೂಟದ ತೆಕ್ಕೆಗೆ ಟಿಡಿಪಿ ಹಾಗೂ ಬಿಜೆಡಿ ಮರಳಿದರೆ ಕೇಸರಿ ಪಡೆಯು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಬಹುದು. ಆದರೆ, ಪಕ್ಷ ಗುರಿ ಇಟ್ಟಿರುವುದು 370 ಕ್ಷೇತ್ರಗಳಲ್ಲಿ ಗೆಲುವಿನತ್ತ. ಅಂದರೆ, ಪಕ್ಷವು ಸ್ಪರ್ಧಿಸಿದ ಪ್ರತೀ 10 ಸ್ಥಾನಗಳ ಪೈಕಿ ಎಂಟರಲ್ಲಿ ಗೆಲುವು ಸಾಧಿಸಬೇಕು. ಪಕ್ಷದ ಮತ ಪ್ರಮಾಣ ಕನಿಷ್ಠ ಶೇ 46ಕ್ಕೆ ಜಿಗಿಯಬೇಕು. ಸ್ಟ್ರೈಕ್‌ ರೇಟ್‌ 80ರ ಗಡಿ ದಾಟಬೇಕು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT