ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ‘ಇಂಡಿಯಾ’ ಕೂಟ, ಬಿಜೆಪಿಗೆ ತಲೆನೋವಾದ ಬಿಎಸ್‌ಪಿ ಅಭ್ಯರ್ಥಿಗಳು

Published 25 ಮಾರ್ಚ್ 2024, 15:26 IST
Last Updated 25 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಕಣಕ್ಕಿಳಿಸಿರುವ ಕೆಲವು ಅಭ್ಯರ್ಥಿಗಳು ‘ಇಂಡಿಯಾ’ ಮೈತ್ರಿಕೂಟ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಮೊದಲ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವ 25 ಕ್ಷೇತ್ರಗಳಿಗೆ ಮಾಯಾವತಿ ನೇತೃತ್ವದ ಪಕ್ಷವು, ಭಾನುವಾರ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಉತ್ತರ ಪ್ರದೇಶದ ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿರುವ ಏಳು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆಹಾಕಿದೆ. ಈ ಅಭ್ಯರ್ಥಿಗಳು ಕಾಂಗ್ರೆಸ್‌– ಎಸ್‌ಪಿಯ ಮುಸ್ಲಿಂ ವೋಟ್‌ಬ್ಯಾಂಕ್‌ಗೆ ಹೊಡೆತ ನೀಡುವುದು ಖಚಿತ.

ಬಿಎಸ್‌ಪಿ ಕಣಕ್ಕಿಳಿಸಿರುವ ಕೆಲವು ಅಭ್ಯರ್ಥಿಗಳು ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವವರೇ ಆಗಿದ್ದಾರೆ. ಇದರಿಂದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ– ‘ಇಂಡಿಯಾ’ ಮೈತ್ರಿಕೂಟ–ಬಿಎಸ್‌ಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. 

ಬಿಎಸ್‌ಪಿಯು ಅಮ್ರೋಹಾ ಕ್ಷೇತ್ರಕ್ಕೆ ಡಾ.ಮುಜಾಹಿದ್ ಹುಸೇನ್ ಅವರ ಹೆಸರು ಘೋಷಿಸಿದೆ. ಇಲ್ಲಿನ ಸಂಸದರಾಗಿರುವ ಡ್ಯಾನಿಶ್‌ ಅಲಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. 

2019ರ ಚುನಾವಣೆಯಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡ್ಯಾನಿಶ್‌, ಬಿಜೆಪಿಯ ಕನ್ವರ್‌ ಸಿಂಗ್‌ ವಿರುದ್ಧ 64 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಈ ಬಾರಿ ಮುಸ್ಲಿಮರ ಮತಗಳು ಹಂಚಿಹೋದರೆ, ಡ್ಯಾನಿಶ್‌ ಗೆಲುವಿನ ಹಾದಿಗೆ ಅಡ್ಡಿಯಾಗಬಹುದು.

ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಮಪುರ ಕ್ಷೇತ್ರದಲ್ಲಿ ಜೀಶನ್ ಅಲಿ ಅವರನ್ನು ಕಣಕ್ಕಿಳಿಸಿದೆ. ಅವರು ಎಸ್‌ಪಿ ಅಭ್ಯರ್ಥಿಯ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ. ರಾಮಪುರ ಕ್ಷೇತ್ರವು ಎಸ್‌ಪಿ ಮುಖಂಡ, ಈಗ ಜೈಲಿನಲ್ಲಿರುವ ಆಜಂ ಖಾನ್‌ ಅವರ ಭದ್ರಕೋಟೆ. ಸಮಾಜವಾದಿ ಪಕ್ಷವು ಈ ಬಾರಿ ಆಜಂ ಅವರ ಕುಟುಂಬದ ಸದಸ್ಯರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. 

ಬಿಎಸ್‌ಪಿಯು ಸಂಭಲ್, ಮೊರಾದಾಬಾದ್, ಪಿಲಿಭಿತ್, ಆವ್ಲಾ ಮತ್ತು ಸಹಾರನ್‌ಪುರ ಕ್ಷೇತ್ರಗಳಲ್ಲೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಯಾವತಿ ಅವರು ಮುಸ್ಲಿಂ ಮತ್ತು ದಲಿತರ ಮತಗಳನ್ನು ಸೆಳೆಯುವ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಸ್ಪಷ್ಟ. 

ರಾಜ್ಯದ ಪಶ್ಚಿಮ ಭಾಗದ ಇನ್ನು ಕೆಲವು ಕ್ಷೇತ್ರಗಳಲ್ಲಿ ಜಾಟ್‌ ಮತ್ತು ಗುರ್ಜರ್‌ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು, ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಹಾದಿಯನ್ನು ಕಠಿಣಗೊಳಿಸಬಹುದು ಎಂದು ವಿಶ್ಲೇಷಿಸಲಾಗಿದೆ. ಮುಜಫ್ಫರ್‌ನಗರ (ದಾರಾ ಸಿಂಗ್), ಮೀರಠ್‌ (ದೇವವ್ರತ್‌ ತ್ಯಾಗಿ), ಬಾಗ್ಪತ್‌ (ಪ್ರವೀಣ್‌ ಬನ್ಸಲ್‌) ಮತ್ತು ಬುದ್ಧನಗರ (ರಾಜೇಂದ್ರ ಸಿಂಗ್ ಸೋಲಂಕಿ) ಕ್ಷೇತ್ರಗಳ ಬಿಎಸ್‌ಪಿ ಅಭ್ಯರ್ಥಿಗಳು, ಬಿಜೆಪಿ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT