ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದು ತಪ್ಪು: ಮಾಯಾವತಿ

Published 25 ಮೇ 2023, 10:48 IST
Last Updated 25 ಮೇ 2023, 10:48 IST
ಅಕ್ಷರ ಗಾತ್ರ

ಲಖನೌ: ನೂತನ ಸಂಸತ್‌ ಭವನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ ಸಮಾರಂಭವನ್ನು ವಿರೋಧ ಪಕ್ಷಗಳು ಬಹಿಷ್ಕರಿಸುವುದು ಸರಿಯಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಮೇ 28ರಂದು (ಭಾನುವಾರ) ನೂತನ ಸಂಸತ್‌ ಭವನ ಉದ್ಘಾಟಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಹ್ವಾನ ನೀಡಿಲ್ಲ. ಇದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ನೂತನ ಭವನವನ್ನು ನಿರ್ಮಾಣ ಮಾಡಿರುವ ಕೇಂದ್ರ ಸರ್ಕಾರವು, ಉದ್ಘಾಟನೆ ಮಾಡುವ ಹಕ್ಕನ್ನೂ ಹೊಂದಿದೆ ಎಂದು ಹೇಳಿದ್ದಾರೆ.

'ಉದ್ಘಾಟನೆ ಸಮಾರಂಭದ ವಿಚಾರವನ್ನು ವಿರೋಧ ಪಕ್ಷಗಳು ಆದಿವಾಸಿ ಮಹಿಳೆಯ ಘನತೆಯೊಂದಿಗೆ ತಳುಕು ಹಾಕುತ್ತಿರುವುದು ತಪ್ಪು. ರಾಷ್ಟ್ರಪತಿ ಚುನಾವಣೆ ವೇಳೆ ಅವಿರೋಧ ಆಯ್ಕೆಗೆ ತಾವು ಅನುವು ಮಾಡಿಕೊಟ್ಟಿರಲಿಲ್ಲ ಎಂಬುದನ್ನೂ ಅವರು (ವಿರೋಧ ಪಕ್ಷಗಳು) ಇದೇ ನೆಲೆಯಲ್ಲಿ ಯೋಚಿಸಬೇಕಾಗುತ್ತದೆ' ಎಂದು ತಿವಿದಿದ್ದಾರೆ.

ಜೊತೆಗೆ, ಉದ್ಘಾಟನಾ ಸಮಾರಂಭಕ್ಕೆ ತಮನ್ನು ಆಹ್ವಾನಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಮಾಯಾವತಿ, ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳ ಕಾರಣದಿಂದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ತಿಳಿಸಿದ್ದಾರೆ.

ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿದಂತೆ 19 ವಿರೋಧ ಪಕ್ಷಗಳು, ಸಂಸತ್‌ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿವೆ.

ಆದರೆ, ಆಂಧ್ರ ಪ್ರದೇಶದಲ್ಲಿ ಅಧಿಕಾರಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌, ಒಡಿಶಾದ ಬಿಜು ಜನತಾದಳ, ತೆಲುಗು ದೇಶಂ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT