ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಹತ್ಯೆ: ಗುಂಡು ಹಾರಿಸಿದ್ದು ಸೇನೆಯ ಯೋಧ?

ಎಸ್‌ಐಟಿ ವರದಿಯಲ್ಲಿ ಬಹಿರಂಗ
Last Updated 7 ಡಿಸೆಂಬರ್ 2018, 20:17 IST
ಅಕ್ಷರ ಗಾತ್ರ

ಲಖನೌ: ಜನರ ಗುಂಪು ಬುಲಂದ್‌ಶಹರ್‌ನ ಚಿಂಗರಾವಟಿ ಪೊಲೀಸ್‌ ಹೊರಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಅವರನ್ನು ಸೇನೆಯ ಯೋಧ ಜೀತು‌ಫೌಜಿ ಎಂಬವರು ಹತ್ಯೆ ಮಾಡಿರಬಹುದು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯಲ್ಲಿ ಹೇಳಲಾಗಿದೆ.

ಮಹಾವ್‌ ಗ್ರಾಮದಲ್ಲಿ ಪ್ರಾಣಿಗಳ ಎಲುಬು ಸಿಕ್ಕ ಕಾರಣಕ್ಕೆ ಜನರು ರೊಚ್ಚಿಗೆದ್ದು ಪೊಲೀಸ್‌ ಹೊರಠಾಣೆಯ ಮೇಲೆ ಸೋಮವಾರ ದಾಳಿ ನಡೆಸಿದ್ದರು. ಈ ಸಂಘರ್ಷದಲ್ಲಿ ಸುಬೋಧ್‌ ಮತ್ತು ಸುಮಿತ್‌ ಎಂಬ ಯುವಕ ಬಲಿಯಾಗಿದ್ದರು.

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಿಯೋಜನೆಗೊಂಡಿರುವ ಜೀತು ಮಹಾವ್‌ ಗ್ರಾಮದವರು. ಹೊರಠಾಣೆಯನ್ನು ಆಕ್ರಮಿಸಿದ ಗುಂಪಿನಲ್ಲಿ ಜೀತು ಅವರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜೀತು ಅವರು ಪಿಸ್ತೂಲ್‌ನಿಂದ ಗುಂಡು ಹಾರಿಸುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿವೆ. ಈ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ಹಿಂಸಾಚಾರದ ನಂತರ ಜೀತು ಅವರು ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರ ಎರಡು ತಂಡಗಳು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿವೆ. ‘ಸುಬೋಧ್‌ ಅವರ ಸಾವಿಗೆ ಕಾರಣವಾದ ಗುಂಡು ಹೊಡೆದವರು ಜೀತು ಎಂಬಂತೆ ಕಾಣಿಸುತ್ತಿದೆ. ಆದರೆ, ವಿಡಿಯೊ ದೃಶ್ಯಗಳ ಸಮಗ್ರ ತನಿಖೆಯ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು’ ಎಂದು ಬುಲಂದ್‌ಶಹರ್‌ನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸೇನೆಯ ಅಧಿಕಾರಿಗಳ ಜತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಜೀತು ಅವರನ್ನು ಬಂಧಿಸಲು ನೆರವು ನೀಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊರಠಾಣೆಗೆ ಮುತ್ತಿಗೆ ಹಾಕಿದ ಗುಂಪಿನಲ್ಲಿ ಜೀತು ಇರಲಿಲ್ಲ. ಜೀತು ಆಗ ತಮ್ಮ ಕೆಲಸದ ಸ್ಥಳದಲ್ಲಿದ್ದರು ಎಂದು ಅವರ ತಾಯಿ ರತನ್‌ ಕೌರ್‌
ಹೇಳಿದ್ದಾರೆ.

ಮುಖ್ಯಾಂಶಗಳು

* ಶುಕ್ರವಾರ ವರದಿ ಸಲ್ಲಿಸಿದ ಎಸ್‌ಐಟಿ

* ಹಿಂಸೆಗೆ ಆಡಳಿತಾತ್ಮಕ ವೈಫಲ್ಯ ಕಾರಣ ಎಂದು ವರದಿ

* ಈಗಾಗಲೇ ನಾಲ್ವರು ಆರೋಪಿಗಳ ಸೆರೆ, ಉಳಿದವರಿಗಾಗಿ ಶೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT