ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರುದ್ಧ ಪ್ರತಿಭಟನೆ: 6 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಗೆ ಪೊಲೀಸ್ ನೋಟಿಸ್

Last Updated 3 ಜನವರಿ 2020, 6:14 IST
ಅಕ್ಷರ ಗಾತ್ರ

ಫಿರೋಜಾಬಾದ್: ಪೌರತ್ವ (ತಿದ್ದುಪಡಿ ಕಾಯ್ದೆ) ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 21 ಮಂದಿ ಸಾವಿಗೀಡಾಗಿದ್ದರು. ಎರಡು ವಾರಗಳ ಹಿಂದೆ ನಡೆದ ಈ ಪ್ರತಿಭಟನೆಯಲ್ಲಿ ಖಾಸಗಿ ಮತ್ತುಸರ್ಕಾರಿ ಆಸ್ತಿಗಳಿಗೆ ಹಾನಿಯಾಗಿದ್ದು, ಹಲವಾರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು.

ಡಿಸೆಂಬರ್ 20ರಂದು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರು. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 35 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರಲ್ಲಿ 29 ಮಂದಿಯ ಹೆಸರಿದ್ದು, 14 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಫಿರೋಜಾಬಾದ್ ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ,ಸ್ಥಳೀಯ ಪೊಲೀಸರು 200 ಮಂದಿಗೆ ನೋಟಿಸ್ ನೀಡಿದ್ದಾರೆ.

ಪೊಲೀಸರು ನೀಡಿದ ನೋಟಿಸ್‌ನಲ್ಲಿಬನ್ನೆ ಖಾನ್ ಎಂಬವರ ಹೆಸರೂ ಇದೆ. ಆದರೆ ಬನ್ನೆ ಖಾನ್ 6 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ. ಇನ್ನುಳಿದಂತೆ 90 ಮತ್ತು 93ರ ಹರೆಯದ ಇಬ್ಬರು ಹಿರಿಯ ನಾಗರಿಕರಿಗೆ ಪೊಲೀಸ್ ನೋಟಿಸ್ ಕಳಿಸಿದ್ದಾರೆ . ಇದರಲ್ಲಿ 93ರ ಹರೆಯದ ಫಸಾಹತ್ ಮೀರ್ ಖಾನ್ ಕಾಯಿಲೆಗೊಳಗಾಗಿ ಹಾಸಿಗೆ ಹಿಡಿದು ತಿಂಗಳುಗಳೇ ಕಳೆದಿವೆ. 90ರ ಹರೆಯದ ಸೂಫಿ ಅನ್ಸಾರ್ ಹುಸೇನ್ ನ್ಯುಮೋನಿಯಾದಿಂದ ಬಳಲುತ್ತಿದ್ದು ದೆಹಲಿಯ ಆಸ್ಪತ್ರೆಯಿಂದ ಕೆಲವು ದಿನಗಳ ಹಿಂದೆಯಷ್ಟೇ ಮನೆ ಸೇರಿದ್ದಾರೆ.

ಫಸಾಯತ್ ಮೀರ್ ಖಾನ್ ಅವರು ಫಿರೋಜಾಬಾದ್‌ನಲ್ಲಿರುವ ಕಾಲೇಜೊಂದರ ಸಂಸ್ಥಾಪಕರಾಗಿದ್ದಾರೆ. ಅದೇ ವೇಳೆ ಹುಸೇನ್ ಅವರು 6 ದಶಕಗಳಿಂದ ಮಸೀದಿಯೊಂದರ ಉಸ್ತುವಾರಿ ವಹಿಸಿದ್ದಾರೆ. ಇವರಿಬ್ಬರೂ ಸ್ಥಳೀಯ ಶಾಂತಿ ಸಮಿತಿಯ ಸದಸ್ಯರಾಗಿದ್ದಾರೆ.

ಮೆಜಿಸ್ಟ್ರೇಟ್ ಮುಂದೆ ಹಾಜರಾಗಿ, ₹10 ಲಕ್ಷ ಬಾಂಡ್ ಸಲ್ಲಿಸಿ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಈಹಿರಿಯ ನಾಗರಿಕರಿಗೆ ಪೊಲೀಸರು ಆದೇಶಿಸಿದ್ದಾರೆ.

'ನಾನು ಡಿಸೆಂಬರ್ 25ರಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ನಿನ್ನೆಯಷ್ಟೇ ಮನೆಗೆ ಬಂದಿದ್ದೇನೆ. ಇದೇನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಲ್ಲಿ ಶಾಂತಿ ನೆಲೆಸುವಂತೆ ನಾನು ಜೀವನದುದ್ದಕ್ಕೂ ಆಶಿಸಿದ್ದೇನೆ. ನನಗೀಗ 90 ವರ್ಷ. ಈಗ ಈ ರೀತಿ ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಡಿಸೆಂಬರ್ 20ಕ್ಕೆ ಉರುಸ್ ಇತ್ತು.ನಾನು ಅಧಿಕಾರಿಗಳನ್ನು ಆಹ್ವಾನಿಸಿದ್ದೆ' ಎಂದು ಅನ್ಸಾರ್ ಹುಸೇನ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇದು ಕಣ್ತಪ್ಪಿನಿಂದ ನಡೆದಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.ಈ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವುದು ತುಂಬಾ ಒತ್ತಡದ ಕೆಲಸ. ವಿವಿಧ ಪೊಲೀಸ್ ಠಾಣೆಯಿಂದ ಲಭಿಸಿದ ವರದಿ ಪ್ರಕಾರ ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆಹಿರಿಯ ನಾಗರಿಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಫಿರೋಜಾಬಾದ್ ನಗರ ಮೆಜಿಸ್ಟ್ರೇಟ್ ಕನ್ವರ್ಪಂಕಜ್ ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT