ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನುಮಾನ್ ಚಾಲಿಸಾ ಪ್ರಕರಣ: ನ್ಯಾಯಾಲಯಕ್ಕೆ ಗೈರಾದ ಬಿಜೆಪಿಯ ನವನೀತ್ ರಾಣಾ

Published 12 ಜೂನ್ 2024, 9:33 IST
Last Updated 12 ಜೂನ್ 2024, 9:33 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಮನೆ ಎದುರು 2022ರಲ್ಲಿ ಹನುಮಾನ್ ಚಾಲಿಸಾ ಓದಲು ಯೋಜನೆ ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ನವನೀತ್ ರಾಣಾ ಅವರು ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯದ ವಿಚಾರಣೆಗೆ ಬುಧವಾರ ಗೈರಾಗಿದ್ದಾರೆ. 

ನವನೀತ್ ಅವರ ಪತಿ, ಅಮರಾವತಿ ಶಾಸಕ ರವಿ ರಾಣಾ ಅವರೂ ಈ ಪ್ರಕರಣದ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾದರು.

ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಅವರಿರುವ ಮಾತೋಶ್ರೀ ನಿವಾಸದ ಎದುರು ಹನುಮಾನ ಚಾಲಿಸಾ ಓದುವ ಯೋಜನೆಯನ್ನು ಈ ದಂಪತಿ ಹೊಂದಿದ್ದರು. ಮುಂಬೈನ ಖಾರ್ ಪ್ರದೇಶದಲ್ಲಿರುವ ಇವರ ಮನೆಯಿಂದ ಈ ಇಬ್ಬರನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ, ರಾಣಾ ದಂಪತಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯೊಡ್ಡಿದ ಆರೋಪ ಈ ಇಬ್ಬರ ಮೇಲಿದೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, 2023ರ ಡಿಸೆಂಬರ್‌ನಲ್ಲಿ ಪ್ರಕರಣದಿಂದ ಇವರನ್ನು ಬಿಡುಗಡೆಗೊಳಿಸುವ ಮನವಿಯನ್ನು ತಿರಸ್ಕರಿಸಿತು. ಸಾಕ್ಷಿಗಳ ಹೇಳಿಕೆ ಆಧರಿಸಿ ಮೇಲ್ನೋಟಕ್ಕೆ ಇವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ರಾಣಾ ದಂಪತಿ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲು ಜನವರಿಯಿಂದ ಹಲವು ಬಾರಿ ನ್ಯಾಯಾಲಯ ದಿನಾಂಕ ನಿಗದಿಪಡಿಸಿತ್ತು. ಆದರೆ ಆರೋಪಿಗಳು ಹಾಜರಾಗದ ಕಾರಣ, ನ್ಯಾಯಾಲಯ ದಿನಾಂಕ ಮುಂದೂಡುತ್ತಲೇ ಬಂದಿತು. ಜೂನ್ 12ರಂದು ತಪ್ಪದೇ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್.ರೋಕಡೆ ಅವರು ಈ ಹಿಂದಿನ ವಿಚಾರಣಾ ದಿನಾಂಕದಂದು ತಾಕೀತು ಮಾಡಿದ್ದರು.

ಆದರೆ ಬುಧವಾರ ಪ್ರಕರಣದ ವಿಚಾರಣೆ ಆರಂಭವಾದಾಗ ರವಿ ರಾಣಾ ಒಬ್ಬರೇ ಹಾಜರಾಗಿದ್ದರು. ನವನೀತ್ ರಾಣಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವಿನಾಯಿತಿ ಅರ್ಜಿಯನ್ನು ವಕೀಲ ಶಬೀರ್ ಶೋರಾ ಅವರು ಸಲ್ಲಿಸಿದರು.

ರವಿ ರಾಣಾ ಅವರ ಹಾಜರಾತಿಯನ್ನು ಪಡೆದ ನ್ಯಾಯಾಲಯ ನವನೀತ್ ಅವರ ಅರ್ಜಿಯನ್ನು ಪುರಸ್ಕರಿಸಿತು. ಪ್ರಕರಣದ ಮುಂದಿನ ವಿಚಾರಣೆಗೆ ಜುಲೈ 2ಕ್ಕೆ ದಿನಾಂಕ ನಿಗದಿಪಡಿಸಿತು.

ವಿಶೇಷ ನ್ಯಾಯಾಲಯವು ಪ್ರಕರಣದಿಂದ ಬಿಡುಗಡೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದನ್ನು ರಾಣಾ ದಂಪತಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. 

2022ರ ಏಪ್ರಿಲ್‌ನಲ್ಲಿ ಉದ್ಧವ್ ಠಾಕ್ರೆ ಮನೆ ಎದುರು ಹನುಮಾನ್ ಚಾಲಿಸಾ ಪಠಿಸಲು ದಂಪತಿ ಯೋಜನೆ ಹಾಕಿಕೊಂಡಿದ್ದರು. ಇವರ ನಿರ್ಧಾರದಿಂದ ಶಿವಸೇನಾ (ಯಿಬಿಟಿ) ಕಾರ್ಯಕರ್ತರ ಆಕ್ರೋಶಗೊಂಡಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ರಾಣಾ ಅವರನ್ನು ಬಂಧಿಸಿದ್ದರು. 

ಸದ್ಯ ರವಿ ಹಾಗೂ ನವನೀತ್ ರಾಣಾ ಇಬ್ಬರೂ ಜಾಮೀನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನವನೀತ್ ಅವರು ಅಮರಾವತಿ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT