ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾತಿ ವಿವಾಹ: ಮಗಳ ವರಿಸಿದವನ ಮೇಲೆ ವಾಹನ ಹರಿಸಿದ ದಂಪತಿಯ ಬಂಧನ

Published 8 ಮಾರ್ಚ್ 2024, 11:47 IST
Last Updated 8 ಮಾರ್ಚ್ 2024, 11:47 IST
ಅಕ್ಷರ ಗಾತ್ರ

ಈರೋಡ್: ಮಗಳು ಅಂತರ್ಜಾತಿ ವಿವಾಹ ಆದಳು ಎಂಬ ಕಾರಣಕ್ಕಾಗಿ, ತಮಿಳುನಾಡಿನ ಸತ್ಯಮಂಗಲ ಬಳಿ ಗೂಡ್ಸ್ ವಾಹನ ಹರಿಸಿ ಕೊಲೆ ಪ್ರಯತ್ನ ನಡೆಸಿದ ದಂಪತಿಯನ್ನು ಭವಾನಿಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರ ಈ ಕೃತ್ಯಕ್ಕೆ ಅಳಿಯನ ತಂಗಿ ಹರಿಣಿ (16) ಮೃತಪಟ್ಟಿದ್ದಾಳೆ.

ಚಂದ್ರನ್ (47) ಹಾಗೂ ಚಿತ್ರಾ (40) ಬಂಧಿತರು. ಇವರ ವಿರುದ್ಧ ಕೊಲೆ, ಕೊಲೆಗೆ ಯತ್ನ, ಪರಿಶಿಷ್ಟ ಜಾತಿ ಹಾಗೂ ಪಂಗಡ ಕಾಯ್ದೆಯಡಿ ಗಂಭೀರವಾದ ಹಲ್ಲೆ ನಡೆಸಿದ ಆರೋಪದಡಿ ದೂರು ದಾಖಲಾಗಿದೆ.

ಭವಾನಿಸಾಗರದ ಎರ್ರನಕತ್ತೂರ್‌ನ ಸುಭಾಷ್ (24) ಎಂಬುವವರು ತಮ್ಮ 16 ವರ್ಷದ ಸೋದರಿಯನ್ನು ಸತ್ಯಮಂಗಲದಲ್ಲಿರುವ ಶಾಲೆಗೆ ಬಿಡಲು ಬೈಕ್‌ನಲ್ಲಿ ಬುಧವಾರ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಗೂಡ್ಸ್ ವಾಹನವೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆರಂಭದಲ್ಲಿ ಪೊಲೀಸರು ಇದೊಂದು ಅಪಘಾತ ಪ್ರಕರಣ ಎಂದು ದಾಖಲಿಸಿಕೊಂಡಿದ್ದರು.

ಆದರೆ, ಸುಭಾಷ್ ಅವರ ವಿವಾಹಕ್ಕೆ ಅವರ ಮಾವ ಚಂದ್ರನ್ ಮತ್ತು ಅತ್ತೆ ಚಿತ್ರಾ ಅವರ ವಿರೋಧವಿತ್ತು. ಗೌಂಡರ್ ಸಮುದಾಯಕ್ಕೆ ಸೇರಿದ ಈ ದಂಪತಿಯು, ತಮ್ಮ ಮಗಳು ಮಂಜುವನ್ನು ದಲಿತ ಸಮುದಾಯ ‘ಕುರುವ’ಕ್ಕೆ ಸೇರಿದ ಸುಭಾಷ್‌ಗೆ ಕೊಡಲು ಇಷ್ಟವಿರಲಿಲ್ಲ. ಈ ಅಪಘಾತ ಸಂಭವಿಸಿದ ನಂತರ ದಂಪತಿ ನಾಪತ್ತೆಯಾಗಿದ್ದಾರೆ ಎಂದು ಸುಭಾಷ್ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿಯ ಬೆನ್ನು ಹತ್ತಿದ ಪೊಲೀಸರು ತನಿಖೆ ಕೈಗೊಂಡಿದ್ದರು. 2023ರ ಅ. 6ರಂದು ಸುಭಾಷ್ ಮತ್ತು ಮಂಜು ವಿವಾಹವಾಗಿದ್ದರು. ಇದನ್ನು ಒಪ್ಪದ ಚಂದ್ರನ್ ಮತ್ತು ಚಿತ್ರಾ ಈ ಕೊಲೆಗೆ ಸಂಚು ರೂಪಿಸಿದ್ದರು. ಗೂಡ್ಸ್‌ ವಾಹನವೇರಿದ ಚಂದ್ರನ್ ಮತ್ತು ಚಿತ್ರಾ, ಸುಭಾಷ್ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಪಡಿಸಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಭಾಷ್ ತಂಗಿ ಹರಿಣಿ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟರು. ಸುಭಾಷ್‌ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕೊಯಮತ್ತೂರ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪೊಲೀಸರು ಪ್ರಕರಣವನ್ನು ಅಪಘಾತದಿಂದ ಕೊಲೆ ಎಂದು ನಂತರ ದಾಖಲಿಸಿಕೊಂಡಿದ್ದಾರೆ. ಚಂದ್ರನ್ ಮತ್ತು ಚಿತ್ರಾರನ್ನು ಪತ್ತೆ ಮಾಡಲು ಮೂರು ತಂಡಗಳನ್ನು ಪೊಲೀಸರು ರಚಿಸಿದ್ದರು. ಈ ಇಬ್ಬರು ಇರುವ ಖಚಿತ ಮಾಹಿತಿ ಮೇರೆಗೆ ಉದಕಮಂಡಲದಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಶುಕ್ರವಾರ ಇವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಇವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT