ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನೀರು ಹರಿಸಲು ಸೂಚನೆ: ಮೇಕೆದಾಟು ಯೋಜನೆ ಚರ್ಚೆ ಮುಂದೂಡಿಕೆ

Last Updated 31 ಆಗಸ್ಟ್ 2021, 21:23 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿಗೆ ಆಗಸ್ಟ್‌ 31ರವರೆಗೆ ಹರಿಸಬೇಕಾಗಿರುವ ನೀರಿನ ಪೈಕಿ, ಸದ್ಯಕ್ಕೆ 7 ಟಿಎಂಸಿ ಅಡಿಯಷ್ಟು ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಮಂಗಳವಾರ ಸೂಚಿಸಿದೆ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ಅಂತಿಮ ತೀರ್ಪಿನ ಪ್ರಕಾರ, ಕರ್ನಾಟಕವು ಸಾಮಾನ್ಯ ವರ್ಷದಲ್ಲಿ ಜೂನ್‌ನಿಂದ ಆಗಸ್ಟ್‌ ಅಂತ್ಯದವರೆಗೆ 86.83 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಆದರೆ, ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯದ ಪ್ರದೇಶದ ಜಲಾಶಯಗಳು ಭರ್ತಿ ಆಗದೇ ಇರುವುದರಿಂದ, ಕರ್ನಾಟಕವು ಕರ್ನಾಟಕವು ಆಗಸ್ಟ್‌ 30ರವರೆಗೆ, 57.04ಟಿಎಂಸಿ ಅಡಿ ನೀರನ್ನು ಮಾತ್ರ ಹರಿಸಿದೆ. ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ, ಬಾಕಿ ನೀರನ್ನು ತಮಿಳುನಾಡಿಗೆ ಹರಿಸುವುದಾಗಿ ಕರ್ನಾಟಕವು ಪ್ರಾಧಿಕಾರಕ್ಕೆ ತಿಳಿಸಿದೆ.

ಆದರೆ, ಈ ಅವಧಿಯಲ್ಲಿ ತನಗೆ ಬರಬೇಕಾದ ಬಾಕಿ ಇರುವ ಅಷ್ಟೂ ನೀರನ್ನು ಕರ್ನಾಟಕದ ಜಲಾಶಯಗಳಿಂದ ಬಿಡುಗಡೆ ಮಾಡುವಂತೆತಮಿಳುನಾಡು ಆಗ್ರಹಿಸಿತ್ತು.

ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ತಮಿಳುನಾಡು ಪಿಡಬ್ಲ್ಯುಡಿ ಹೆಚ್ಚುವರಿ ಕಾರ್ಯದರ್ಶಿ ಸಂದೀಪ ಸಕ್ಸೇನಾ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದರು. ಕೇರಳ ಮತ್ತು ಪುದುಚೆರಿಯ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

ಮೇಕೆದಾಟು ಅಣೆಕಟ್ಟೆ ಚರ್ಚೆ ಮುಂದೂಡಿಕೆ: ಮೇಕೆದಾಟು ಅಣೆಕಟ್ಟೆ ಯೋಜನೆಗಾಗಿ ಕರ್ನಾಟಕವು ಸಲ್ಲಿಸಿದ ಪ್ರಸ್ತಾವಕ್ಕೆ ತಮಿಳುನಾಡು ಹಾಗೂ ಪುದುಚೆರಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಚರ್ಚೆಯನ್ನು ಮುಂದೂಡಿದ್ದಾಗಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಾಲ್ದಾರ್ ತಿಳಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳುನಾಡಿನ ಗುಂಡಾರ್‌ ಯೋಜನೆಗೆ ಕರ್ನಾಟಕವು ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಆ ಚರ್ಚೆಯನ್ನೂ ಮುಂದೂಡಲಾಗಿದೆ. ಇತರ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯಬೇಕಿದ್ದು, ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT