ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ರಾಬಡಿ ದೇವಿಯನ್ನು ತನಿಖೆ ನಡೆಸಿದ ಸಿಬಿಐ

Last Updated 6 ಮಾರ್ಚ್ 2023, 15:46 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ‘ಹೆಚ್ಚಿನ ತನಿಖೆ’ ನಡೆಸಲು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಪಟ್ನಾ ನಿವಾಸಕ್ಕೆ ಸೋಮವಾರ ಸಿಬಿಐ ತೆರಳಿತು. ರಾಬ್ಡಿ ದೇವಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿತು.

‘ಇದು ದಾಳಿ ಅಥವಾ ಶೋಧ ಕಾರ್ಯ ಅಲ್ಲ. ರಾಬ್ಡಿ ದೇವಿ ಅವರಿಗೆ ಮೊದಲೇ ನೋಟಿಸ್‌ ನೀಡಲಾಗಿತ್ತು. ಸೋಮವಾರ ಮನೆಯಲ್ಲಿಯೇ ಇರುವುದಾಗಿ ಅವರು ತಿಳಿಸಿದ್ದರು’ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಅವರ ಪತಿ ಲಾಲು ಪ್ರಸಾದ್‌ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ಸಿಬಿಐ ಹೇಳಿದೆ.

ಈ ಹಗರಣ ಸಂಬಂಧ ಸಿಬಿಐ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದೆ. ಮಾರ್ಚ್‌ 15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಲಾಲು ಪ್ರಸಾದ್‌ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲಾ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿದೆ. ಹಗರಣ ಸಂಬಂಧ ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಲು ಸಿಬಿಐ ಮುಂದಾಗಿದೆ ಎನ್ನಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?: ಮುಂಬೈ, ಜಬಲ್‌ಪುರ, ಕೋಲ್ಕತ್ತಾ, ಜೈಪುರ ಹಾಗೂ ಹಾಜಿಪುರದ ವಿವಿಧ ರೈಲ್ವೆ ವಲಯಗಳಲ್ಲಿ ಬಿಹಾರದವರನ್ನು ಗ್ರೂಪ್‌ ಡಿ ಹುದ್ದೆಯ ಸಮಾನಾಂತರ ಹುದ್ದೆಗಳಿಗೆ 2004–2009 ಅವಧಿಯಲ್ಲಿ ಲಾಲು ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ನೇಮಕ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಲಾಲು ಅವರ ಕುಟುಂಬ ಸದಸ್ಯರ ಹಾಗೂ ‘ಎಕೆ ಇನ್ಫೊಸಿಸ್ಟಮ್‌ ಪ್ರೈವೆಟ್‌ ಲಿಮಿಟೆಡ್‌’ ಎನ್ನುವ ಕಂಪನಿ ಹೆಸರಿಗೆ ಉದ್ಯೋಗ ಪಡೆದುಕೊಂಡವರು ಅಥವಾ ಅವರ ಕುಟುಂಬದವರು ತಮ್ಮ ಭೂಮಿ ವರ್ಗಾಯಿಸಿದ್ದರು. ನಂತರ ಈ ಕಂಪನಿಯನ್ನು ಲಾಲು ಕುಟುಂಬದವರೊಬ್ಬರು ಖರೀದಿಸಿದ್ದರು.

ಹೀಗೆ 1.05 ಲಕ್ಷ ಚದರ ಅಡಿಗಳಷ್ಟು ಭೂಮಿಯನ್ನು ಐದು ಕ್ರಯಪತ್ರ ಹಾಗೂ ಎರಡು ದಾನಪತ್ರಗಳ ಮೂಲಕ ಉದ್ಯೋಗ ಪಡೆದವರಿಂದ ಲಾಲು ಕುಟುಂಬದವರು ಪಡೆದುಕೊಂಡಿದ್ದಾರೆ. ನಗದು ರೂಪದಲ್ಲಿ ಹಣ ಸಂದಾಯ ಮಾಡಲಾಗಿದೆ ಎಂದು ಹೆಚ್ಚಿನ ಕ್ರಯಪತ್ರಗಳಲ್ಲಿ ನಮೂದಿಸಲಾಗಿದೆ. ಜೊತೆಗೆ, ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಈ ಭೂಮಿಗಳನ್ನು ಖರೀದಿಸಲಾಗಿದೆ.

ಗ್ರೂಪ್‌ ಡಿ ಹುದ್ದೆಗಳಿಗೆ ಸಮಾನಾಂತರವಾಗಿ ನೇಮಕ ಮಾಡುವಾಗ, ರೈಲ್ವೆ ಇಲಾಖೆಯ ಮಾರ್ಗಸೂಚಿಗಳ ಪಾಲನೆ ಆಗಿಲ್ಲ ಎಂದು ಆರೋಪಿಸಲಾಗಿದೆ.

* ‘ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ತೇಜಸ್ವಿ ಯಾದವ್‌ ಅವರೂ ಸೇರಿದಂತೆ ಎಂಟು ವಿರೋಧ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಮರುದಿನವೇ ಸಿಬಿಐ ರಾಬ್ಡಿ ದೇವಿ ಅವರ ನಿವಾಸಕ್ಕೆ ಭೇಟಿ ನೀಡಿದೆ

* ನೂರಾರು ಕಿ.ಮೀ. ದೂರದಲ್ಲಿದ್ದ ರಾಬ್ಡಿ ದೇವಿ ಅವರ ಹಿರಿಯ ಪತ್ರ, ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ಸಿಬಿಐ ಭೇಟಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸೈಕಲ್‌ ಮೂಲಕ ತಾಯಿ ನಿವಾಸಕ್ಕೆ ತೆರಳಿದ್ದಾರೆ

* ಸಿಬಿಐ ರಾಬ್ಡಿ ದೇವಿ ನಿವಾಸಕ್ಕೆ ಭೇಟಿ ನೀಡಿರುವ ಕುರಿತು ವಿಷಯ ತಿಳಿಯುತ್ತಿದಂತೆಯೇ ಕೋಪಗೊಂಡ ಆರ್‌ಜೆಡಿ ಕಾರ್ಯಕರ್ತರು ರಾಬ್ಡಿ ದೇವಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿ ಬಟ್ಟೆ ಹರಿದುಕೊಂಡು ಶಪಥ ಮಾಡಿದರು.

ಬಿಜೆಪಿ

ಅವರು ಮಾಡಿದ್ದನ್ನು ಅವರೇ ಉಣ್ಣುತ್ತಿದ್ದಾರೆ. ಸಿಬಿಐ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ಅದು ತನ್ನ ಕೆಲಸ ಮಾಡುತ್ತಿದೆ

ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಿಗೆ ಕೇಂದ್ರವು ಸಿಬಿಐ, ಇ.ಡಿಯನ್ನು ಕಳುಹಿಸುತ್ತದೆ. ಇಲ್ಲವೇ ಲೆಫ್ಟಿನೆಂಟ್‌ ಗವರ್ನರ್‌ ಅಥವಾ ರಾಜ್ಯಪಾಲರಿಂದ ಕೆಲಸಕ್ಕೆ ತೊಡಕು ಮಾಡುತ್ತದೆ

-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ರೈಲ್ವೆ ಸಚಿವನಾಗಿ ನನ್ನ ತಂದೆಗೆ ಉದ್ಯೋಗ ನೀಡುವ ಅಧಿಕಾರ ಇರಲಿಲ್ಲ. ಬಿಜೆಪಿಯೊಂದಿಗೆ ಸಖ್ಯ ಬೆಳೆಸುವ ಪಕ್ಷಗಳಿಗೆ ಕೇಂದ್ರ ತನಿಖಾ ಸಂಸ್ಥೆಗಳು ಸಹಾಯ ಮಾಡುತ್ತವೆ

-ತೇಜಸ್ವಿ ಯಾದವ್‌, ಬಿಹಾರ ಉಪಮುಖ್ಯಮಂತ್ರಿ

ಮಹಾಘಟಬಂಧನ ರ್‍ಯಾಲಿಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಲು ಉದ್ದೇಶಿಸಲಾಗಿತ್ತು. ಈ ಕಾರಣಕ್ಕಾಗಿ ರಾಬ್ಡಿ ದೇವಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿದೆ

-ಶಿವಾನಂ‌ದ ತಿವಾರಿ, ರಾಷ್ಟ್ರೀಯ ಉಪಾಧ್ಯಕ್ಷ, ಆರ್‌ಜೆಡಿ

ಬಿಜೆಪಿ ಮುಂದೆ ಮಂಡಿಯೂರಲು ಸಮ್ಮತಿಸದ ವಿರೋಧ ಪಕ್ಷದ ನಾಯಕರಿಗೆ ಇ.ಡಿ., ಸಿಬಿಐ ಮೂಲಕ ಕಿರುಕುಳ ನೀಡಲಾಗುತ್ತದೆ

- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT