ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಎ– ಬಿಜೆಪಿ ನಡುವೆ ಅಪವಿತ್ರ ಮೈತ್ರಿ: ಟಿಎಂಸಿ ಆರೋಪ

Published 7 ಏಪ್ರಿಲ್ 2024, 15:17 IST
Last Updated 7 ಏಪ್ರಿಲ್ 2024, 15:17 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಬಿಜೆಪಿ ನಡುವೆ ಅಪವಿತ್ರ ಮೈತ್ರಿ ಇದ್ದು, ಈ ವಿಷಯದಲ್ಲಿ ಚುನಾವಣಾ ಆಯೋಗ ಮೌನವಹಿಸಿರುವುದು ಸ್ಪಷ್ಟವಾಗಿದೆ ಎಂದು ಟಿಎಂಸಿ ಭಾನುವಾರ ಆರೋಪಿಸಿದೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಸಿ ಅಭಿಷೇಕ್‌ ಬ್ಯಾನರ್ಜಿ, ಎನ್‌ಐಎ ಮತ್ತು ಬಿಜೆಪಿ ಮೈತ್ರಿಯು ಮಾದರಿ ನೀತಿ ಸಂಹಿತೆಯ ನಡುವೆಯೂ ಟಿಎಂಸಿ ನಾಯಕರ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ದೂರಿದ್ದಾರೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಚುನಾವಣಾ ಆಯೋಗ ಮೌನವಹಿಸಿದೆ. ಈ ಮೂಲಕ ಅದು ನ್ಯಾಯ ಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. 

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿಯ ಹಿರಿಯ ನಾಯಕ ಕುನಾಲ್‌ ಘೋಷ್‌ ಅವರು, ‘ಈ ಹಿಂದೆ ಟಿಎಂಸಿಯಲ್ಲಿದ್ದ ಪಶ್ಚಿಮ ಬರ್ಧಮಾನ್‌ ಜಿಲ್ಲೆಯ ಬಿಜೆಪಿಯ ಹಿರಿಯ ನಾಯಕರೊಬ್ಬರು ನಗರದ ನ್ಯೂ ಟೌನ್‌ ಪ್ರದೇಶದಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಚ್‌ 26ರಂದು ಎನ್‌ಐಎ ಎಸ್‌ಪಿಯನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಲೋಕಸಭೆ ಚುನಾವಣೆಗೂ ಮುನ್ನ ಎನ್‌ಐಎ ಬಂಧಿಸಬಹುದಾದ ಟಿಎಂಸಿ ನಾಯಕರ ಪಟ್ಟಿಯನ್ನು ಹಸ್ತಾಂತರಿಸಿದ್ದಾರೆ’ ಎಂದು ಆರೋ‍ಪಿಸಿದರು.

‘ಈ ನಾಯಕನಿಗೆ ಧೈರ್ಯವಿದ್ದರೆ ಪೂರಕ ಪುರಾವೆಗಳೊಂದಿಗೆ ನನ್ನ ಆರೋಪಗಳನ್ನು ನಿರಾಕರಿಸಲಿ. ಇಲ್ಲದಿದ್ದರೆ 48 ಗಂಟೆಗಳಲ್ಲಿ ನಾವೇ ಅವರ ಕರೆ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳ ಪುರಾವೆಗಳೊಂದಿಗೆ ಬರುತ್ತೇವೆ’ ಎಂದು ಘೋಷ್‌ ಸವಾಲು ಹಾಕಿದರು. 

ಬಿಜೆಪಿ ಪ್ರತಿಕ್ರಿಯೆ:

‘ನಾನಾಗಲಿ ಅಥವಾ ನಮ್ಮ ಪಕ್ಷದ ಯಾವುದೇ ನಾಯಕರಾಗಲಿ ಎನ್‌ಐಎ ತನಿಖೆಯ ಮೇಲೆ ಪ್ರಭಾವ ಬೀರಿದ್ದರೆ ಅಥವಾ ಯಾವುದೇ ಅಧಿಕಾರಿಗಳನ್ನು ಭೇಟಿಯಾಗಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಟಿಎಂಸಿ ನಾಯಕ ಕುನಾಲ್‌ ಘೋಷ್‌ ಪ್ರಸ್ತುತಪಡಿಸಲಿ. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಅಸನ್ಸೂಲ್‌ನ ಮಾಜಿ ಮೇಯರ್‌, ಬಿಜೆಪಿಯ ಹಿರಿಯ ನಾಯಕ ಜಿತೇಂದ್ರ ತಿವಾರಿ ಪ್ರತಿಕ್ರಿಯಿಸಿದ್ದಾರೆ. 

ಎನ್‌ಐಎ ಅಧಿಕಾರಿಗಳ ವಿರುದ್ಧ ಟಿಎಂಸಿ ನಾಯಕ ಪತ್ನಿ ದೂರು

ತನಿಖೆ ನಡೆಸುವ ನೆಪದಲ್ಲಿ ಎನ್‌ಐಎ ಅಧಿಕಾರಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಂಧಿತ ಟಿಎಂಸಿ ನಾಯಕ ಮನೊಬ್ರತಾ ಜಾನಾ ಅವರ ಪತ್ನಿ ಮೋನಿ ಜಾನಾ ದೂರು ನೀಡಿದ್ದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ಅದಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಭೂಪತಿನಗರದ ಮನೆಯೊಂದರಲ್ಲಿ 2022ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಸಂಚುಕೋರರಾದ ಬಾಲೈ ಚರಣ್‌ ಮೈತಿ ಮತ್ತು ಮನೋಬ್ರತಾ ಜಾನಾ ಅವರನ್ನು ಎನ್‌ಐಎ ತಂಡ ಶನಿವಾರವಷ್ಟೇ ಬಂಧಿಸಿತ್ತು. ಈ ಸಂಬಂಧ ದೂರು ನೀಡಿರುವ ಮಹಿಳೆಯು ಶನಿವಾರ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಹಾಳು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಐಪಿಸಿ ಕಲಂ 354 ದಾಖಲಿಸಲಾಗಿದ್ದು ದೂರನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಭೂಪತಿನಗರದಲ್ಲಿ ಜನರ ಗುಂಪು ತನ್ನ ಮೇಲೆ ದಾಳಿ ನಡೆಸಿದ್ದು ಒಬ್ಬ ಅಧಿಕಾರಿಗೆ ಗಾಯವಾಗಿ ವಾಹನವೊಂದಕ್ಕೆ ಹಾನಿಯಾಗಿದೆ ಎಂದು ಎನ್‌ಐಎ ಶನಿವಾರ ದೂರು ದಾಖಲಿಸಿತ್ತು. ಈ ಸಂಬಂಧ ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ ಎಂದಿರುವ ಪೊಲೀಸರು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

‘ರಾಜ್ಯದ ಕೆಲ ಪ್ರದೇಶಗಳು ಗೂಂಡಾಗಳ ನಿಯಂತ್ರಣದಲ್ಲಿವೆ’

ರಾಜ್ಯದ ಕೆಲವು ಭಾಗಗಳಲ್ಲಿ ಹಿಂಸಾಚಾರ ಕಾಣಿಸಿಕೊಂಡ ಮಾತ್ರಕ್ಕೆ ಇಡೀ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಲಾಗದು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಹೆಳಿದ್ದಾರೆ. ಅಲ್ಲದೆ ಈ ಹಿಂಸಾಚಾರಕ್ಕೆ ಟಿಎಂಸಿ ಸರ್ಕಾರವನ್ನು ಸಂಪೂರ್ಣವಾಗಿ ದೂಷಿಸಲೂ ಆಗುವುದಿಲ್ಲ. ಏಕೆಂದರೆ ಇದಕ್ಕೆ ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆ ಕಾರಣವಾಗಿರಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.  ‘ಇಡೀ ರಾಜ್ಯದಲ್ಲೇನು ಕಾನೂನು ಸುವ್ಯವಸ್ಥೇ ಹದಗೆಟ್ಟಿಲ್ಲ ಆದರೆ ಗೂಂಡಾಗಳು ಕೆಲ ಪ್ರದೇಶಗಳನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆಗೆ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದೆ ನಮ್ಮ ಗ್ರಹಿಕೆಗಳೂ ಭಿನ್ನವಾಗಿರಬಹುದು ಆದರೆ ನಾವು ಪರಸ್ಪರರನ್ನು  ಗೌರವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ದುರುದ್ದೇಶಿತ ದಾಳಿಯಲ್ಲ: ಎನ್‌ಐಎ

ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಎನ್‌ಐಎ ನಡೆಸಿದ ದಾಳಿಯು ದುರುದ್ದೇಶಪೂರಿತವಾಗಿತ್ತು ಎಂಬ ಆರೋಪವನ್ನು ಬಲವಾಗಿ ನಿರಾಕರಿಸಿರುವ ಎನ್‌ಐಎ ಇಡೀ ವಿವಾದವನ್ನು ದುರುದೃಷ್ಟಕರ ಎಂದು ಕರೆದಿದೆ. ಎನ್‌ಐಎ ಪ್ರಾಮಾಣಿಕ ಕಾನೂನುಬದ್ಧವಾಗಿ ತನ್ನ ಕ್ರಮಗಳನ್ನು ತೆಗೆದುಕೊಂಡಿದೆ. ತಂಡವು ನರುಅಬಿಲ ಗ್ರಾಮದಲ್ಲಿ ಶೋಧ ನಡೆಸುತ್ತಿದ್ದಾಗ ಜನರ ಗುಂಪೊಂದು ತಂಡದ ಮೇಲೆ ಹಿಂಸಾತ್ಮಕ ದಾಳಿ ನಡೆಸಿತು ಎಂದು ಎನ್‌ಐಎ ಪುನರುಚ್ಚರಿಸಿದೆ. ‘ಎನ್‌ಐಎ ತಂಡದ ಮೇಲೆ ನಡೆದ ಈ ದಾಳಿಯು ಸಂಪೂರ್ಣ ಅಪ್ರಚೋದಿತವಾಗಿತ್ತು. ಎನ್‌ಐಎ ತನ್ನ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯುವ ಪ್ರಯತ್ನವಾಗಿತ್ತು’ ಎಂದು ಅದು ಹೇಳಿದೆ. ‘ಸ್ವತಂತ್ರ ಸಾಕ್ಷಿಗಳ ಎದುರು ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಸಿಆರ್‌ಪಿಎಫ್‌ನ ಭದ್ರತೆ ಅಡಿಯಲ್ಲಿ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿದ ಬಳಿಕವೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಎನ್‌ಐಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT