ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದಿಂದ ಸಂಸತ್ತಿನ ನಾಶ: ವಿವಿಧ ಕ್ಷೇತ್ರಗಳ ಪ್ರಮುಖರಿಂದ ಆರೋಪಪಟ್ಟಿ

Published 9 ಫೆಬ್ರುವರಿ 2024, 19:47 IST
Last Updated 9 ಫೆಬ್ರುವರಿ 2024, 19:47 IST
ಅಕ್ಷರ ಗಾತ್ರ

ನವದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಸತ್ತು ಬಹುಮುಖ್ಯವಾದ ಆಧಾರಸ್ತಂಭ. ಆದರೆ, ಈಗಿನ ಕೇಂದ್ರ ಸರ್ಕಾರ ಈ ಆಧಾರಸ್ತಂಭವನ್ನೇ ಆಮೂಲಾಗ್ರವಾಗಿ ನಾಶಪಡಿಸಿದೆ ಎಂದು ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಹೇಗೆ ಈ ಆಧಾರಸ್ತಂಭವನ್ನು ನಾಶಪಡಿಸಿದೆ ಎಂಬುದಕ್ಕೆ ಪುರಾವೆಗಳು ಒಳಗೊಂಡಂತೆ ಆರೋಪಪಟ್ಟಿಯನ್ನು ಆನ್‌ಲೈನ್‌ ವೇದಿಕೆಯಲ್ಲಿ ಈ ಪ್ರಮುಖರು ಗುರುವಾರ ಬಿಡುಗಡೆ ಮಾಡಿದರು.

ಸಂಸತ್ತನ್ನು ಬಹುಸಂಖ್ಯಾತರ ಮತ್ತು ಅಪ್ರಜಾಸತ್ತಾತ್ಮಕ ಕಾನೂನು ರಚನೆಗೆ ವೇದಿಕೆಯಾಗಿ ಬಳಸಿಕೊಳ್ಳಲು ಸರ್ಕಾರ ಎಲ್ಲ ಸಾಂವಿಧಾನಿಕ ನಿಬಂಧನೆಗಳು, ಕಾರ್ಯ ವಿಧಾನಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಇಂತಹ ಕ್ರಮಗಳಿಂದ ಸಂಸದೀಯ ಪ್ರಜಾಪ್ರಭುತ್ವವನ್ನು ಹೀಗೆ ದುರ್ಬಲಗೊಳಿಸುವುದರಿಂದ ಪ್ರಜಾಪ್ರಭುತ್ವವೇ ನಾಶವಾಗಿಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಸಂಸದೀಯ ಪ್ರಜಾಪ್ರಭುತ್ವದ ದಿಕ್ಕುತಪ್ಪಿಸುತ್ತಿರುವ ಮತ್ತು ದುರ್ಬಲಗೊಳಿಸುತ್ತಿರುವ ಭಾರತ ಸರ್ಕಾರದ ವಿರುದ್ಧದ ಈ ಆರೋಪಪಟ್ಟಿಗೆ ‘ಭಾರತದ ಜನತೆಯಾದ ನಾವು v/s  ಭಾರತ ಸರ್ಕಾರ’ ಎಂದು ಹೆಸರಿಸಲಾಗಿದೆ.

22 ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ 20 ಮಂದಿ ಪ್ರಮುಖರು ಈ ಆರೋಪಪಟ್ಟಿಗೆ ಸಹಿ ಹಾಕಿದ್ದಾರೆ. ಗುರುವಾರ ಆನ್‌ಲೈನ್‌ ಪತ್ರಿಕಾಗೋ ಷ್ಟಿಯಲ್ಲಿ ಇದನ್ನು ಬಿಡುಗಡೆ ಮಾಡಿದರು.

ಸಂವಿಧಾನ ನಡೆ ಸಮೂಹದ ಸುಬೋಧ್ ಲಾಲ್, ಸ್ವಾತಿ ನಾರಾಯಣ್, ಸಿಟಿಜನ್‌ ಆಫ್‌ ಇಂಡಿಯಾದ ಕೃಷಿಕರಾದ ಉಮಾ ಶಂಕರಿ, ಹೆಲ್ತ್‌ ರೈಟ್ಸ್‌ನ ಡಾ. ಸುಹಾಸ್‌ ಕೊಲ್ಹೇಕರ್, ನಿವೃತ್ತ ಅಧಿಕಾರಿ ಸುಂದರ್‌ ಬುರ್ರಾ, ಆಶೀಶ್‌ ಕೊಥಾರಿ, ದಿನೇಶ್‌ ಅಬ್ರೋಲ್‌, ನಿಖಿಲ್‌ ಡೇ, ಎನ್‌.ಡಿ.ಜಯಪರಕಾಸ್, ನರ್ಮದಾ ಬಚಾವೊ ಆಂದೋಲನದ ಮೇಧಾ ಪಾಟ್ಕರ್, ಹಿರಿಯ ಪರಿಸರ ಕಾರ್ಯಕರ್ತೆ ಸೌಮ್ಯ ದತ್ತಾ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಕೊಣಿನಿಕಾ ರೇ ಅವರು ಸಹಿ ಹಾಕಿದ್ದಾರೆ.

ಅಲ್ಲದೆ, ಅಖಿಲ ಭಾರತ ವಕೀಲರ ಸಂಘಟನೆ, ಅಖಿಲ ಭಾರತ ಪೀಪಲ್ಸ್ ಸೈನ್ಸ್‌ ನೆಟ್‌ವರ್ಕ್, ಎಪಿಸಿಆರ್‌, ಬಹುತ್ವ ಕರ್ನಾಟಕ, ದೆಹಲಿ ಸೈನ್ಸ್ ಫೋರಂ, ಜನ ಸರೋಕರ್, ಮಾಧ್ಯಮ ಬೆಂಬಲ ವ್ಯಕ್ತಪಡಿಸಿರುವ ಸಂಘಟನೆಗಳಲ್ಲಿ ಸೇರಿವೆ. 

ಪ್ರಮುಖರು ಪಟ್ಟಿ ಮಾಡಿರುವ ಆರೋಪಗಳು: 

–ಲೋಕಸಭೆ ಕಲಾಪದ ಅವಧಿ ಮೊಟಕುಗೊಳಿಸಲಾಗಿದೆ. ಕಾರ್ಯನೀತಿಗಳ ಚರ್ಚೆ ಸಂವಾದಕ್ಕೆ ಅವಕಾಶವನ್ನು ಈ ಮೂಲಕ ಮೊಟಕುಗೊಳಿಸಲಾಗಿದೆ.

–ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ 17ನೇ ಲೋಕಸಭೆ ಅವಧಿಯಲ್ಲಿ ಉಪಸಭಾಪತಿ ಆಯ್ಕೆಯಾಗಿಲ್ಲ. ಇದು ಸಂವಿಧಾನದ 93ನೇ ಕಲಂನ ನೇರ ಉಲ್ಲಂಘನೆಯಾಗಿದೆ.

–2009–14ರ ನಡುವೆ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಗಳಲ್ಲಿ ಶೇ 71ರಷ್ಟು ಮಸೂದೆಗಳನ್ನು ಹೆಚ್ಚಿನ ಚರ್ಚೆ, ವಿಶ್ಲೇಷಣೆಗಾಗಿ ಸ್ಥಾಯಿ ಸಮಿತಿಗಳಿಗೆ ಒಪ್ಪಿಸಲಾಗಿತ್ತು. 2016ರ ನಂತರದಲ್ಲಿ ಶೇ 16ರಷ್ಟು ಮಾತ್ರ ಒಪ್ಪಿಸಲಾಗಿದೆ.

–ಕೂಲಂಕಷ ಪರಿಶೀಲನೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸುಗ್ರೀವಾಜ್ಞೆಗಳ ಮೂಲಕ ಶಾಸನಗಳ ಬದಲಾವಣೆ ಮೂಲಕ ಸರ್ಕಾರವು ಸಂಸದೀಯ ವಿಶ್ಲೇಷಣೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದೆ.

–ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಒಂದು ‘ಅಪೂರ್ವ’ ವಿಧಾನವೆಂದರೆ ಸಂಸದರ ಪ್ರಶ್ನೆಗಳನ್ನೇ ಕಲಾಪಪಟ್ಟಿಯಿಂದ ಕಿತ್ತುಹಾಕುವುದು. ಕಾನೂನಿನಲ್ಲಿ ಇದಕ್ಕೆ ಅವಕಾಶವೇ ಇಲ್ಲದಿದ್ದರೂ ಹೀಗೆ ಮಾಡಲಾಗುತ್ತಿದೆ.

–2015, 2020, 2021, 2023ರಲ್ಲಿ  ಸರ್ಕಾರ ಹೀಗೆ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳನ್ನು ಕಿತ್ತುಹಾಕಿದೆ.

–ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಾತ್ರಿಗೆ ಅಳವಡಿಸಿಕೊಂಡಿದ್ದ ಎಲ್ಲ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿರುವ ಸರ್ಕಾರದ ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡೆಗಳನ್ನು ಅನುಸರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT