ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯವರ ಜಾತಿ OBC ಪಟ್ಟಿಗೆ ಸೇರಿಸಿದ್ದು ಗುಜರಾತ್‌ನ ಕಾಂಗ್ರೆಸ್ ಸರ್ಕಾರ: ಅಮಿತ್

Published 10 ಫೆಬ್ರುವರಿ 2024, 10:11 IST
Last Updated 10 ಫೆಬ್ರುವರಿ 2024, 10:11 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಚರ್ಚೆಯ ವಿಷಯವಾಗುತ್ತಿರುವುದು ದುರದೃಷ್ಟಕರ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಾರ್ವಜನಿಕವಾಗಿ ಸುಳ್ಳು ಹೇಳುವ ಚಾಳಿ ಇದ್ದು, ಅದನ್ನೇ ಪುನರಾವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

1991ರಲ್ಲಿ ಗುಜರಾತ್‌ನ ಕಾಂಗ್ರೆಸ್ ಸರ್ಕಾರವು ಮೋದಿ ಅವರ ಜಾತಿಯನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಿತ್ತು. 2000ನೇ ಇಸವಿಯಲ್ಲಿ ಕೇಂದ್ರವು ಮೋದಿ ಅವರ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿತ್ತು ಎಂದು ಅವರು ಹೇಳಿದರು.

1994 ಜುಲೈ 25ರಂದು ಮೋದಿಯವರ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು. ಅಂದು ಗುಜರಾತ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಅಲ್ಲಿಯವರೆಗೆ ಮೋದಿ ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಸಂಘಟನೆಯ ಕೆಲಸ ಮಾತ್ರ ಮಾಡುತ್ತಿದ್ದರು. ಅವರ ಜಾತಿ ಬಗ್ಗೆ ಪ್ರಶ್ನೆಯೇ ಉದ್ಭವಿಸಿರಲಿಲ್ಲ ಎಂದು ಅವರು ಹೇಳಿದರು.

ಇದಾದ ಬಳಿಕ ಗುಜರಾತ್ ಸರ್ಕಾರವು ಮೋದಿಯವರ ಜಾತಿಯನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿತ್ತು. ಅಂತಿಮವಾಗಿ 2000ರಲ್ಲಿ ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು. ಆ ಸಮಯದಲ್ಲಿ ಮೋದಿ ಅಧಿಕಾರದಲ್ಲಿರಲಿಲ್ಲ. ಶಾಸಕ ಅಥವಾ ಸರಪಂಚ ಕೂಡ ಆಗಿರಲಿಲ್ಲ. ಅವರು 2001ರಲ್ಲಿ ಮುಖ್ಯಮಂತ್ರಿ ಆಗಿದ್ದರು. ಈ ಜನರಿಗೆ (ರಾಹುಲ್ ಗಾಂಧಿ ಉದ್ದೇಶಿಸಿ) ಸತ್ಯವನ್ನು ತಿರುಚುವ ಅಭ್ಯಾಸವಿದೆ ಎಂದು ಅಮಿತ್ ಶಾ ಆರೋಪಿಸಿದರು.

ಮೋದಿಯಂತಹ ಮಹಾನ್ ನಾಯಕರ ಜಾತಿ ಬಗ್ಗೆ ಚರ್ಚೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ರಾಹುಲ್ ಗಾಂಧಿ ಅವರಿಗೆ ಜಾತಿ ಹಾಗೂ ವಿಭಾಗದ ಬಗ್ಗೆ ವ್ಯತ್ಯಾಸ ತಿಳಿದಿಲ್ಲ. ಮೋದಿ ಅವರು ಒಬಿಸಿ ಎಂದು ಹೇಳಿದ್ದಾರೆ. ಒಬಿಸಿ ಒಂದು ವಿಭಾಗವಾಗಿದ್ದು ಜಾತಿ ಅಲ್ಲ. ಬಹುಶಃ ರಾಹುಲ್ ಗಾಂಧಿ ಅವರಿಗೆ ಪಾಠ ಮಾಡಿದ ಶಿಕ್ಷಕರು ಈ ಕುರಿತು ಹೇಳಿ ಕೊಟ್ಟಿಲ್ಲ ಎಂದು ಕಾಲೆಳೆದರು.

ಒಬಿಸಿಗೆ ಸಾಂವಿಧಾನಿಕ ಮಾನ್ಯತೆ ನೀಡಿದ್ದು ಮೋದಿ ಅವರಾಗಿದ್ದಾರೆ. ಎಲ್ಲ ಕೇಂದ್ರೀಯ ಪರೀಕ್ಷೆಗಳಲ್ಲಿ ಒಬಿಸಿಗೆ ಮೀಸಲಾತಿ ತಂದವರು ಕೂಡ ಮೋದಿ ಆಗಿದ್ದಾರೆ. ಕಾಂಗ್ರೆಸ್ ಯಾವತ್ತೂ ಕೂಡ ಒಬಿಸಿ ವಿರೋಧಿ ಪಕ್ಷವಾಗಿದೆ ಎಂದು ದೂರಿದ್ದಾರೆ.

ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ, ಒಬಿಸಿ ಕುಟುಂಬದಲ್ಲಿ ಜನಿಸದ ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಒಬಿಸಿ ಎಂದು ಗುರುತಿಸಿಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT