ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕೆ.ಸಿ.ವೇಣುಗೋಪಾಲ್‌ ನೇತೃತ್ವ

ಐದು ಸಂಸದೀಯ ಸಮಿತಿಗಳ ರಚನೆ
Published : 17 ಆಗಸ್ಟ್ 2024, 14:03 IST
Last Updated : 17 ಆಗಸ್ಟ್ 2024, 14:03 IST
ಫಾಲೋ ಮಾಡಿ
Comments

ನವದೆಹಲಿ: ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ನೇತೃತ್ವ ವಹಿಸಲಿದ್ದಾರೆ ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಪಿಎಸಿ ಸೇರಿದಂತೆ ಒಟ್ಟು ಐದು ಸಮಿತಿಗಳನ್ನು ರಚಿಸಿದ್ದು, ಲೋಕಸಭೆ ಸಚಿವಾಲಯವು ಶುಕ್ರವಾರ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕ ಉದ್ಯಮಗಳ ಸಮಿತಿ ಮತ್ತು ಅಂದಾಜು ಸಮಿತಿಗಳಿಗೆ ಬಿಜೆಪಿ ನಾಯಕರು ಅಧ್ಯಕ್ಷರಾಗಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ, ಸಾರ್ವಜನಿಕ ಉದ್ಯಮ ಮತ್ತು ಅಂದಾಜು ಸಮಿತಿಗಳು ಸರ್ಕಾರದ ಲೆಕ್ಕಪತ್ರಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡುವಂತಹ ಸಂಸತ್ತಿನ ಪ್ರಮುಖ ಮೂರು ಹಣಕಾಸು ಸಮಿತಿಗಳಾಗಿವೆ.

ಅಂದಾಜು ಸಮಿತಿಯ ಮುಖ್ಯಸ್ಥರಾಗಿ ಬಿಜೆಪಿಯ ಸಂಜಯ್‌ ಜೈಸ್ವಾಲ್‌ ನೇಮಕಗೊಂಡರೆ, ಅದೇ ಪಕ್ಷದ ಬೈಜಯಂತ್‌ ಪಾಂಡಾ ಅವರು ಸಾರ್ವಜನಿಕ ಉದ್ಯಮಗಳ ಸಮಿತಿಯನ್ನು ಮುನ್ನಡೆಸಲಿದ್ದಾರೆ.

ಬಿಜೆಪಿಯ ಗಣೇಶ್‌ ಸಿಂಗ್‌ ಅವರು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕಲ್ಯಾಣ ಸಮಿತಿ ಹಾಗೂ ಫಗ್ಗನ್‌ ಸಿಂಗ್‌ ಕುಲಸ್ತೆ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.

ಈ ಸಮಿತಿಗಳು ಒಂದು ವರ್ಷದ ಅಧಿಕಾರಾವಧಿ ಹೊಂದಿವೆ. ‍ಪಿಎಸಿಗೆ ಸಾಧಾರಣವಾಗಿ ಲೋಕಸಭೆಯ ವಿರೋಧ ಪಕ್ಷದ ಹಿರಿಯ ಸದಸ್ಯರೊಬ್ಬರು ನೇತೃತ್ವ ವಹಿಸುವರು. ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಅವರು ಕಳೆದ ಐದು ವರ್ಷ ಈ ಸಮಿತಿಯ ಅಧ್ಯಕರಾಗಿದ್ದರು. ಈ ಬಾರಿ ಎಲ್ಲ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT